BREAKING : ಪಡಿತರ ಅಕ್ಕಿ ಅಕ್ರಮ ಸಾಗಾಟ ದಂಧೆ : ಕಣ್ಣು ಮುಚ್ಚಿ ಕುಳಿತ ಆಹಾರ ಇಲಾಖೆ ಅಧಿಕಾರಿಗಳು..!!
ಗಂಗಾವತಿ : ಕರ್ನಾಟಕ ಹಸಿವು ಮುಕ್ತ ರಾಜ್ಯವಾಗಬೇಕು ಎನ್ನುವ ಉದ್ದೇಶದಿಂದ ಬಡವರಿಗೆ ಉಚಿತವಾಗಿ ಅಕ್ಕಿ ಕೊಟ್ಟಿದ್ದು, ಇದೀಗ ಈ “ಅನ್ಯಭಾಗ್ಯ ಯೋಜನೆ” ಕೆಲವರಿಗೆ ಕೋಟಿಗಟ್ಟಲೆ ವ್ಯವಹಾರ ಮಾಡುವುದಕ್ಕೆ ಅನುಕೂಲಕರವಾಗಿದೆ. ಕೊಪ್ಪಳ ಜಿಲ್ಲೆಯಲ್ಲಿ ಪಡಿತರ ದಂಧೆಕೋರರ ಹಾವಳಿ ಅತೀವ ಹೆಚ್ಚಾಗಿದ್ದು, ಇದನ್ನು ನೋಡಿಯೂ ನೋಡದ ಹಾಗೇ, ಕೇಳಿಯೂ ಕೇಳದ ಹಾಗೇ ಆಹಾರ ಇಲಾಖೆಯ ಅಧಿಕಾರಿಗಳು (ಆಹಾರ ನಿರೀಕ್ಷಕರು) ನಾಟಕೀಯವಾಗಿ ನಟಿಸುತ್ತಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದೆ.
ಗಂಗಾವತಿ ನಗರ ಹಾಗೂ ತಾಲೂಕು ವ್ಯಾಪ್ತಿಯಲ್ಲಿ ಮತ್ತೆ ಪಡಿತರ ದಂಧೆಕೋರರ ಹಾವಳಿ ಹೆಚ್ಚಾಗಿದ್ದು, ಯಾರ ಭಯವೂ ಇಲ್ಲದೇ ರಾಜರೋಷವಾಗಿ ನ್ಯಾಯಬೆಲೆ ಅಂಗಡಿಗಳ ಮುಂದೆಯೇ ಕೊಂಡುಕೊಳ್ಳುವ ವ್ಯವಹಾರ ನಡೆಯುತ್ತಿದ್ದು, ಈ ದಂಧೆಯನ್ನು ತಡೆಯಲು ಸಂಬಂಧಪಟ್ಟ ಅಧಿಕಾರಿಗಳು (ಆಹಾರ ನಿರೀಕ್ಷಕರು), ನ್ಯಾಯಬೆಲೆ ಅಂಗಡಿ ಮಾಲೀಕರು ಮನಸ್ಸು ಮಾಡದಿರುವುದು ವಿಪರ್ಯಾಸವೇ ಸರಿ.
ಈ ದಂಧೆಯಲ್ಲಿ ಆಹಾರ ಇಲಾಖೆಯ ಅಧಿಕಾರಿಗಳು ಶಾಮೀಲಾಗಿದ್ದಾರೆ ಎಂದು ಕರ್ನಾಟಕ ಜನಸೈನ್ಯ ಕೊಪ್ಪಳ ಜಿಲ್ಲಾಧ್ಯಕ್ಷ ರಮೇಶ ಕಾಳಿ ಗಂಭೀರ ಆರೋಪ ಮಾಡಿದ್ದಾರೆ. ಈ ಕುರಿತು ಮಾಧ್ಯಮಗಳಿಗೆ ಪತ್ರಿಕಾ ಪ್ರಕಟಣೆ ನೀಡಿರುವ ರಮೇಶ ಕಾಳಿ ಅವರು, ‘ಕಳೆದ ಒಂದೆರೆಡು ವರ್ಷಗಳ ಹಿಂದೆ ತಣ್ಣಗಾಗಿದ್ದ ಪಡಿತರ ಅಕ್ರಮ ದಂಧೆ ಈಗ ಮತ್ತೆ ಗರಿಬಿಚ್ಚಿದೆ’ ಎಂದರು.
