You are currently viewing LOCAL NEWS : ಕುಕನೂರು|ಸಮಾಜವನ್ನು ಸರಿದಾರಿಗೆ ತರುವ ಶಕ್ತಿ ಪತ್ರಿಕಾರಂಗಕ್ಕಿದೆ – ಗ್ರೇಡ್ 2 ತಹಶೀಲ್ದಾರ್ ಮುರುಳಿದರ ರಾವ್ ಕುಲಕರ್ಣಿ!

LOCAL NEWS : ಕುಕನೂರು|ಸಮಾಜವನ್ನು ಸರಿದಾರಿಗೆ ತರುವ ಶಕ್ತಿ ಪತ್ರಿಕಾರಂಗಕ್ಕಿದೆ – ಗ್ರೇಡ್ 2 ತಹಶೀಲ್ದಾರ್ ಮುರುಳಿದರ ರಾವ್ ಕುಲಕರ್ಣಿ!

LOCAL NEWS : ಕುಕನೂರು|ಸಮಾಜವನ್ನು ಸರಿದಾರಿಗೆ ತರುವ ಶಕ್ತಿ ಪತ್ರಿಕಾರಂಗಕ್ಕಿದೆ – ಗ್ರೇಡ್ 2 ತಹಶೀಲ್ದಾರ್ ಮುರುಳಿದರ ರಾವ್ ಕುಲಕರ್ಣಿ!

ಇಟಗಿ ಪಿಎಂ ಶ್ರೀ ಆದರ್ಶ ವಿದ್ಯಾಲಯದಲ್ಲಿ ಪತ್ರಿಕಾ ದಿನಾಚರಣೆ.!

ಪ್ರಜಾವೀಕ್ಷಣೆ ಡಿಜಿಟಲ್ ಸುದ್ದಿ : 

​ಕುಕನೂರು, ಜುಲೈ 01 : ತಾಲ್ಲೂಕಿನ ಇಟಗಿ ಗ್ರಾಮದ ಪಿಎಂ ಶ್ರೀ ಆದರ್ಶ ವಿದ್ಯಾಲಯದಲ್ಲಿ ಇಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ (ರಿ.) ಬೆಂಗಳೂರು, ತಾಲ್ಲೂಕು ಸಮಿತಿ ಕುಕನೂರು ಇವರ ಆಶ್ರಯದಲ್ಲಿ ‘ಪತ್ರಿಕಾ ದಿನಾಚರಣೆ’ ಕಾರ್ಯಕ್ರಮವನ್ನು ಅತ್ಯಂತ ಯಶಸ್ವಿಯಾಗಿ ಹಮ್ಮಿಕೊಳ್ಳಲಾಗಿತ್ತು.

​ಪತ್ರಿಕಾ ರಂಗದ ದಿಗ್ಗಜ ಡಿವಿಜಿಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ, ಬಳಿಕ ಸಸಿಗಳಿಗೆ ನೀರುಣಿಸುವ ಮೂಲಕ ಕಾರ್ಯಕ್ರಮ ಉದ್ಘಾಟನೆ ಮಾಡಲಾಯಿತು.

 ಉದ್ಘಾಟನೆಯನ್ನು ನೆರವೇರಿಸಿದ ಕುಕನೂರಿನ ಗ್ರೇಡ್-2 ತಹಶೀಲ್ದಾರ್ ಮುರುಳಿದರ ರಾವ್ ಕುಲಕರ್ಣಿ ಅವರು ಮಾತನಾಡಿ, “ಪ್ರಜಾಪ್ರಭುತ್ವದ ಪ್ರಮುಖ ಅಂಗಗಳಾದ ಶಾಸಕಾಂಗ ಹಾಗೂ ಕಾರ್ಯಾಂಗಗಳಲ್ಲಿ ಯಾವುದೇ ಲೋಪದೋಷಗಳು ಅಥವಾ ತಪ್ಪುಗಳು ನಡೆದಾಗ, ಅವುಗಳನ್ನು ಧೈರ್ಯದಿಂದ ಸಮಾಜದ ಮುಂದೆ ಎತ್ತಿ ತೋರಿಸುವ ಏಕೈಕ ಶಕ್ತಿಶಾಲಿ ಅಂಗವೆಂದರೆ ಅದು ಪತ್ರಿಕಾರಂಗ. ಹಾಗಾಗಿ, ಪತ್ರಿಕಾರಂಗವು ಇಂದಿಗೂ ಸಮಾಜವನ್ನು ಅತ್ಯಂತ ಜವಾಬ್ದಾರಿಯುತವಾಗಿ ಸರಿದಾರಿಗೆ ಕೊಂಡೊಯ್ಯುವಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತಿದೆ,” ಎಂದು ಅಭಿಪ್ರಾಯಪಟ್ಟರು.

