ಸಿಂಧನೂರು:- ಮೂರು ದಶಕಗಳ ಕಾಲ ಪತ್ರಿಕಾ ರಂಗದಲ್ಲಿ ತಮ್ಮ ಛಾಪು ಮೂಡಿಸಿದ್ದ ಸುದ್ದಿಮೂಲ ಹಾಗೂ ರಾಜ್ಯಮಟ್ಟದ ಪತ್ರಿಕೆಗಳಲ್ಲಿ ವರದಿಗಾರರಾಗಿ, ಉಪಸಂಪಾದಕರಾಗಿ ಕಾರ್ಯನಿರ್ವಹಿಸಿದ್ದ ಹಿರಿಯ ಪತ್ರಕರ್ತ ಶರಣು ಪಾ.ಹಿರೇಮಠ ಮಂಗಳವಾರ ಬೆಂಗಳೂರಿನಲ್ಲಿ ನಿಧನ ಹೊಂದಿದ್ದಾರೆ.
ಅವರಿಗೆ 65 ವಯಸ್ಸಾಗಿತ್ತು. ಮೃತರು ಇಬ್ಬರು ಪತ್ನಿಯರು, ನಾಲ್ವರು ಮಕ್ಕಳು ಸೇರಿದಂತೆ ಅಪಾರ ಬಂಧುಗಳನ್ನು ಅಗಲಿದ್ದಾರೆ. ಬುಧವಾರ ತುರ್ವಿಹಾಳ ಪಟ್ಟಣದಲ್ಲಿ ಅಂತಿಮ ಸಂಸ್ಕಾರ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. ಕೆಲವು ದಿನಗಳಿಂದ ಹೃದಯ ಸಂಬAಧಿತ ಕಾಯಿಲೆಯಿಂದ ಬಳಲುತ್ತಿದ್ದ ಅವರು ಬೆಂಗಳೂರಿನ ಜೈದೇವ ಆಸ್ಪತ್ರೆಯಲ್ಲಿ ಕಳೆದ ಮಂಗಳವಾರ ತೆರೆದ ಹೃದಯ ಶಸ್ತçಚಿಕಿತ್ಸೆಗೆ ಒಳಗಾಗಿದ್ದರು. ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದಿದ್ದಾರೆ.
ಪತ್ರಿಕಾ ರಂಗದ ಅನರ್ಘ್ಯ:
ಕಳೆದ ಮೂರು ದಶಕಗಳ ಕಾಲ ಸುಧೀರ್ಘ ಪತ್ರಿಕೋಧ್ಯಮದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ಸುದ್ದಿಮೂಲ ಪತ್ರಿಕೆಯ ಮೂಲಕ ಪತ್ರಿಕಾ ರಂಗಕ್ಕೆ ಕಾಲಿಟ್ಟಿದ್ದ ಅವರು, ನಾಡಿನ ಹೆಸರಾಂತ ರಾಜ್ಯಮಟ್ಟದ ಪತ್ರಿಕೆಗಳಲ್ಲಿ ತಾಲೂಕಾ ವರದಿಗಾರರಾಗಿ, ಸುದ್ದಿ ಸಂಪಾದಕರಾಗಿ, ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದರು. ಶರಣು ಪಾ ಹಿರೇಮಠ ಅವರು, ಬರೆದ ಲೇಖನಗಳು, ರಾಜಕೀಯ ವಿಶ್ಲೇಷಣೆಗಳು, ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವ ವರದಿಗಳು ರಾಜ್ಯಮಟ್ಟದಲ್ಲಿ ಗಮನ ಸೆಳೆದಿದ್ದವು. ಅವರು ಖ್ಯಾತ ಸಂಜಯ್ ದತ್ ಹಾಗೂ ತೆಲುಗಿನ ಕ್ರಾಂತಿಕಾರಿ ಕವಿ ಗದ್ದರ್ ಅವರ ವಿಶೇಷ ಸಂದರ್ಶನ ಮಾಡುವ ಮೂಲಕ ರೋಚಕ ಪತ್ರಿಕೋಧ್ಯಮಕ್ಕೆ ಸಾಕ್ಷಿಯಾಗಿದ್ದರು.
ಸಿಂಧನೂರು ತಾಲೂಕಿನ ಚಿಕ್ಕಬರ‍್ಗಿ ಗ್ರಾಮದ ಗುಡ್ಡದಲ್ಲಿ ‘ಹಸಿರು ನೆತ್ತಿಯ ಮೇಲೆ ನಕ್ಸಲ್ ನಿನಾದ’ ಎನ್ನುವ ಕುರಿತು ನಕ್ಸಲ್ ಚಳುವಳಿಯ ಕುರಿತ ಅವರ ವಿಶೇಷ ವರದಿಯು ಸದನದಲ್ಲಿ ಚರ್ಚೆಯಾಗಿತ್ತು. ಸದಾ ಯುವ ಪತ್ರಕರ್ತರಿಗೆ ಮಾರ್ಗದರ್ಶಕರಾಗಿದ್ದ ಅವರು, ಸದಾ ಹಸನ್ಮುಖಿಯಾಗಿ ಎಲ್ಲರೊಂದಿಗೆ ಬೆರೆಯುವ ವ್ಯಕ್ತಿತ್ವ ಅವರದಾಗಿತ್ತು. ಇತ್ತೀಚಿನ ದಿನಗಳಲ್ಲಿ ಪತ್ರಿಕಾ ರಂಗದ ಸೇವೆಯೊಂದಿಗೆ ದೇಶ ಸುತ್ತು ಕೋಶ ಓದು ಎನ್ನುವಂತೆ ಅವರು ಸದಾ ಉತ್ತರ ಭಾರತದ ಪ್ರವಾಸ ಹೆಚ್ಚು ಮಾಡುತ್ತಿದ್ದರು. ನಾಗ ಸಾಧುಗಳೊಂದಿಗೆ ವಿಶೇಷ ಒಡನಾಟವಿತ್ತು.
ಸಂತಾಪ:
ಹಿರಿಯ ಪತ್ರಕರ್ತ ಶರಣು ಪಾ.ಹಿರೇಮಠ ಅವರ ನಿಧನಕ್ಕೆ ಶಾಸಕ ಹಂಪನಗೌಡ ಬಾದರ್ಲಿ, ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ, ಮಾಜಿ ಸಚಿವ ವೆಂಕಟರಾವ ನಾಡಗೌಡ, ಎಂಎಲ್‌ಸಿ ಬಸನಗೌಡ ಬಾದರ್ಲಿ, ಸುದ್ದಿಮೂಲ ಪತ್ರಿಕೆ ಸಂಪಾದಕ ಬಸವರಾಜ ಸ್ವಾಮಿ, ರಾಯಚೂರವಾಣಿ ಪತ್ರಿಕೆ ಸಂಪಾದಕ ಅರವಿಂದ ಕುಲಕರ್ಣಿ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಗುರುನಾಥ, ಸಿಂಧನೂರು ತಾಲೂಕಾಧ್ಯಕ್ಷ ಡಿ.ಹೆಚ್.ಕಂಬಳಿ ಸೇರಿದಂತೆ ಜಿಲ್ಲೆಯ ಪತ್ರಕರ್ತರು, ರಾಜಕೀಯ ಧುರೀಣರು, ವಿವಿಧ ಸಂಘ-ಸಂಸ್ಥೆಗಳ ಮುಖಂಡರು ಸಂತಾಪ ಸೂಚಿಸಿದ್ದಾರೆ.