LOCAL NEWS : ನ್ಯಾಯ ಕೊಡಿಸುವ ನೆಪದಲ್ಲಿ ಬಂಜಾರ ಕೊರಮ,ಕೊರಚ,ಭೋವಿ ಸಮಾಜಕ್ಕೆ ಬಹುದೊಡ್ಡ ಅನ್ಯಾಯ : ಸುರೇಶ್ ಬಳೂಟಗಿ
ಕುಕನೂರು : ‘ನಮ್ಮ ಸಮಾಜಗಳ ಬೆಂಬಲದಿಂದ ಈ ಕಾಂಗ್ರೆಸ್ ಪಕ್ಷ ಬರೋಬ್ಬರಿ 133 ಸ್ಥಾನಗಳಲ್ಲಿ ಗೆಲುವು ಸಾಧಿಸಿ ಸುಭದ್ರ ಸರ್ಕಾರ ರಚನೆ ಮಾಡಿದೆ. ಆದರೆ, ಇದನ್ನು ಸಿದ್ದರಾಮಯ್ಯ ಅವರು ಮರೆತು ನಮಗೆ ದ್ರೋಹ ಮಾಡಿದ್ದಾರೆ. ಪರಿಶಿಷ್ಟ ಜಾತಿ ಸಮುದಾಯಗಳಿಗೆ ನ್ಯಾಯ ಕೊಡಿಸುವ ನೆಪದಲ್ಲಿ ಬಂಜಾರ ಕೊರಮ,ಕೊರಚ, ಭೋವಿ ಸಮಾಜಕ್ಕೆ ಬಹುದೊಡ್ಡ ಅನ್ಯಾಯ ಎಸಗಿದ್ದಾರೆ ಎಂದು ಗೋರ್ ಸೇನಾ ಕರ್ನಾಟಕ ರಾಜ್ಯ ಪ್ರಧಾನ ಕಾರ್ಯದರ್ಶಿ ಸುರೇಶ್ ಬಳೂಟಗಿ ಹೇಳಿದರು.
ಇಂದು ಕುಕನೂರ ಪಟ್ಟಣದ ನಿರೀಕ್ಷಣಾ ಮಂದಿರದಲ್ಲಿ ಪತ್ರಿಕಾಗೋಷ್ಠಿಯನ್ನ ಉದ್ದೇಶಿಸಿ ಮಾತನಾಡಿದ ಅವರು, ‘ಒಳಮೀಸಲಾತಿಯಲ್ಲಿ ಕರ್ನಾಟಕ ಸರ್ಕಾರ ಮಾಡಿರುವ ಅನ್ಯಾಯದ ವಿರುದ್ಧ ಇದೇ ಸಪ್ಟೆಂಬರ್ 8 ರಂದು ಸೋಮವಾರ ಕೂಕನೂರು ಪಟ್ಟಣದಲ್ಲಿ ಬೃಹತ್ ಪ್ರತಿಭಟನೆ ನಡೆಸಿ ಕುಕನೂರು ತಹಸೀಲ್ದಾರ್ ರವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸುತ್ತೇವೆ. ಸದ್ಯಕ್ಕೆ ಸರ್ಕಾರ ನೀಡಿರುವ ಒಳಮೀಸಲಾತಿಯನ್ನು ಮತ್ತೋಮ್ಮೆ ಸೂಕ್ಷ್ಮವಾಗಿ ಪರಿಶೀಲನೆ ಮಾಡಿ ಸರಿಪಡಿಸಲು ಒತ್ತಾಯಿಸಲಿದ್ದೇವೆ ಎಂದು ಹೇಳಿದರು.
