ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯ ( ICC-ಐಸಿಸಿ) ಪ್ರತಿಷ್ಠಿತ ಕ್ರಿಕೆಟ್ ವಿಶ್ವಕಪ್ 2023 ತನ್ನ ಮುಕ್ತಾಯದತ್ತ ಸಾಗಿದ್ದು, ವಿಶ್ವಕಪ್‌ನ ಅಂತಿಮ ಪಂದ್ಯ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆಯಲಿದೆ. ಈ ಉಭಯ ತಂಡಗಳ ನಡುವಿನ ಈ ಅಂತಿಮ ಪಂದ್ಯ ಇಂದು (ನವೆಂಬರ್ 19) (ಭಾನುವಾರ) ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿದೆ. ರೋಹಿತ್ ಶರ್ಮಾ ನೇತೃತ್ವದ ಭಾರತ ತಂಡ ಮೂರನೇ ಬಾರಿಗೆ ಪ್ರಶಸ್ತಿ ಗೆಲ್ಲಲು ಸಂಪೂರ್ಣ ಸಜ್ಜಾಗಿದೆ.
ಪ್ರಸಕ್ತ ವಿಶ್ವಕಪ್‌ನಲ್ಲಿ ಭಾರತ ಸತತ ಹತ್ತು ಪಂದ್ಯಗಳನ್ನ ಗೆದ್ದುಕೊಂಡಿದ್ದರೆ, ಆಸ್ಟ್ರೇಲಿಯಾ ತಂಡವೂ ಕಳಪೆ ಆರಂಭದ ನಂತರ ಸತತ ಎಂಟು ಪಂದ್ಯಗಳನ್ನ ಗೆದ್ದಿದೆ. ಅಂದರೆ ಎರಡೂ ತಂಡಗಳು ಉತ್ತಮವಾಗಿದೆ. ಗ್ರೂಪ್ ಪಂದ್ಯದಲ್ಲಿ ಉಭಯ ತಂಡಗಳು ಮುಖಾಮುಖಿಯಾದಾಗ ಭಾರತ ಆರು ವಿಕೆಟ್‌ಗಳಿಂದ ಗೆದ್ದಿತ್ತು. ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಮತ್ತು ಮೊಹಮ್ಮದ್ ಶಮಿ, ಜಪ್ರೀತ್ ಬುಮ್ರಾ ಸೇರಿದಂತೆ ಎಲ್ಲಾ ಭಾರತೀಯ ಆಟಗಾರರು ಉತ್ತಮ ಫಾರ್ಮ್‌ನಲ್ಲಿದ್ದಾರೆ. ಹೀಗಿರುವಾಗ ಫೈನಲ್ ಪಂದ್ಯದಲ್ಲೂ ಟೀಂ ಇಂಡಿಯಾ ಆಸ್ಟ್ರೇಲಿಯದ ವಿರುದ್ಧ ಮೇಲುಗೈ ಸಾಧಿಸುವ ಸಾದ್ಯತೆ ಇದೆ ಎಂದು ತಿಳಿದು ಬಂದಿದೆ.
ಭಾರತ ತಂಡ ಕೊನೆಯ ಬಾರಿಗೆ 2011ರಲ್ಲಿ ವಿಶ್ವಕಪ್ ಗೆದ್ದಿತ್ತು. ಬಳಿಕ ಅವರು 2015 ಮತ್ತು 2019ರ ಕ್ರಿಕೆಟ್ ವಿಶ್ವಕಪ್’ಗಳಲ್ಲಿ ಸೆಮಿಫೈನಲ್ ಹಂತವನ್ನ ಮೀರಿ ಮುನ್ನಡೆಯಲು ಸಾಧ್ಯವಾಗಲಿಲ್ಲ. ಇದೀಗ ಟೀಂ ಇಂಡಿಯಾ ಈ ಬಾರಿ ಪ್ರಶಸ್ತಿ ಬರ ಖಂಡಿತಾ ಕೊನೆಗಾಣಿಸುತ್ತದೆ ಎಂದು
ಕ್ರಿಕೆಟ್ ಅಭಿಮಾನಿಗಳು ನಂಬಿದ್ದಾರೆ. ಇದೀಗ 2011ರಂತೆ ಈ ಬಾರಿಯೂ ಟೀಂ ಇಂಡಿಯಾ ಪ್ರಶಸ್ತಿ ಗೆಲ್ಲುವಲ್ಲಿ ಯಶಸ್ವಿಯಾಗಲಿದೆ ಎನ್ನುವ ಮಾತುಗಳು ಕ್ರೀಡಾಲೋಕದಲ್ಲಿ ಕೇಳಿ ಬರುತ್ತಿವೆ.