KOPPAL NEWS : ಬಂಜಾರ ಸಮಾಜದ ಸಂಘಟನೆ, ಶಿಕ್ಷಣಕ್ಕೆ ಆದ್ಯತೆ ನೀಡಿ: ಸಂಸದ ರಾಜಶೇಖರ್ ಹಿಟ್ನಾಳ್ ಕರೆ!
ಪ್ರತಿಭಾ ಪುರಸ್ಕಾರ–2026: ಬಂಜಾರ ವಿದ್ಯಾರ್ಥಿಗಳ ಸಾಧನೆಗೆ ಗೌರವ!!
ಬಂಜಾರ ನೌಕರರ ಕ್ಷೇಮಾಭಿವೃದ್ಧಿ ಸಂಘದಿಂದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನಗದು ಬಹುಮಾನ, ಸನ್ಮಾನ!
PV NEWS ಕನ್ನಡ 24×7 :
ಕೊಪ್ಪಳ, ಜು. 12: ಬಂಜಾರ ಸಮಾಜದ ಸರ್ವಾಂಗೀಣ ಅಭಿವೃದ್ಧಿಗೆ ಸಂಘಟನೆಯ ಶಕ್ತಿ ಹಾಗೂ ಶಿಕ್ಷಣವೇ ಪ್ರಮುಖ ಆಧಾರವಾಗಿದ್ದು, ಸಮಾಜದ ಪ್ರತಿಯೊಬ್ಬರೂ ಮಕ್ಕಳ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಕೊಪ್ಪಳ ಸಂಸದ ರಾಜಶೇಖರ್ ಹಿಟ್ನಾಳ್ ಕರೆ ನೀಡಿದರು.
ನಗರದ ಎಂಪಿ ಪ್ಯಾಲೇಸ್ ಸಭಾಂಗಣದಲ್ಲಿ ಬಂಜಾರ ನೌಕರರ ಕ್ಷೇಮಾಭಿವೃದ್ಧಿ ಸಂಘ (ರಿ.), ಕೊಪ್ಪಳ ಜಿಲ್ಲೆ ವತಿಯಿಂದ ಆಯೋಜಿಸಿದ್ದ “ಪ್ರತಿಭಾ ಪುರಸ್ಕಾರ–2026” ಕಾರ್ಯಕ್ರಮದಲ್ಲಿ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಪರೀಕ್ಷೆಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಬಂಜಾರ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನಗದು ಬಹುಮಾನ, ಪ್ರಶಸ್ತಿ ಹಾಗೂ ಸ್ಮರಣಿಕೆ ನೀಡಿ ಸನ್ಮಾನಿಸಿ ಅವರು ಮಾತನಾಡಿದರು.
ಬಂಜಾರ ಸಮಾಜದ ಜನರು ಕಷ್ಟಪಟ್ಟು, ಸ್ವಾಭಿಮಾನ ಹಾಗೂ ಸರಳತೆಯಿಂದ ಜೀವನ ಸಾಗಿಸುತ್ತಿರುವುದು ಶ್ಲಾಘನೀಯ. ಆದರೆ ಸಮಾಜದ ಅನೇಕ ಕುಟುಂಬಗಳು ಇಂದಿಗೂ ತಾಂಡಾಗಳಲ್ಲಿ ವಾಸಿಸುತ್ತಿದ್ದು, ಆರ್ಥಿಕವಾಗಿ ಹಿಂದುಳಿದಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದು ಅವರು ಹೇಳಿದರು.
ರಾಜಕೀಯ, ಸಾಮಾಜಿಕ ಹಾಗೂ ಆರ್ಥಿಕವಾಗಿ ಸಮಾಜ ಮತ್ತಷ್ಟು ಬಲಿಷ್ಠವಾಗಬೇಕಾದರೆ ಸಂಘಟನೆಯೇ ಪ್ರಮುಖ ಶಕ್ತಿಯಾಗಿದ್ದು, ಎಲ್ಲರೂ ಒಗ್ಗಟ್ಟಿನಿಂದ ಸಮಾಜದ ಅಭಿವೃದ್ಧಿಗೆ ಕೈಜೋಡಿಸಬೇಕು ಎಂದು ಅವರು ಅಭಿಪ್ರಾಯಪಟ್ಟರು.