ಈ ಮೊದಲು ಬಿಜೆಪಿ ಸರ್ಕಾರ ನಮ್ಮ ನಾಲ್ಕು ಸಮಾಜಗಳಿಗೆ ಶೇಕಡಾ 4.5 ಮೀಸಲಾತಿ ನೀಡಿದ್ದು,ಅದನ್ನು ನಾವು ವಿರೋಧಿಸಿ 2023ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಹಟಾವೋ ತಾಂಡಾ ಬಚಾವೋ ಎಂಬ ಅಭಿಯಾನ ಆರಂಭಿಸಿ ಬಿಜೆಪಿ ಪಕ್ಷವನ್ನು ಸೋಲಿಸಿ ಬಿಸಿ ಮುಟ್ಟಿಸಿದ್ದೆವು. ಇದೀಗ ಈ ಒಳಮೀಸಲಾತಿಯ ಗೊಂದಲವನ್ನು ಸರಿಪಡೆಸದಿದ್ದರೆ ಮುಂದಿನ ತಾಲೂಕ ಪಂಚಾಯಿತಿ, ಗ್ರಾಮ ಪಂಚಾಯತಿ, ಜಿಲ್ಲಾ ಪಂಚಾಯತಿ, ವಿಧಾನಸಭೆ ಚುನಾವಣೆಯಲ್ಲಿ “ಕಾಂಗ್ರೆಸ್ ಹಟಾವೋ ತಾಂಡಾ ಬಚಾವೋ” ಎಂಬ ಅಭಿಯಾನ ಆರಂಭಿಸುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಯುವ ಮುಖಂಡ ಯಮನೂರಪ್ಪ ಕಟ್ಟಿಮನಿ ಮಾತನಾಡಿ, ಇದೀಗ ಒಳ ಮೀಸಲಾತಿಯಲ್ಲಿ “ಸಿ” ಗುಂಪಿನಲ್ಲಿ ಇರುವವರಿಗೆ ಶೇಕಡಾ 5% ಒಳಮೀಸಲಾತಿ ನೀಡಿದೆ, ಆದರೇ, ಈ ಗುಂಪಿನಲ್ಲಿ ನಾವು 63 ಜಾತಿಗಳಿದ್ದೇವೆ. ಇಷ್ಟೊಂದು ಜಾತಿಗಳಿಗೆ ಈ ಸಂಖ್ಯೆ ಸಾಲದು, ಅಲೆಮಾರಿಗಳನ್ನ ಪ್ರತ್ಯೇಕ ಸೇಕಡಾ 1 ರಷ್ಟು ನೀಡಿ, ನಮಗೆ ಶೇಕಡಾ 5 % ಆದರೂ ನೀಡಬೇಕು. ಅಥವಾ ಅಲೆಮಾರಿಗಳನ್ನ ಸೇರಿ ನಮಗೆ 6 % ಕೊಡಬೇಕು ಎಂದು ಸರ್ಕಾರಕ್ಕೆ ಒತ್ತಾಯ ಮಾಡುತ್ತೇವೆ ಎಂದರು.
ಇದೇ ಸಪ್ಟೆಂಬರ್ 8ರಂದು ನಡೆಯಲಿರುವ ತಾಲೂಕ ಮಟ್ಟದ ಬೃಹತ್ ಪ್ರತಿಭಟನೆಯಲ್ಲಿ ಕೋಲಂಭೋ(ಕೋರಮ ಕೊರಚ. ಲಂಬಾಣಿ, ಭೋವಿ) ಸಮಾಜದ ಕುಲಕಸುಬು ವೇಶದಲ್ಲಿ ಬಹಳ ವಿಶೇಷವಾಗಿ ಪ್ರತಿಭಟನೆ ನಡೆಯಲಿದೆ. ಅದೇ ರೀತಿ ಬೆಂಗಳೂರಿನಲ್ಲಿ ಸೆಪ್ಟೆಂಬರ್ 10 ರಂದು ಫ್ರೀಡಂ ಪಾರ್ಕನಲ್ಲಿ ಪ್ರತಿಭಟನೆ ಮಾಡುವದರ ಮೂಲಕ ಸರಕಾರಕ್ಕೆ ಬಿಸಿ ಮುಟ್ಟಿಸಲಿದ್ದೇವೆ. ಕಾಂಗ್ರೆಸ್ ಪಕ್ಷ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕು ಎಂದರು.
ಈ ಪ್ರತಿಭಟನೆಗಳಿಗೆ ಪಕ್ಷಾತೀತವಾಗಿ ಎಲ್ಲರೂ ಬಂದು ಭಾಗವಹಿಸಿ, ನಮ್ಮ ಕೂಗು ವಿಧಾನಸೌಧ ಮುಟ್ಟುವ ಹಾಗೆ ಮಾಡಬೇಕು ಎಂದು ಕೋಲಂಭೋ ಸಮಾಜಗಳ ಬಾಂಧವರಿಗೆ ಈ ಮೂಲಕ ಕರೆ ನೀಡಿದರು.
ಈ ಪತ್ರಿಕಾಗೋಷ್ಠಿಯಲ್ಲಿ ಸಮಾಜದ ಮುಖಂಡರಾದ ಶ್ರೀ ಹೋಬಣ್ಣ ಚವ್ಹಾಣ, ಶ್ರೀ ಹಂಪಣ್ಣ ಕಟ್ಟಿಮನಿ, ಯಮನೂರ ಭಾನಾಪೂರ, ಪ್ರಕಾಶ ಬಳಗೇರಿ, ದುರಗಪ್ಪ ಕಟ್ಟಿಮನಿ, ರಾಘವೇಂದ್ರ ಬಳಗೇರಿ, ನಾಗರಾಜ ಭಾನಾಪೂರ, ಚೇತನ ಬಳಗೇರಿ, ರವಿ ಕಾರಭಾರಿ, ವಿಶ್ವನಾಥ್, ಶಶಿಕುಮಾರ್, ಕಿರಣ್, ವಿಜಯಕುಮಾರ್ ಹಾಗೂ ಇನ್ನಿತರು ಉಪಸ್ಥಿತರಿದ್ದರು.