You are currently viewing PV NEWS : ಕುಕನೂರು | ಶಾಲೆಯೇ ಮದ್ಯದ ಅಡ್ಡೆಯಾಯಿತೇ? : ಕಿಡಿಗೇಡಿಗಳ ಅಟ್ಟಹಾಸಕ್ಕೆ ಸರ್ಕಾರಿ ಶಾಲೆ ಗುರಿ: ಬೀಗ ಮುರಿದು ಮದ್ಯಪಾನ, ಸಾರ್ವಜನಿಕ ಆಕ್ರೋಶ!

PV NEWS : ಕುಕನೂರು | ಶಾಲೆಯೇ ಮದ್ಯದ ಅಡ್ಡೆಯಾಯಿತೇ? : ಕಿಡಿಗೇಡಿಗಳ ಅಟ್ಟಹಾಸಕ್ಕೆ ಸರ್ಕಾರಿ ಶಾಲೆ ಗುರಿ: ಬೀಗ ಮುರಿದು ಮದ್ಯಪಾನ, ಸಾರ್ವಜನಿಕ ಆಕ್ರೋಶ!

PV NEWS : ಕುಕನೂರು | ಶಾಲೆಯೇ ಮದ್ಯದ ಅಡ್ಡೆಯಾಯಿತೇ? : ಕಿಡಿಗೇಡಿಗಳ ಅಟ್ಟಹಾಸಕ್ಕೆ ಸರ್ಕಾರಿ ಶಾಲೆ ಗುರಿ: ಬೀಗ ಮುರಿದು ಮದ್ಯಪಾನ, ಸಾರ್ವಜನಿಕ ಆಕ್ರೋಶ!

PV NEWS ಕನ್ನಡ 24×7 : 

ಕುಕನೂರು, ಜು. 11: ತಾಲೂಕಿನ ಮಂಡಲಗೇರಿ ಗ್ರಾಮದ ಸರ್ಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಿಡಿಗೇಡಿ ಯುವಕರ ಗುಂಪೊಂದು ರಾತ್ರಿ ವೇಳೆ ನುಗ್ಗಿ ಶಾಲೆಯ ಆಸ್ತಿಪಾಸ್ತಿಗಳಿಗೆ ಹಾನಿ ಉಂಟುಮಾಡಿ, ಶಾಲೆಯ ಆವರಣವನ್ನೇ ಮದ್ಯಪಾನದ ತಾಣವನ್ನಾಗಿ ಬಳಸಿರುವ ಘಟನೆ ಬೆಳಕಿಗೆ ಬಂದಿದೆ. ಈ ಘಟನೆ ಗ್ರಾಮಸ್ಥರಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ಮಾಹಿತಿಯ ಪ್ರಕಾರ, ರಾತ್ರಿ ವೇಳೆಯಲ್ಲಿ ಶಾಲೆಗೆ ನುಗ್ಗಿದ ಕಿಡಿಗೇಡಿಗಳು ಅಡುಗೆ ಕೋಣೆಯ ಬೀಗ, ದಾಸ್ತಾನು ಕೊಠಡಿಯ (ಸ್ಟೋರ್ ರೂಮ್) ಬೀಗಗಳನ್ನು ಮುರಿದು ಧ್ವಂಸಗೊಳಿಸಿದ್ದಾರೆ. ಬಳಿಕ ತರಗತಿ ಕೊಠಡಿಗಳ ಬಾಗಿಲುಗಳಿಗೂ ಹಾನಿ ಮಾಡಿ, ಶಾಲೆಯ ಆವರಣದಲ್ಲೇ ಮದ್ಯಪಾನ ಮಾಡಿ ಬಾಟಲಿಗಳು ಹಾಗೂ ಇತರ ತ್ಯಾಜ್ಯಗಳನ್ನು ಬಿಟ್ಟು ಹೋಗಿದ್ದಾರೆ ಎನ್ನಲಾಗಿದೆ.