​ಮುಂದುವರಿದು ಮಾತನಾಡಿದ ಕುಲಕರ್ಣಿ, “ಇತ್ತೀಚಿನ ದಿನಗಳಲ್ಲಿ ಸಮೂಹ ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿಗಳ (ಫೇಕ್ ನ್ಯೂಸ್) ಹಾವಳಿ ಅತ್ಯಂತ ವೇಗವಾಗಿ ಹೆಚ್ಚಾಗುತ್ತಿದೆ. ಇಂತಹ ಕಠಿಣ ಸನ್ನಿವೇಶದಲ್ಲೂ ಪತ್ರಿಕಾರಂಗವು ತನ್ನ ಸತ್ಯಾಸತ್ಯತೆ ಮತ್ತು ನೈಜತೆಯನ್ನು ಕಾಯ್ದುಕೊಂಡು ಬಂದಿರುವುದು ಶ್ಲಾಘನೀಯ. ಸಾರ್ವಜನಿಕರಲ್ಲಿ ವಿಶ್ವಾಸಾರ್ಹತೆ ಉಳಿಸಿಕೊಳ್ಳುವ ಮೂಲಕ ಮುದ್ರಣ ಮಾಧ್ಯಮವು ಸಮಾಜದಲ್ಲಿ ಇಂದಿಗೂ ಅತ್ಯಂತ ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ,” ಎಂದರು.

​ಇದೇ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಯಲಬುರ್ಗಾ-ಕುಕನೂರು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ (ಬಿಇಒ) ಅಶೋಕ್ ಗೌಡ್ರು ಅವರು ಮಾತನಾಡಿ, ವಿದ್ಯಾರ್ಥಿ ದೆಸೆಯಿಂದಲೇ ಪತ್ರಿಕೆಗಳನ್ನು ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು. ಇದು ಜ್ಞಾನಾರ್ಜನೆಗೆ ಹಾಗೂ ದೇಶ-ವಿದೇಶಗಳ ವಿದ್ಯಮಾನಗಳನ್ನು ಅರಿಯಲು ಸಹಕಾರಿಯಾಗುತ್ತದೆ. ಪ್ರತಿಯೊಬ್ಬರೂ ಮನೆಗೆ ದಿನಪತ್ರಿಕೆ ತರಿಸಿ ಓದುವ ಅಭ್ಯಾಸ ಬೆಳೆಸಿಕೊಳ್ಳಬೇಕು. ಮೊಬೈಲ್ ಚಟಕ್ಕೆ ಬಲಿಯಾಗದೆ ಓದಿನತ್ತ ಹೆಚ್ಚಿನ ಗಮನ ಹರಿಸುವ ಮೂಲಕ ಜ್ಞಾನವನ್ನು ವೃದ್ಧಿಸಿಕೊಳ್ಳಬೇಕು. ಪ್ರಿಂಟ್ ಮೀಡಿಯಾ ಹಾಗೂ ಎಲೆಕ್ಟ್ರಾನಿಕ್ ಮೀಡಿಯಾ ಸಮಾಜಕ್ಕೆ ನಿಖರ ಮಾಹಿತಿ ತಲುಪಿಸುವುದು, ಜನಜಾಗೃತಿ ಮೂಡಿಸುವುದು ಹಾಗೂ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಬಲಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿವೆ ಎಂದು ತಿಳಿಸಿದರು.

“ವಿಜ್ಞಾನ ಮತ್ತು ತಂತ್ರಜ್ಞಾನದ ಯುಗದಲ್ಲಿ ಸಾಮಾಜಿಕ ಜಾಲತಾಣಗಳ ಬಳಕೆ ವ್ಯಾಪಕವಾಗಿ ಹೆಚ್ಚಿದ್ದು, ಮಾಹಿತಿ ಕ್ಷಣಾರ್ಧದಲ್ಲಿ ಹರಡುತ್ತಿದೆ. ಇಂತಹ ಸಂದರ್ಭದಲ್ಲಿ ಪೊಲೀಸರು ಮತ್ತು ಪತ್ರಕರ್ತರ ಕೆಲಸ ಮತ್ತಷ್ಟು ಸವಾಲಿನಿಂದ ಕೂಡಿದೆ. ಜೀವದ ಹಂಗನ್ನೂ ತೊರೆದು, ಯಾವುದೇ ಒತ್ತಡಗಳಿಗೆ ಮಣಿಯದೆ ಸತ್ಯವನ್ನು ಜನರಿಗೆ ತಲುಪಿಸುವ ನಿಮ್ಮ ನಿಷ್ಪಕ್ಷಪಾತ ಸೇವೆ ನಿಜಕ್ಕೂ ಶ್ಲಾಘನೀಯ.

ಹಲವು ಪ್ರಕರಣಗಳಲ್ಲಿ ತನಿಖೆಯ ಹಂತದಲ್ಲಿ ಪತ್ರಕರ್ತರು ನೀಡುವ ಮಾಹಿತಿ ಹಾಗೂ ಸಾರ್ವಜನಿಕರಲ್ಲಿ ಮೂಡಿಸುವ ಜಾಗೃತಿ ಪೊಲೀಸ್ ಇಲಾಖೆಯ ಕಾರ್ಯಕ್ಕೆ ಸಹಕಾರಿಯಾಗುತ್ತದೆ. ಪ್ರಜಾಪ್ರಭುತ್ವದ ನಾಲ್ಕನೇ ಸ್ತಂಭವಾದ ಮಾಧ್ಯಮವು ಸದಾ ಸತ್ಯ, ನ್ಯಾಯ ಮತ್ತು ಧರ್ಮದ ಪರವಾಗಿ ನಿಲ್ಲಲಿ ಎಂಬುದು ನನ್ನ ಆಶಯ. ಪತ್ರಕರ್ತರ ಸುರಕ್ಷತೆ ಮತ್ತು ಅಗತ್ಯ ಸಹಕಾರಕ್ಕೆ ಪೊಲೀಸ್ ಇಲಾಖೆ ಸದಾ ಬದ್ಧವಾಗಿದೆ.”