ಮಕ್ಕಳು ಕೇವಲ ದೈಹಿಕ ಶ್ರಮಕ್ಕೆ ಸೀಮಿತವಾಗದೆ ಉನ್ನತ ಶಿಕ್ಷಣ ಪಡೆದು ಸಮಾಜಕ್ಕೆ ಕೀರ್ತಿ ತರಬೇಕು. ಆರ್ಥಿಕ ಸಂಕಷ್ಟದಿಂದ ಯಾವುದೇ ವಿದ್ಯಾರ್ಥಿ ಶಿಕ್ಷಣದಿಂದ ವಂಚಿತನಾಗದಂತೆ ಸಮಾಜವೇ ಬೆಂಬಲವಾಗಿ ನಿಲ್ಲಬೇಕು ಎಂದು ಅವರು ಕರೆ ನೀಡಿದರು.
ಬಂಜಾರ ಸಮಾಜದ ಅಭಿವೃದ್ಧಿಗಾಗಿ ಸರ್ಕಾರ ಜಾರಿಗೊಳಿಸಿರುವ ವಿವಿಧ ಕಲ್ಯಾಣ ಯೋಜನೆಗಳ ಬಗ್ಗೆ ಸಮರ್ಪಕ ಮಾಹಿತಿ ಇಲ್ಲದ ಕಾರಣ ಅನೇಕ ಅರ್ಹ ಫಲಾನುಭವಿಗಳಿಗೆ ಸೌಲಭ್ಯಗಳು ತಲುಪುತ್ತಿಲ್ಲ. ಆದ್ದರಿಂದ ಯೋಜನೆಗಳ ಬಗ್ಗೆ ಜಾಗೃತಿ ಮೂಡಿಸಿ, ಅವುಗಳ ಪ್ರಯೋಜನ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಲುಪುವಂತೆ ಎಲ್ಲರೂ ಕಾರ್ಯನಿರ್ವಹಿಸಬೇಕು ಎಂದು ಸಲಹೆ ನೀಡಿದರು.
ಸಮಾಜದಲ್ಲಿ ಆರ್ಥಿಕವಾಗಿ ಸದೃಢರಾಗಿರುವವರು ಹಿಂದುಳಿದ ಕುಟುಂಬಗಳ ಅಭಿವೃದ್ಧಿಗೆ ನೆರವಾಗಬೇಕು. ಇದೇ ವೇಳೆ, ಬಂಜಾರ ಸಮುದಾಯ ಭವನ ನಿರ್ಮಾಣಕ್ಕೆ ಅಗತ್ಯ ಜಾಗ ಈಗಾಗಲೇ ಮಂಜೂರಾಗಿದ್ದು, ಸಮಾಜದ ಹಿರಿಯರು ಹಾಗೂ ಶ್ರೀಗಳೊಂದಿಗೆ ಸಮಾಲೋಚನೆ ನಡೆಸಿ ಶೀಘ್ರದಲ್ಲೇ ಸುಸಜ್ಜಿತ ಸಮುದಾಯ ಭವನ ನಿರ್ಮಿಸಲಾಗುವುದು ಎಂದು ಭರವಸೆ ನೀಡಿದರು.
ತಮ್ಮ ತಂದೆಯವರ ಕಾಲದಿಂದಲೂ ಬಂಜಾರ ಸಮಾಜ ನೀಡುತ್ತಿರುವ ಪ್ರೀತಿ, ವಿಶ್ವಾಸ ಮತ್ತು ಬೆಂಬಲವನ್ನು ಸ್ಮರಿಸಿದ ಸಂಸದ ರಾಜಶೇಖರ್ ಹಿಟ್ನಾಳ್, ಸಮಾಜದ ಏಳಿಗೆ ಮತ್ತು ಅಭಿವೃದ್ಧಿಗೆ ತಾವು ಸದಾ ಜೊತೆಯಾಗಿರುವುದಾಗಿ ಪುನರುಚ್ಚರಿಸಿದರು.