‘ಈ ಹಿಂದೆ ಕದ್ದುಮುಚ್ಚಿ ಪಡಿತರ ಅಕ್ಕಿ ಅಕ್ರಮವಾಗಿ ಸಾಗಣೆ ಮಾಡುತ್ತಿದ್ದ ದಂಧೆಕೋರರು ಈಗ ಬಹಿರಂಗವಾಗಿಯೇ ಅಕ್ಕಿ ದಂಧೆಯನ್ನು ಮಾಡುತ್ತಿದ್ದಾರೆ. ಯಾರಾದರೂ ಸಾಮಾಜಿಕ ಹೋರಾಟಗಾರರು, ಸಂಘಟನೆ ಮುಖಂಡರು ಅಕ್ಕಿ ಕಳ್ಳರನ್ನು ಹಿಡಿದು ಆಹಾರ ಇಲಾಖೆ ಅಧಿಕಾರಿಗಳಿಗೆ ದೂರು ನೀಡಿದಾಗ ಮಾತ್ರ ಅಕ್ಕಿ ಕಳ್ಳರನ್ನು ತಾವೇ ಹಿಡಿದಂತೆ ಪೋಟೋಗೆ ಫೋಸು ನೀಡುತ್ತಾರೆ’ ಎಂದರು.
ಬಳಿಕ ಮುಂದಿನ ಕ್ರಮಕೈಗೊಂಡು ಪ್ರಕರಣ ದಾಖಲಿಸಿದ ಉದಾಹರಣೆಗಳಿಲ್ಲ. ಅಧಿಕಾರಿಗಳ ಈ ನಡೆ ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದೆ. ತಾಲೂಕಿನಾದ್ಯಂತ ಒಟ್ಟು 134 ನ್ಯಾಯಬೆಲೆ ಅಂಗಡಿಗಳಿದ್ದು, ಎಲ್ಲಾ ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ ಅಕ್ಕಿ ವಿತರಿಸುವಾಗ ಅಂಗಡಿಗಳ ಮುಂದೆ ಜಮಾಯಿಸುವ ದಂಧೆಕೋರರು ಅಲ್ಲಿಯೇ ಪಡಿತರ ಅಕ್ಕಿ ಸಂಗ್ರಹಿಸಿ ದ್ವಿಚಕ್ರ ವಾಹನಗಳಲ್ಲಿ ಒಂದೆಡೆಗೆ ಸಂಗ್ರಹಿಸಿ ಬೇರೆಡೆಗೆ ಸಾಗಾಟ ಮಾಡುತ್ತಾರೆ ಎಂದು ಮಾಹಿತಿ ಇದೆ.
ಈ ದಂಧೆಯಲ್ಲಿ ಕೆಲ ನ್ಯಾಯಬೆಲೆ ಅಂಗಡಿ ಮಾಲೀಕರೂ ಕೂಡ ಶಾಮೀಲಾಗಿದ್ದು, ಪಡಿತರ ಚೀಟಿದಾರರಿಂದ ಬೆರಳಚ್ಚು ಪಡೆದು ಅವರಿಗೆ ನೇರವಾಗಿ ಹಣಪಾವತಿಸಿ ಕಳುಹಿಸುತ್ತಾರೆ. ಬಳಿಕ ಆ ಅಕ್ಕಿಯನ್ನು ನೇರವಾಗಿ ದಂಧೆಕೋರರಿಗೆ ನೀಡುತ್ತಾರೆ. ಇದು ಸುವ್ಯವಸ್ಥಿತವಾಗಿ ನಡೆಯುತ್ತಿದ್ದು, ಅಕ್ಕಿ ದಂಧೆಕೋರರ ಜಾಲ ಸಕ್ರೀಯವಾಗಿ ಕಾರ್ಯನಿರ್ವಹಿಸುತ್ತಿದೆ.
