BIG NEWS :ಶಾಸಕ ರಾಯರಡ್ಡಿ ದ್ವಂದ್ವ ನೀತಿ ಸರಿಯಲ್ಲ; ರೈತರನ್ನು ದಾರಿ ತಪ್ಪಿಸುವ ಕೆಲಸ: ಬಿಜೆಪಿ ಜಿಲ್ಲಾಧ್ಯಕ್ಷ ನವೀನ ಗುಳಗಣ್ಣನವರ್ ಆರೋಪ!
PV NEWS ಕನ್ನಡ 24×7 :
ಕೊಪ್ಪಳ, ಜು 12 : ಯಲಬುರ್ಗಾ ಕ್ಷೇತ್ರದಲ್ಲಿ ವಿದ್ಯುತ್ ಉತ್ಪಾದನಾ ಯೋಜನೆಗಳಿಗಾಗಿ ರೈತರ ಭೂಮಿ ವಿಚಾರದಲ್ಲಿ ಶಾಸಕ ಬಸವರಾಜ ರಾಯರಡ್ಡಿ ದ್ವಂದ್ವ ನೀತಿ ಅನುಸರಿಸುತ್ತಿದ್ದು, ಇದು ರೈತರನ್ನು ದಾರಿ ತಪ್ಪಿಸುವ ಕೆಲಸವಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ನವೀನಕುಮಾರ ಗುಳಗಣ್ಣನವರ್ ತೀವ್ರ ಆರೋಪಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ‘ಒಂದೆಡೆ ತಮ್ಮ ಆಪ್ತರ ಮೂಲಕ ಖಾಸಗಿ ಕಂಪನಿಗಳಿಗೆ ರೈತರ ಭೂಮಿ ಕೊಡಿಸುವ ಪ್ರಯತ್ನ ನಡೆಯುತ್ತಿದ್ದರೆ, ಮತ್ತೊಂದೆಡೆ ತಾವೇ ರೈತರಿಗೆ ಭೂಮಿ ನೀಡಬೇಡಿ ಎಂದು ಪ್ರಕಟಣೆ ಹೊರಡಿಸುವುದು ಸಂಪೂರ್ಣ ವಿರೋಧಾಭಾಸದ ನಡೆ’ ಎಂದು ಕಿಡಿಕಾರಿದ್ದಾರೆ.
ಯಲಬುರ್ಗಾ ಕ್ಷೇತ್ರದಲ್ಲಿ ಈಗಾಗಲೇ ಸಾವಿರಾರು ಎಕರೆ ಪ್ರದೇಶದಲ್ಲಿ ವಿಂಡ್‌ಮಿಲ್ ಹಾಗೂ ಸೌರ ವಿದ್ಯುತ್ ಯೋಜನೆಗಳು ಸ್ಥಾಪನೆಯಾಗಿವೆ. ಇಂತಹ ಯೋಜನೆಗಳಿಗೆ ರೈತರ ಭೂಮಿ ಒದಗಿಸುವ ವ್ಯವಹಾರದಲ್ಲಿ ಶಾಸಕರ ಆಪ್ತರು ಭಾಗಿಯಾಗಿರುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ ಎಂದು ಅವರು ಆರೋಪಿಸಿದ್ದಾರೆ.
ಇಂತಹ ಬೆಳವಣಿಗೆಗಳ ನಡುವೆಯೇ ಶಾಸಕರು ರೈತರಿಗೆ ಭೂಮಿ ನೀಡಬೇಡಿ ಎಂದು ಕರೆ ನೀಡುತ್ತಿರುವುದು ಹಾಸ್ಯಾಸ್ಪದವಾಗಿದೆ. ಇದು “ಬೇಲಿಯೇ ಎದ್ದು ಹೊಲ ಮೇಯ್ದಂತಾಗಿದೆ” ಎಂದು ಗುಳಗಣ್ಣನವರ್ ವ್ಯಂಗ್ಯವಾಡಿದ್ದಾರೆ.