ಇದಷ್ಟೇ ಅಲ್ಲದೆ, ಶಾಲೆಯ ಮುಂಭಾಗದಲ್ಲಿದ್ದ ನಾಮಫಲಕದ ಹೆಸರನ್ನು ಕಿತ್ತುಹಾಕಲು ಸಹ ಯತ್ನಿಸಿರುವುದು ಬೆಳಕಿಗೆ ಬಂದಿದೆ. ಸಾರ್ವಜನಿಕರ ಆಸ್ತಿಯಾಗಿರುವ ಶಾಲೆಯ ಮೇಲೆಯೇ ಈ ರೀತಿಯ ದುಷ್ಕೃತ್ಯ ನಡೆದಿರುವುದು ಗ್ರಾಮಸ್ಥರನ್ನು ಬೆಚ್ಚಿಬೀಳಿಸಿದೆ.

ಈ ಸಂಬಂಧ ಶಾಲೆಯ ಮುಖ್ಯೋಪಾಧ್ಯಾಯರಾದ ಮಾರುತಿ ಬಜೇಂತ್ರಿ, ಎಸ್‌ಡಿಎಂಸಿ ಅಧ್ಯಕ್ಷ ಶಿವಮೂರ್ತಿ ಬಿ. ದಳವಾಯಿ ಹಾಗೂ ಆಡಳಿತ ಮಂಡಳಿಯ ಸದಸ್ಯರು ಜಂಟಿಯಾಗಿ ಕುಕನೂರು ಪೊಲೀಸ್ ಠಾಣೆಯ ಪಿಎಸ್‌ಐ ಅವರಿಗೆ ಲಿಖಿತ ದೂರು ಸಲ್ಲಿಸಿದ್ದಾರೆ. ಜುಲೈ 6ರಂದು ದೂರು ನೀಡಲಾಗಿದ್ದು, ಜುಲೈ 9ರಂದು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

“ಶಾಲೆ ಶಿಕ್ಷಣದ ದೇವಾಲಯ. ಅಂತಹ ಪವಿತ್ರ ಸ್ಥಳದಲ್ಲೇ ಕಿಡಿಗೇಡಿಗಳು ಮದ್ಯಪಾನ ಮಾಡಿ ಆಸ್ತಿಪಾಸ್ತಿಗಳನ್ನು ಧ್ವಂಸಗೊಳಿಸಿರುವುದು ಅತ್ಯಂತ ಖಂಡನೀಯ. ತಪ್ಪಿತಸ್ಥರನ್ನು ಕೂಡಲೇ ಬಂಧಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು” ಎಂದು ಶಾಲಾ ಆಡಳಿತ ಮಂಡಳಿ ಹಾಗೂ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಗ್ರಾಮದ ಜನರು ಶಾಲಾ ಆವರಣದಲ್ಲಿ ರಾತ್ರಿ ವೇಳೆಯಲ್ಲಿ ಪೊಲೀಸ್ ಗಸ್ತು ಹೆಚ್ಚಿಸುವಂತೆ, ಶಾಲೆಗಳಿಗೆ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸುವಂತೆ ಹಾಗೂ ಸಾರ್ವಜನಿಕ ಆಸ್ತಿಗಳನ್ನು ಧ್ವಂಸಗೊಳಿಸುವ ಸಮಾಜಘಾತುಕ ಶಕ್ತಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳನ್ನು ಆಗ್ರಹಿಸಿದ್ದಾರೆ.

ಘಟನೆಯ ಕುರಿತು ಕುಕನೂರು ಪೊಲೀಸರು ತನಿಖೆ ಮುಂದುವರಿಸಿದ್ದು, ಕಿಡಿಗೇಡಿಗಳನ್ನು ಶೀಘ್ರದಲ್ಲೇ ಪತ್ತೆಹಚ್ಚುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ವರದಿ : ಚಂದ್ರು ಆರ್. ಭಾನಾಪುರ,

Prajavikshane

Chandru R Bhanapaur

Leave a Reply

error: Content is protected !!