ಈ ಹಿಂದೆ 5 ಕೆ.ಜಿ. ಅಕ್ಕಿ ನೀಡುವಾಗ ಕಡಿಮೆ ಇದ್ದ ದಂಧೆಕೋರರ ಹಾವಳಿ 10 ಕೆ.ಜಿ.ಯ ನಂತರ ಹೆಚ್ಚಾಗಿದೆ. ಕೆಲವು ಮಂಡಾಳ ಬಟ್ಟಿಗಳ ಮಾಲೀಕರು ಹೊಟ್ಟೆಪಾಡಿಗಾಗಿ 10-20 ಕೆ.ಜಿ. ಅಕ್ಕಿಗಳನ್ನು ಖರೀದಿಸಿ ಒಯ್ಯುತ್ತಿದ್ದಾರೆ. ಅಂತಹವರನ್ನು ಹಿಡಿದು ಪ್ರಕರಣ ದಾಖಲಿಸಿ ಹಣ ವಸೂಲಿ ಮಾಡುವ ಆಹಾರ ಇಲಾಖೆಯ ಅಧಿಕಾರಿಗಳು ಗಂಗಾವತಿ ನಗರದ ಮಹೆಬೂಬ ನಗರ, ಶರಣಬಸವೇಶ್ವರ ಕ್ಯಾಂಪ್, ವಡ್ಡರಹಟ್ಟಿ, ಲಿಂಗರಾಜ್‍ಕ್ಯಾಂಪ್, ಕಿಲ್ಲಾ ಏರಿಯಾ, ಉಪ್ಪಿನಮಾಳಿ ಕ್ಯಾಂಪ್, ಮುಜಾವರ್ ಕ್ಯಾಂಪ್, ಜಂತಕಲ್, ವಿರುಪಾಪುರ ತಾಂಡ ಹಾಗೂ ಇನ್ನಿತರೆಡೆ ಮನೆಮನೆಗಳಲ್ಲಿ ಪಡಿತರ ಅಕ್ಕಿ ಸಂಗ್ರಹಿಸಿ, ಬಳಿಕ ವಿವಿಧ ಬ್ರ್ಯಾಂಡ್‍ಗಳ ಚೀಲಗಳಲ್ಲಿ ತುಂಬಿ ಕೆಲ ರೈಸ್‍ಮಿಲ್‍ಗಳ ಮಾಲೀಕರಿಗೆ ಪೂರೈಸುತ್ತಾರೆ ಎಂದು ಹೇಳಲಾಗುತ್ತಿದೆ.
ನೇರವಾಗಿ ಅಲ್ಲಿಂದ ಕಾರಟಗಿ, ಯರಡೋಣಾ, ಬೂದಗುಂಪಾ, ತಾವರಗೇರಾ, ಇಳಕಲ್, ಹೊಸಪೇಟೆ, ಹಗರಿಬೊಮ್ಮನಹಳ್ಳಿ, ಹರಪನಹಳ್ಳಿ ಇನ್ನಿತರೆಡೆಗೆ ಸಾಗಣೆಯಾಗುತ್ತಿವೆ. ಹೀಗೆ ಒಂದು ವ್ಯವಸ್ಥಿತವಾದ ಪಡಿತರ ಅಕ್ಕಿ ಅಕ್ರಮ ದಂಧೆ ಮತ್ತೆ ಆರಂಭವಾಗಿದ್ದು, ಕಡಿವಾಣ ಇಲ್ಲದಂತಾಗಿದೆ. ಆದ್ದರಿಂದ ಕೂಡಲೇ ಆಹಾರ ಇಲಾಖೆಯ ಅಧಿಕಾರಿಗಳನ್ನು ಬೇರೆಡೆ ವರ್ಗಾವಣೆ ಮಾಡಬೇಕು. ಈ ಅಕ್ರಮ ದಂಧೆಗೆ ಕಡಿವಾಣ ಹಾಕಬೇಕು ಎಂದು ರಮೇಶ ಕಾಳಿ ಒತ್ತಾಯಿಸಿದ್ದಾರೆ.