ಕ್ಷೇತ್ರದಲ್ಲಿ ಕಳೆದ ಎರಡು ದಿನಗಳಿಂದ ಶಾಸಕರ ಆಪ್ತ ನವಲಿ ಹಿರೇಮಠ ಅವರು ವಿದ್ಯುತ್ ಯೋಜನೆಗಳಿಗಾಗಿ ಭೂಮಿ ವ್ಯವಹಾರ ನಡೆಸುತ್ತಿರುವುದಾಗಿ ಹೇಳಲಾದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಭೂಮಿ ನೀಡಿದ ರೈತರ ಮೇಲೆ ಪೊಲೀಸ್ ಒತ್ತಡದ ಮೂಲಕ ಭೂಮಿ ಪಡೆಯುವ ಕೆಲಸವೂ ನಡೆಯುತ್ತಿದೆ ಎಂಬ ಆರೋಪಗಳು ಕೇಳಿಬರುತ್ತಿವೆ ಎಂದು ಅವರು ತಿಳಿಸಿದ್ದಾರೆ.
ಆರಂಭದಲ್ಲಿಯೇ ಈ ಪ್ರಕ್ರಿಯೆಯನ್ನು ತಡೆಯಬೇಕಿದ್ದ ಶಾಸಕರು ಈಗ ದಿನಕ್ಕೊಂದು ಪತ್ರ ಬರೆದು ಕೇಂದ್ರ ಸರ್ಕಾರದ ಮೇಲೆ ಹೊಣೆ ಹೊರಿಸುವ ಪ್ರಯತ್ನ ಮಾಡುತ್ತಿದ್ದಾರೆ. ಅಲ್ಲದೆ, ರೈತರಿಂದ ಯಾವುದೇ ದೂರು ಬಂದಿಲ್ಲ ಎಂದು ಹೇಳುವ ಮೂಲಕ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳುತ್ತಿದ್ದಾರೆ ಎಂದು ಅವರು ಟೀಕಿಸಿದ್ದಾರೆ.
ಒಂದೆಡೆ ಕ್ಷೇತ್ರಕ್ಕೆ ನೀರಾವರಿ ತರುವುದು ಕಷ್ಟ, ನೀರಿನ ಮೂಲಗಳೇ ಇಲ್ಲ ಎಂದು ಭಾಷಣ ಮಾಡುವ ಶಾಸಕರು, ಮತ್ತೊಂದೆಡೆ ಮುಂದಿನ ದಿನಗಳಲ್ಲಿ ನೀರಾವರಿ ಬರಲಿರುವುದರಿಂದ ರೈತರು ಭೂಮಿ ಕಳೆದುಕೊಳ್ಳಬಾರದು ಹೇಳುತ್ತಿರುವುದು ಪರಸ್ಪರ ವಿರುದ್ಧವಾದ ಹೇಳಿಕೆಗಳಾಗಿವೆ. ಇದೇ ವೇಳೆ ತಮ್ಮ ಆಪ್ತರ ಮೂಲಕ ವಿದ್ಯುತ್ ಉತ್ಪಾದನಾ ಯೋಜನೆಗಳಿಗೆ ಭೂಮಿ ಖರೀದಿಸುವ ಕೆಲಸ ನಡೆಯುತ್ತಿದೆ ಎಂದು ಅವರು ಆರೋಪಿಸಿದ್ದಾರೆ.
ಶಾಸಕರ ಇಂತಹ ನಡೆ ಮತ್ತು ದ್ವಂದ್ವ ರಾಜಕಾರಣವನ್ನು ಕ್ಷೇತ್ರದ ಜನತೆ ಸೂಕ್ಷ್ಮವಾಗಿ ಗಮನಿಸುತ್ತಿದ್ದು, ಮುಂದಿನ ಚುನಾವಣೆಯಲ್ಲಿ ತಕ್ಕ ಉತ್ತರ ನೀಡಲಿದ್ದಾರೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ನವೀನಕುಮಾರ ಗುಳಗಣ್ಣನವರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.