BREAKING : ಆಂಧ್ರಪ್ರದೇಶಕ್ಕೆ 4 ಆನೆಗಳ ಹಸ್ತಾಂತರ : ಸಚಿವ ಈಶ್ವರ ಬಿ ಖಂಡ್ರೆ
ಬೆಂಗಳೂರು : ನೆರೆ ಹೊರೆ ರಾಜ್ಯಗಳ ಉತ್ತಮ ಬಾಂಧವ್ಯಕ್ಕೆ ಪಕ್ಷ ರಾಜಕೀಯ ಅಡ್ಡಿ ಬರುವುದಿಲ್ಲ ಎನ್ನುವುದಕ್ಕೆ ನಮ್ಮ ಹಾಗೂ ಆಂಧ್ರಪ್ರದೇಶ ಬಾಂಧವ್ಯವೇ ಸಾಕ್ಷಿ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಹೇಳಿದ್ದಾರೆ.
ಇಂದು ವಿಧಾನಸೌಧದ ಪೂರ್ವದ್ವಾರದಲ್ಲಿ ಆಂಧ್ರಪ್ರದೇಶಕ್ಕೆ 4 ಆನೆಗಳನ್ನು ಹಸ್ತಾಂತರಿಸಲು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪ್ರಸ್ತಾವಿಕವಾಗಿ ಮಾತನಾಡಿದ ಸಚಿವ ಈಶ್ವರ ಬಿ ಖಂಡ್ರೆ, ‘ನೆರೆ ರಾಜ್ಯಗಳೊಂದಿಗೆ ಉತ್ತಮ ಬಾಂಧವ್ಯಕ್ಕೆ ಇಂದಿನ ಈ ಆನೆಗಳ ಹಸ್ತಾಂತರ ಸಹಕಾರಿಯಾಗಲಿದೆ ಎಂದು ಹೇಳಿದರು.
ಈ ಹಿಂದೆ ಪವನ್ ಕಲ್ಯಾಣ್ ಅವರು 2024ರ ಆಗಸ್ಟ್ ನಲ್ಲಿ ರಾಜ್ಯಕ್ಕೆ ಭೇಟಿ ನೀಡಿದ್ದ ವೇಳೆ ಮತ್ತು ವಿಜಯವಾಡಕ್ಕೆ ತಮ್ಮ ನೇತೃತ್ವದ ನಿಯೋಗ ತೆರಳಿದ್ದ ಸಂದರ್ಭದಲ್ಲಿ ರಾಷ್ಟ್ರಕವಿ ಕುವೆಂಪು ಅವರ ಕವನ ವಾಚಿಸಿದ್ದರು, ನಮ್ಮ ಎರಡೂ ರಾಜ್ಯಗಳ ನಡುವಿನ ಹಲವು ಶತಮಾನಗಳ ಬಾಂಧವ್ಯಕ್ಕೆ ಪುಷ್ಟಿ ನೀಡಿದ್ದರು ಎಂದರು.
1. ಕೃಷ್ಣ 15 ವರ್ಷ. 2022ರಲ್ಲಿ ಚಿಕ್ಕಮಗಳೂರಿನಲ್ಲಿ ಈ ಆನೆ ಸೆರೆ ಹಿಡಿಯಲಾಗಿತ್ತು. 2. ಶಿವಮೊಗ್ಗ ಅಭಿಮನ್ಯು- 14 ವರ್ಷ 2023ರಲ್ಲಿ ಹೊನ್ನಾಳಿಯಲ್ಲಿ ಸೆರೆ ಹಿಡಿಯಲಾದ ಆನೆ. 3. ದೇವ -39 ವರ್ಷ ಕುಶಾಲನಗರದಲ್ಲಿ 2019ರಲ್ಲಿ ಸೆರೆ ಹಿಡಿದ ಆನೆ. 4. ರಂಜನ್ ದುಬಾರೆ ಶಿಬಿರದಲ್ಲೇ ಜನಿಸಿದ ಆನೆ. ವಯಸ್ಸು 26 ವರ್ಷ.
ಆಂಧ್ರಪ್ರದೇಶ ಒಟ್ಟು 8 ಆನೆ ನೀಡುವಂತೆ ಮನವಿ ಮಾಡಿದ್ದು, ಕರ್ನಾಟಕ 6 ಆನೆ ನೀಡಲು ಸಮ್ಮತಿಸಿದೆ. ಇಂದು 4 ಆನೆಗಳನ್ನು ವಿಧ್ಯುಕ್ತವಾಗಿ ಹಸ್ತಾಂತರಿಸಲಾಗಿದೆ ಎಂದು ತಿಳಿದು ಬಂದಿದೆ.