PV ನ್ಯೂಸ್ ಕೊಪ್ಪಳ : ಇಂದಿನ ಡಿಜಿಟಲ್ ಮಾಧ್ಯಮದ ಯುಗದಲ್ಲಿ ಆರ್ಟಿಫಿಷಿಯಲ್ ಇಂಟೆಲಿಜೆನ್ಸಿ ( AI) ಕೃತಕ ಬುದ್ದಿಮತ್ತೆ ಬಹಳ ಸದ್ದು ಮಾಡುತ್ತಿದೆ. ಸುದ್ದಿಯ ವೇಗ, ಧಾವಂತದಲ್ಲಿ ಏನೋ ಮಾಡಲು ಹೋಗಿ ಇನ್ನೇನೋ ಆಗುತ್ತಿದೆ. ಇದರ ನಿಯಂತ್ರಣ ನಮ್ಮ ಕೈಯಲ್ಲೇ ಇದೆ. ಇದರ ಅಡ್ಡ ಪರಿಣಾಮಗಳ ಯುವ ಜನತೆ ಎಚ್ಚರ ವಹಿಸಬೇಕಿದೆ ಎಂದು ಕೊಪ್ಪಳ ವಿಶ್ವವಿದ್ಯಾಲಯದ ಕುಲಪತಿ ಡಾ . ಬಿ ಕೆ ರವಿ ಅಭಿಪ್ರಾಯ ಪಟ್ಟಿದ್ದಾರೆ.
ಕೊಪ್ಪಳ ನಗರದಲ್ಲಿ ಬಹುತ್ವ ಮೀಡಿಯಾ ಹೌಸ್ ಹಮ್ಮಿಕೊಂಡಿದ್ದ ಕೋಪಣ ಮೀಡಿಯಾ ಫೆಸ್ಟ್ ನ ಎರಡನೇ ದಿನದ ಕಾರ್ಯಕ್ರಮದಲ್ಲಿ ವಿವಿಧ ಸ್ಪರ್ಧೆಯಲ್ಲಿ ಪಾಲ್ಗೊಂಡು ವಿಜೇತರಾದ ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮಾಡಿ ಅವರು ಮಾತನಾಡಿದರು.
ಯುವ ಸಮೂಹ ಅದರಲ್ಲೂ ಪತ್ರಿಕೋದ್ಯಮ ವಿದ್ಯಾರ್ಥಿಗಳು, ಮಾಧ್ಯಮ ಪ್ರತಿನಿಧಿಗಳು ಆರ್ಟಿಫಿಷಿಯಲ್ ಇಂಟೆಲಿಜೆನ್ಸಿ ಬಳಕೆಯಲ್ಲಿ ಎಚ್ಚರ ವಹಿಸುವುದು ಉತ್ತಮ, ತಂತ್ರಜ್ಞಾನದಿಂದ ಒಳಿತಿನ ಜೊತೆಗೆ ಕೆಡಕು ಸಹ ಇರುತ್ತೆ, ಅದರ ಉಪಯೋಗದಲ್ಲಿ ಹಿಡಿತವಿರಬೇಕು, ಮುಖ್ಯವಾಗಿ ಮಕ್ಕಳಲ್ಲಿ ಮೊಬೈಲ್ ಬಳಕೆ ಅತೀ ಯಾಗುತ್ತಿದೆ. ಇದರ ಬಗ್ಗೆ ಆಯಾ ಪಾಲಕರು ಗಮನಿಸಬೇಕಾಗಿದೆ. ಟಿವಿ, ಮೊಬೈಲ್ ಗಿಂತಲೂ ಓದುವುದರಿಂದ ಹೆಚ್ಚು ಜ್ಞಾನ ಸಿಗುತ್ತದೆ. ವಿದ್ಯಾರ್ಥಿಗಳು, ಹೊಸತನದ ತುಡಿತ ಇರುವ ಯುವ ಸಮೂಹ ಓದುವುದರ ಕಡೆಗೆ ಒತ್ತು ಕೊಡಬೇಕು ಎಂದು ಅವರು ಹೇಳಿದರು.
