LOCAL NEWS : ನಮ್ಮ ದೇಶದ ಸಂವಿಧಾನ ನಮ್ಮೆಲ್ಲರ “ಉತ್ತಮ ಜೀವನದ ಮಾರ್ಗದರ್ಶಿ” : ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಚಂದ್ರಶೇಖರ್ ಸಿ ಅಭಿಮತ!

ಪ್ರಜಾ ವೀಕ್ಷಣೆ ಕೊಪ್ಪಳ ಸುದ್ದಿ :
ಕೊಪ್ಪಳ : ನಮ್ಮ ದೇಶದ ಸಂವಿಧಾನ ನಮ್ಮೆಲ್ಲರ “ಉತ್ತಮ ಜೀವನದ ಮಾರ್ಗದರ್ಶಿ” ನ್ಯಾಯ, ಸ್ವಾತಂತ್ರ್ಯ, ಮತ್ತು ಸಮಾನತೆ ಸ್ಥಾಪಿಸುವಲ್ಲಿ ಸಂವಿಧಾನ ಬುನಾದಿಯಾಗಿದ್ದು, ಯುವಪೀಳಿಗೆ ನಮ್ಮ ಸಂವಿಧಾನವನ್ನು ಸರಿಯಾಗಿ ಅರ್ಥೈಸಿಕೊಂಡು, ಅನುಸರಣೆ ಮಾಡುವುದು ಮುಖ್ಯವಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರೂ, ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರು ಆದ ಚಂದ್ರಶೇಖರ್ ಸಿ.ರವರು ಯುವಕರಿಗೆ ಕರೆ ನೀಡಿದರು.

ಇಂದು ಕೊಪ್ಪಳ ವಿಶ್ವವಿದ್ಯಾಲಯದಲ್ಲಿ ಆಯೋಜಿಸಲಾಗಿದ್ದ, ನವೆಂಬರ್ 26ನೇ “ವಿಧಾನ ದಿನಾಚರಣೆ” ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ‘ಸಂವಿಧಾನವು ಏಕತೆ ಮತ್ತು ಸಮಗ್ರತೆಯನ್ನು ಎತ್ತಿ ಹಿಡಿಯುವ ಭಾರತದ ಪವಿತ್ರ ಮಹಾಗ್ರಂಥವಾಗಿದೆ, ಪ್ರತಿಯೊಬ್ಬರೂ ಹಕ್ಕುಗಳ ಜೊತೆಗೆ ಕರ್ತವ್ಯಗಳನ್ನು ಸಹ ಪಾಲಿಸಬೇಕು, ಸಂವಿಧಾನದ ಮೂಲ ಆಶಯಗಳನ್ನು ಗೌರವಿಸುವುದು ನಮ್ಮ ಜವಾಬ್ದಾರಿಯಾಗಿದೆ ಎಂದರು.
“ಮಹಿಳೆಯರು, ಮಕ್ಕಳು, ಕಾರ್ಮಿಕರು ಸೇರಿದಂತೆ ಸಮಾಜದ ವಿವಿಧ ಸಮುದಾಯಗಳಿಗೆ ತಕ್ಕ ಮಟ್ಟಿಗೆ ನ್ಯಾಯ, ಸ್ವಾತಂತ್ರ್ಯ, ಮತ್ತು ಸಮಾನತೆ ಸ್ಥಾಪನೆ ಆಗಿದ್ದರೆ, ಅದು ಬಾಬಾ ಸಾಹೇಬ್ ಅಂಬೇಡ್ಕರ್ ಅವರ ರಚನೆಯ ಸಂವಿಧಾನದಿಂದ ಸಾಧ್ಯ ಎಂದರು.
ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿದ್ದ ಬೆಂಗಳೂರು ವಿಶ್ವವಿದ್ಯಾಲಯದ ಕಾನೂನು ನಿಕಾಯದ ಡೀನ್ ಪ್ರೊ. ವಿ ಸುದೇಶ ಅವರು ಮಾತನಾಡಿ, ‘ನಮ್ಮ ದೇಶವು ಜಾಗತಿಕ ಮಟ್ಟದಲ್ಲಿ ಪ್ರಬಲ ರಾಷ್ಟ್ರವಾಗಿ ಮುಂದುವರೆಯುತ್ತಿರುವುದಕ್ಕೆ , ಶಾಂತಿಯುತ ರಾಷ್ಟ್ರವಾಗಿರುವುದಕ್ಕೆ ಮೂಲ ಕಾರಣ ನಮ್ಮ ಸಂವಿಧಾನ ಎಂದರು.
ಬಳಿಕ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಬಿ.ಕೆ. ರವಿಯವರು ಮಾತನಾಡಿ, ‘ಅವಕಾಶವಂಚಿತ ಸಮುದಾಯಕ್ಕೆ ಸಂವಿಧಾನ ಧ್ವನಿಯಾಗಿದೆ. ಅಂಬೇಡ್ಕರವರು ನೀಡಿದ ಈ ಸಂವಿಧಾನದಿಂದಾಗಿಯೇ ಪ್ರತಿಯೊಬ್ಬರಿಗೂ ಅಭಿವ್ಯಕ್ತಿ ಸ್ವಾತಂತ್ರ್ಯ ಲಭಿಸಿದ್ದು, ಸಂವಿಧಾನದ ಆಶಯಗಳ ಸಮಗ್ರ ಪಾಲನೆಯಿಂದ ಸಮ ಸಮಾಜ ನಿರ್ಮಾಣ ಸಾಧ್ಯವಿದೆ. ,ಪ್ರತಿಯೊಬ್ಬರೂ ಸಂವಿಧಾನವನ್ನು ಅಧ್ಯಯನ ಮಾಡಬೇಕೆಂದರು.
ಇದೇ ವೇಳೆ ಕೋಲಾರದ ಕಾನೂನು ಕಾಲೇಜು ಸಹಾಯಕ ಪ್ರಾಧ್ಯಾಪಕ ಡಾ.ಗೋಪಾಲ ಅಂಜನಪ್ಪ ಉಪಸ್ಥಿತರಿದ್ದರು. ಈ ಸಮಾರಂಭದಲ್ಲಿ ಸಂವಿಧಾನದ ಪೀಠಿಕೆ ಬೋಧನೆ , ವಿದ್ಯಾರ್ಥಿಗಳಿಂದ ಪ್ರಮಾಣವಚನ ಹಾಗೂ ಅಂಬೇಡ್ಕರ ಭಾವಚಿತ್ರಕ್ಕೆ ಪುಷ್ಪನಮನ ಕಾರ್ಯಕ್ರಮಗಳು ಸಹ ನಡೆದವು. ವಿ.ವಿ.ಯ ಪ್ರದರ್ಶನ ಕಲಾ ವಿಭಾಗದ ವಿದ್ಯಾರ್ಥಿಗಳಿಂದ ಪ್ರಾರ್ಥನೆ, ನಾಡಗೀತೆ ನಡೆಯಿತು. ವಿ.ವಿ .ಆಡಳಿತಾಧಿಕಾರಿ ಪ್ರೊ. ತಿಮ್ಮಾರೆಡ್ಡಿ ಮೇಟಿಯವರು ಸಂವಿಧಾನದ ದಿನಾಚರಣೆ ಕುರಿತು ಪ್ರಾಸ್ತವಿಕವಾಗಿ ಮಾತನಾಡಿದರು.ಪ್ರಾದ್ಯಾಪಕ ಡಾ.ಸುಧಾಕರ ಕಾರ್ಯಕ್ರಮ ನಿರೂಪಿಸಿದರು, ಡಾ ಬಸವರಾಜ ಗಡಾದ ವಂದಿಸಿದರು.