ಕೊಪ್ಪಳ : ಕೊಪ್ಪಳ ನಗರದಲ್ಲಿ ಲೋಕಾಯುಕ್ತ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಲೇಔಟ್ಗೆ ಪರವಾನಗಿ ನೀಡಲು ಲಂಚ ಕೇಳಿದ್ದ ಅಧಿಕಾರಿಯೊಬ್ಬರನ್ನು ಬಂಧಿಸಿದ್ದಾರೆ ಎಂದು ಮಾಹಿತಿ ತಿಳಿದು ಬಂದಿದೆ. ಕೊಪ್ಪಳ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದಲ್ಲಿರುವ ಕಚೇರಿಯಲ್ಲಿ ಲಂಚ ಪಡೆಯುತ್ತಿದ್ದಾಗ ಅಧಿಕಾರಿಯೊಬ್ಬರು ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಬಂಧಿತ ಅಧಿಕಾರಿಯನ್ನು ಕೊಪ್ಪಳ ನಗರ ಮತ್ತು ಗ್ರಾಮಾಂತರ ಯೋಜನೆ ಇಲಾಖೆಯ ರಮೇಶ್ ಬಸವನಗೌಡ ಎಂದು ಗುರುತಿಸಲಾಗಿದೆ.
ರಮೇಶ್ ಎಂಬಾತ ಈ ಇಲಾಖೆಯಲ್ಲಿ ಟೌನ್ ಪ್ಲ್ಯಾನರ್ ಆಗಿ ಕಾರ್ಯನಿರ್ವಹಣೆ ಮಾಡುತ್ತಿದ್ದರು. ಲೇಔಟ್ ಪರವಾನಗಿ ನೀಡಲು 8 ಲಕ್ಷ ರೂ.ಗೆ ವ್ಯಕ್ತಿಯೊಬ್ಬರ ಬಳಿ ಡಿಮ್ಯಾಂಡ್ ಮಾಡಿದ್ದರು. ಖಾಸಗಿ ಸಹಾಯಕನ ಮೂಲಕ ಹಣಕ್ಕೆ ಡಿಮ್ಯಾಂಡ್ ಇಟ್ಟಿದ್ದರು. ಕೊಪ್ಪಳ ಜಿಲ್ಲೆಯ ಕುಕನೂರ ಮೂಲದ ರವಿಚಂದ್ರ ಅನ್ನೋರ ಬಳಿ ಹಣಕ್ಕೆ ಬೇಡಿಕೆ ಇಟ್ಟಿದ್ದರು ಎಂದು ತಿಳಿದು ಬಂದಿದೆ.
ರವಿಚಂದ್ರ ಎಂಬವರಿಂದ ಮೂರು ಲಕ್ಷ ರೂ. ಹಣ ಪಡೆಯುವಾಗ ರೆಡ್ ಹ್ಯಾಂಡ್ ಆಗಿ ರಮೇಶ್ ಬಲೆಗೆ ಬಿದ್ದಿದ್ದಾರೆ. ಕೊಪ್ಪಳ ಲೋಕಾಯುಕ್ತ ಪಿಐ ಸುನೀಲ್ ಮೇಗಲಮನಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ. ರಾಯಚೂರು ಲೋಕಯುಕ್ತ ಎಸ್ಪಿ ಮಾರ್ಗದರ್ಶನದಲ್ಲಿ ಈ ದಾಳಿ ನಡೆದಿದೆ.