ಮೇಲ್ಮಟ್ಟದ ಜಲಾಗಾರಗಳನ್ನು ಪ್ರತಿ ತಿಂಗಳು ಶುಚಿಗೊಳಿಸಿ: ಸಿಇಓ ಸೂಚನೆ

You are currently viewing ಮೇಲ್ಮಟ್ಟದ ಜಲಾಗಾರಗಳನ್ನು ಪ್ರತಿ ತಿಂಗಳು ಶುಚಿಗೊಳಿಸಿ: ಸಿಇಓ ಸೂಚನೆ

ಕೊಪ್ಪಳ : ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ರಾಹುಲ್ ರತ್ನಂ ಪಾಂಡೆಯ ಅವರ ಅಧ್ಯಕ್ಷತೆಯಲ್ಲಿ ಜಿಪಂ ಸಮಿತಿ ಕೊಠಡಿಯಲ್ಲಿ ಇತ್ತೀಚೆಗೆ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ನಡೆಯಿತು. ಇದೇ ವೇಳೆ ಮಾತನಾಡಿದ ಸಿಇಓ ಅವರು, ಕುಡಿಯುವ ನೀರಿನ ಸಮಸ್ಯೆಗಳು ಉಲ್ಬಣಗೊಂಡರೆ ಇದರ ಬಗ್ಗೆ ಪ್ರತಿ ವಾರಕ್ಕೊಮ್ಮೆ ಸಭೆ ನಡೆಸಿ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳ ಹಂತದಲ್ಲಿ ಕ್ರಮಕೈಗೊಳ್ಳಬೇಕು ಎಂದು ಸೂಚನೆ ನೀಡಿದರು.

ಈಗಾಗಲೇ ಎಲ್ಲಾ ಗ್ರಾಮ ಪಂಚಾಯತಿಗಳಲ್ಲಿ ಎಫ್.ಟಿ.ಕೆ. ಕಿಟ್ ಹಾಗೂ ಹೆಚ್.2ಎಸ್. ಕಿಟ್‌ಗಳನ್ನು ನೀಡಲಾಗಿದೆ. ಅವುಗಳ ಮುಖಾಂತರ ನೀರಿನ ಗುಣಮಟ್ಟವನ್ನು ಪರೀಕ್ಷಿಸಲಾಗುತ್ತಿದ್ದು, ನೀರು ಗುಣಮಟ್ಟದಲ್ಲಿ ಕುಡಿಯಲು ಯೋಗ್ಯವಿಲ್ಲವೆಂದು ಕಂಡುಬಂದಲ್ಲಿ ತಕ್ಷಣ ಅಂತಹ ನೀರನ್ನು ಬಳಕೆ ಮಾಡದಂತೆ ತ್ವರಿತ ಕ್ರಮವಹಿಸಬೇಕು. ಎಲ್ಲಾ ಗ್ರಾಮಗಳಲ್ಲಿರುವ ಓ.ಹೆಚ್.ಟಿ ಟ್ಯಾಂಕನ್ನು ಪ್ರತಿ ತಿಂಗಳು ಸ್ವಚ್ಛತೆ ಮಾಡಬೇಕು. ಗ್ರಾಮಗಳಲ್ಲಿ ಈಗಾಗಲೇ ಸರಬರಾಜು ಮಾಡುತ್ತಿರುವ ನೀರಿನ ಪೈಪಲೈನ್‌ಗಳಲ್ಲಿ ಯಾವುದೇ ರೀತಿಯ ಸೋರಿಕೆ ಕಂಡು ಬಂದಲ್ಲಿ 24 ಗಂಟೆಗಳಲ್ಲಿ ದುರಸ್ಥಿಗೊಳಿಸಿ ನೀರು ಪೂರೈಕೆಯಾಗುವಂತೆ ಸಂಬಂದಪಟ್ಟ ಅಧಿಕಾರಿಗಳು ನೋಡಿಕೊಳ್ಳಬೇಕು ಎಂದು ಸೂಚನೆ ನೀಡಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿಗಳಾದ ಮಲ್ಲಪ್ಪ ತೊದಲಬಾಗಿ ಸೇರಿದಂತೆ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳು, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಅಧಿಕಾರಿಗಳು ಮತ್ತಿತರರು ಉಪಸ್ಥಿತರಿದ್ದರು.

Leave a Reply

error: Content is protected !!