ಇದಕ್ಕೂ ಮುನ್ನ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳು, ಲಿಂಗಸುಗೂರಿನ ಸಿದ್ದಲಿಂಗ ಮಹಾಸ್ವಾಮಿಗಳು ಹಾಗೂ ಕೊಪ್ಪಳದ ಗೋಸಾಯಿಬಾವಾ ಅವರ ಸಾನ್ನಿಧ್ಯದಲ್ಲಿ ಸಂತ ಶ್ರೀ ಸದ್ಗುರು ಸೇವಾಲಾಲ್ ಮಹಾರಾಜ ಹಾಗೂ ಭಾರತರತ್ನ ಡಾ. ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರಗಳಿಗೆ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಕಾರ್ಯಕ್ರಮದಲ್ಲಿ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆಗಳಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನಗಳ ಆಧಾರದ ಮೇಲೆ ಆಯ್ಕೆ ಮಾಡಿ ಪ್ರಶಸ್ತಿ, ನಗದು ಬಹುಮಾನ ಹಾಗೂ ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಗೊಟಗೋಡಿ ಜಾನಪದ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ. ಡಿ.ಬಿ. ನಾಯ್ಕ್ ಮಾತನಾಡಿ, ಶಿಕ್ಷಣವು ವ್ಯಕ್ತಿಯ ಜೀವನವನ್ನು ರೂಪಿಸುವ ಅಮೂಲ್ಯ ಸಂಪತ್ತು. ವಿದ್ಯಾರ್ಥಿಗಳು ಸ್ಪಷ್ಟ ಗುರಿ, ಶಿಸ್ತು ಹಾಗೂ ನಿರಂತರ ಪರಿಶ್ರಮದ ಮೂಲಕ ಉನ್ನತ ಸಾಧನೆ ಮಾಡಬೇಕು ಎಂದು ಸಲಹೆ ನೀಡಿದರು.
ಬಾಗಲಕೋಟೆ ಜಿಲ್ಲೆಯ ನಿವೃತ್ತ ಮುಖ್ಯ ಅಭಿಯಂತರ ಕೃಷ್ಣ ಜಿ. ಚವ್ಹಾಣ ಮಾತನಾಡಿ, ಯಶಸ್ಸಿನ ಹಿಂದೆ ಸಮಯದ ಸದ್ಬಳಕೆ ಮತ್ತು ಏಕಾಗ್ರತೆ ಪ್ರಮುಖ ಪಾತ್ರವಹಿಸುತ್ತವೆ. ವಿದ್ಯಾರ್ಥಿಗಳು ನಿಯಮಿತ ಅಧ್ಯಯನದ ಮೂಲಕ ತಮ್ಮ ಗುರಿ ಸಾಧಿಸಬೇಕು ಎಂದು ಕರೆ ನೀಡಿದರು.
ಹರಿಲಾಲ್ ನಾಯ್ಕ್ ಮಾತನಾಡಿ, ಶಿಕ್ಷಣವೇ ಸಮಾಜದ ಅಭಿವೃದ್ಧಿಗೆ ಅತ್ಯಂತ ಪರಿಣಾಮಕಾರಿ ಸಾಧನವಾಗಿದ್ದು, ಬಂಜಾರ ಸಮಾಜದ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆದು ವಿವಿಧ ಕ್ಷೇತ್ರಗಳಲ್ಲಿ ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡಬೇಕು ಎಂದು ಆಶಿಸಿದರು.
ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಬಸವರಾಜ ಹಿಟ್ನಾಳ್, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಗವಿಸಿದ್ದಪ್ಪ ಕರಡಿ, ಎಐಬಿಎಸ್ಎಸ್ ಕೊಪ್ಪಳ ಜಿಲ್ಲಾಧ್ಯಕ್ಷ ಲಕ್ಷ್ಮಣ ನಾಯ್ಕ್, ಯುವ ಮುಖಂಡ ಪಂಪಣ್ಣ ಪೂಜಾರ, ಕಿಮ್ಸ್ ವೈದ್ಯ ಡಾ. ಶ್ರೀನಿವಾಸ್ ನಾಯ್ಕ್, ಮಾಜಿ ತಾ.ಪಂ. ಸದಸ್ಯ ಹನುಮಂತಪ್ಪ ನಾಯ್ಕ್, ಬಂಜಾರ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಶಿವಾನಂದ ನಾಯ್ಕ್, ಕಲ್ಯಾಣಪ್ಪ ನಾಯ್ಕ್, ತಾ.ಪಂ. ಸದಸ್ಯ ವೆಂಕಟೇಶ್ ನಾಯ್ಕ್, ಭರತ್ ನಾಯ್ಕ್ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.
ಸಮಾಜದ ಹಿರಿಯರು, ನೌಕರರು, ಪೋಷಕರು, ವಿದ್ಯಾರ್ಥಿಗಳು ಹಾಗೂ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮದ ಯಶಸ್ಸಿಗೆ ಸಾಕ್ಷಿಯಾದರು. ಕೃಷಿ ಇಲಾಖೆಯ ಅಧಿಕಾರಿ ಪ್ರಕಾಶ್ ರಾಠೋಡ್ ಕಾರ್ಯಕ್ರಮ ನಿರೂಪಿಸಿದರೆ, ತುಕಾರಾಂ ನಾಯ್ಕ್ ಸ್ವಾಗತಿಸಿದರು.