Post Views: 934
ಪ್ರಜಾವೀಕ್ಷಣೆಯ ಸೂಕ್ಷ್ಮ ನೋಟ :
LOCAL EXPRESS : ಕುಕನೂರು ಪಟ್ಟಣದಲ್ಲಿ ಮುಖ್ಯ ರಸ್ತೆಯಲ್ಲಿರುವ ವಿದ್ಯುತ್ ದೀಪಗಳ ಅಸಮರ್ಪಕ ನಿರ್ವಹಣೆ : ಹೆಚ್ಚಾದ ಸಾರ್ವಜನಿಕರ ಆಕ್ರೋಶ..!!

ಪ್ರಜಾ ವೀಕ್ಷಣೆ ಡಿಜಿಟಲ್ ಡೆಸ್ಕ್ : ಕುಕನೂರು ಪಟ್ಟಣದಲ್ಲಿ (ರಾಷ್ಟ್ರೀಯ ಹೆದ್ದಾರಿ 367ರ) ಮುಖ್ಯ ರಸ್ತೆಯಲ್ಲಿರುವ ವಿದ್ಯುತ್ ದೀಪಗಳ ಅಸಮರ್ಪಕ ನಿರ್ವಹಣೆಗೆ ಸಂಬಂಧಿಸಿದಂತೆ ಸಾರ್ವಜನಿಕರ ಆಕ್ರೋಶ ಹೆಚ್ಚುತ್ತಿದೆ. ಕಳೆದ ಎರಡು ದಿನಗಳಿಂದ ಅಲಂಕಾರಿಕ ವಿದ್ಯುತ್ ಎಲ್‌ಇಡಿ ದೀಪಗಳು ಕಾರ್ಯನಿರ್ವಹಿಸುತ್ತಿಲ್ಲ. ಕತ್ತಲೆಯಲ್ಲಿ ಸಂಚರಿಸಬೇಕಾದ ಪರಿಸ್ಥಿತಿ ಎದುರಾಗಿದ್ದು, ಪಟ್ಟಣ ಪಂಚಾಯತ್ ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಕಳೆದ ಮೂರು ತಿಂಗಳ ಹಿಂದೆ ಈ ಲಕ್ಷಾಂತರ ರೂ.ಗಳನ್ನು ವೆಚ್ಚ ಮಾಡಿ ಈ ಅಲಂಕಾರಿಕ ವಿದ್ಯುತ್ ಎಲ್‌ಇಡಿ ದೀಪಗಳು ಉದ್ಘಾಟನೆಗೊಂಡಿದ್ದವು, ಇದೀಗ ಪಟ್ಟಣದ ಎಸ್ಎಫ್ಎಸ್ ಶಾಲೆಯಿಂದ ದ್ಯಾಂಪೂರ್ ಕ್ರಾಸ್ ದವರೆಗೆ ಸರಿ ಸುಮಾರು 15 ವಿದ್ಯುತ್ ಕಂಬಗಳಲ್ಲಿ ಬಲ್ಪುಗಳ ಬಂದಾಗಿದ್ದು, ಈ ವಿದ್ಯುತ್ ಬೀದಿ ದೀಪಗಳ ನಿರ್ವಹಣೆಯನ್ನು ಹುಬ್ಬಳ್ಳಿ ಮೂಲದ ಗುತ್ತಿಗೆದಾರರ ನಿರ್ವಹಣೆ ಮಾಡುತ್ತಿದ್ದಾರೆ ಎನ್ನಲಾಗಿದೆ.
ಈದ್-ಮೀಲಾದ್ -ಗಣೇಶೋತ್ಸವ ಹಬ್ಬದಲ್ಲಿ ಈ ರೀತಿ ಕತ್ತಲಾವರಿಸಿಕೊಂಡಿದ್ದು, ಹಬ್ಬದ ವಾತಾವರಣವನ್ನೇ ಹಾಳುಮಾಡುತ್ತಿದೆ, ಜೊತೆಗೆ ಈ ಕತ್ತಲೆಯಲ್ಲಿಯೇ ಸಾರ್ವಜನಿಕರ ಸಂಚಾರ ಮಾಡುವಂತ ಪರಿಸ್ಥಿತಿ ನಿರ್ಮಾಣಗೊಂಡಿದೆ ಎಂದು ಸಾರ್ವಜನಿಕರು ಹಿಡಿಶಾಪ ಹಾಕುತ್ತಿದ್ದಾರೆ.
ಇದೇ ವೇಳೆಯಲ್ಲಿ ಗಣೇಶನ ಮೂರ್ತಿ ವಿಸರ್ಜನೆ ಮೊದಲನೆಯ ದಿನದಿಂದ ಇಂದಿನವರೆಗೂ ಹಾಗೂ ಗಣೇಶನ ವಿಸರ್ಜನೆ ಕಾರ್ಯಕ್ರಮ ನಿರಂತರವಾಗಿ ನಡೆಯಲಿದೆ. ಈ ವೇಳೆಯಲ್ಲಿ ಬೆಳಕಿನ ಅಭಾವ ಕಾಡಬಹುದು. ಈ ಮುಖ್ಯ ರಸ್ತೆಯಲ್ಲಿ ಶಾಲೆಗಳು, ಅಂಗಡಿ ಮುಗ್ಗಟ್ಟುಗಳು ಇದ್ದು, ಬೆಳಗಿನ ಜಾವ ಜಾಗಿಂಗ್ ಹೋಗುವವರಿಗೆ ಹಾಗೂ ರಾತ್ರಿ ವೇಳೆಯಲ್ಲಿ ಸಾರ್ವಜನಿಕರ ಸಂಚಾರಕ್ಕೆ ತೊಂದರೆಯಾಗುತ್ತಿದೆ ಎಂದು ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ.
ಆದಷ್ಟು ಬೇಗ ಈ ಅಲಂಕಾರಿಕ ವಿದ್ಯುತ್ ದೀಪಗಳು ಎಂದಿನಂತೆ ಕಾರ್ಯ ನಿರ್ವಹಿಸಿದರೆ, ಮುಖ್ಯರಸ್ತೆಯ ಅಂದವನ್ನು ಹೆಚ್ಚುವುದರ ಜೊತೆಗೆ ರಾತ್ರಿ ವೇಳೆಯಲ್ಲಿ ಸಾರ್ವಜನಿಕರ ಸಂಚಾರಕ್ಕೆ ಅನುಕೂಲಕರವಾಗಿರುತ್ತದೆ.