ವಿನಯ, ವಿಧೇಯತೆ, ಕಠಿಣ ಪರಿಶ್ರಮದಿಂದ ನಿಮ್ಮ ತಂದೆ, ತಾಯಿಯವರು ನಿಮ್ಮ ಬಗ್ಗೆ ಇಟ್ಟುಕೊಂಡ ಕನಸು ನನಸು ಮಾಡಲು ಸಾಧ್ಯ ಎಂದು ಕಾರ್ಯಕ್ರಮದಲ್ಲಿ ಭಾಗವಹಿಸಿದ ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಪ್ರಚಲಿತ ವಿದ್ಯಮಾನ, ತಿಳುವಳಿಕೆ, ಭಾಷೆಯ ಮೇಲೆ ಹಿಡಿತವಿದ್ದರೆ ಮಾಧ್ಯಮ ಕ್ಷೇತ್ರದಲ್ಲಿ ಬೆಳೆಯಲು ಉತ್ತಮ ಅವಕಾಶಗಳಿವೆ. ಜನ ಸಮುದಾಯದ ನಂಬಿಕೆ, ವಿಶ್ವಾಸ ಉಳಿಸಿಕೊಂಡರೆ ಮಾತ್ರ ಮಾಧ್ಯಮಗಳು ಬಹು ಕಾಲ ಉಳಿಯಲು ಸಾಧ್ಯ ಎಂದು ಕುಲಪತಿ ಡಾ ಬಿ ಕೆ ರವಿ ಹೇಳಿದರು.
ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷೆ ಆಯಿಷಾ ಖಾನಮ್ ಮಾತನಾಡಿ, ಶಿಕ್ಷಣ ರಂಗ ಮತ್ತು ಮಾಧ್ಯಮ ರಂಗದ ಸೇತುವೆಯಾಗಿ ಕೆಲಸ ಮಾಡಲು ಪೂರಕ ವಾತಾವರಣ ನಿರ್ಮಾಣ ಮಾಡಲು ಮಾಧ್ಯಮ ಅಕಾಡೆಮಿ ಪ್ರಯತ್ನಿಸುತ್ತದೆ.ಆ ಕೆಲಸವನ್ನು ತಾವು ಕೂಡಾ ಮುಂದುವರೆಸುತ್ತೆವೆ ಎಂದು ಹೇಳಿದರು.
ಪತ್ರಿಕೋದ್ಯಮವು ಜನರ ಸುಧಾರಣೆ, ಸ್ಥಳೀಯ, ಪ್ರಾದೇಶಿಕ ಅಭಿವೃದ್ಧಿಗೆ ಸ್ಪಂದಿಸುವಂತಿರಬೇಕು ಎಂದು ಅವರು ಹೇಳಿದರು.
ಜಿ ಎನ್ ಮೋಹನ್ ಮತ್ತು ಆಯಿಷಾ ಖಾನಮ್ ಅವರಿಂದ ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ಗೋಷ್ಠಿ, ವಿಶೇಷ ಉಪನ್ಯಾಸ ನಡೆಯಿತು.
ಕಾರ್ಯಕ್ರಮದಲ್ಲಿ ಬಹುತ್ವ ಮೀಡಿಯಾ ಹೌಸ್ ನ ರಾಜಾಭಕ್ಷಿ, ಕನ್ನಡ ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕೊಟ್ರೇಶ್ ಮರಬನಾಳ್, ಕೊಪ್ಪಳ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ತಿಮ್ಮಾರೆಡ್ಡಿ ಮೇಟಿ, ಅಳವoಡಿ ಕಾಲೇಜಿನ ಪ್ರಾಚಾರ್ಯ ಗವಿಸಿದ್ದಪ್ಪ ಮುತ್ತಾಳ್, ಜಿಲ್ಲಾ ವಾರ್ತಾಧಿಕಾರಿ ಗವಿಸಿದ್ದಪ್ಪ ಹೊಸಮನಿ, ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಕೃಷ್ಣಾ ಉಕ್ಕುಂದ್, ಪತ್ರಕರ್ತ ಸಿರಾಜ್ ಬಿಸರಲ್ಲಿ, ಮಂಜುನಾಥ್ಹ ಗೊಂಡಬಾಳ್, ಮಹಮ್ಮದ್ ಖಲೀಲು, ಬಹುತ್ವ ಮೀಡಿಯಾ ಹೌಸ್ ಬಳಗದ ಪ್ರಮುಖರು ಇತರರು ಉಪಸ್ಥಿತರಿದ್ದರು.