 ಎಸ್.ಪಿ. ನಾಯ್ಕ್, ಪಿಎಸ್ಐ, ಪೊಲೀಸ್ ಠಾಣೆ ಕುಕನೂರು. 

​ಈ ಸಮಾರಂಭದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆಯ ತಾಲ್ಲೂಕು ಚಂದ್ರು ಆರ್. ಭಾನಾಪುರ್ ಅಧ್ಯಕ್ಷಿಯ ಮಾತುಗಳನ್ನಾಡಿದರು.

ಸಂಘದ ಪ್ರಧಾನ ಕಾರ್ಯದರ್ಶಿ ಬಸವರಾಜ ಕೊನಾರಿ ಪ್ರಾಸ್ತಾವಿಕವಾಗಿ ಮಾತನಾಡಿ, ಕನ್ನಡ ಪತ್ರಿಕೋದ್ಯಮ ಬೆಳೆದು ಬಂದ ಹಾದಿ, ಅದರ ಸಾಮಾಜಿಕ ಹೊಣೆಗಾರಿಕೆ ಹಾಗೂ ಇಂದಿನ ಬೆಳವಣಿಗೆಗಳ ಕುರಿತು ವಿವರಿಸಿದರು.

ಈ ಸಂದರ್ಭದಲ್ಲಿ ಕಾ.ನಿ.ಪ.ಧ್ವನಿ ಜಿಲ್ಲಾಧ್ಯಕ್ಷ ಸುನಿಲ ಕುಮಾರ ಮಠದ, ಗೌರವಾಧ್ಯಕ್ಷರಾದ ಮಹೇಶ್ ಕಲ್ಮಠ, ಶಾಲೆಯ ಮುಖ್ಯ ಗುರುಗಳು ಸಂತೋಷಿಕುಮಾರಿ, ಪ್ರಾಂಶುಪಾಲರಾದ ಬೀರಪ್ಪ ಕಾನಕುಡಕಿ, ಯಲಬುರ್ಗಾ ತಾಲೂಕು ಘಟಕದ ಅಧ್ಯಕ್ಷ ಶಿವಮೂರ್ತಿ ಇಟಗಿ, ಪಿಎಂಶ್ರೀ ಆದರ್ಶ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಸಂತೋಷಿಕುಮಾರಿ, ಪಿಯು ಕಾಲೇಜಿನ ಪ್ರಾಂಶುಪಾಲ ಬೀರಪ್ಪ ಕಾನ್ ಕುಡಕಿ ಹಾಗೂ ಶಿಕ್ಷಕಿ ಬಸಮ್ಮ ಮೇಟಿ ಮಾತನಾಡಿದರು.

ಕಾರ್ಯಕ್ರಮದ ಅಂಗವಾಗಿ ಪತ್ರಿಕಾ ದಿನಾಚರಣೆಯ ಸ್ಮರಣಾರ್ಥ ಶಾಲೆಯ 150 ವಿದ್ಯಾರ್ಥಿಗಳು ಹಾಗೂ ಶಿಕ್ಷಕರಿಗೆ ಪೆನ್ನುಗಳನ್ನು ವಿತರಿಸಲಾಯಿತು.

ಸಂಘದ ಉಪಾಧ್ಯಕ್ಷ ಮುರಾರಿ ಭಜಂತ್ರಿ ಪ್ರಾರ್ಥನಾ ಗೀತೆ ಹಾಡಿ ಕಾರ್ಯಕ್ರಮ ನಿರೂಪಿಸಿದರು. ಖಜಾಂಚಿ ವೀರಯ್ಯ ವಿ. ಹಿರೇಮಠ ಸ್ವಾಗತಿಸಿದರು. ಸಹ ಕಾರ್ಯದರ್ಶಿ ಭೀಮಾಶಂಕರ ಪಾಣೇಗಾಂವ ವಂದನಾರ್ಪಣೆ ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ಸಂಘದ ಪದಾಧಿಕಾರಿಗಳಾದ ಈರಯ್ಯ ಕುರ್ತುಕೋಟಿ, ಮುತ್ತಯ್ಯ ತೊಂಟದಾರ್ಯ ಮಠ, ಸಲೀಮ್ ಅಮರಾವತಿ, ಅಲ್ಲಾಬೇಗಂ ಅಮರಾವತಿ, ಮಲ್ಲಯ್ಯ ಗದುಗಿನ, ವಿಶ್ವನಾಥ ಪಟ್ಟಣಶೆಟ್ಟಿ ಸೇರಿದಂತೆ ಸಂಘದ ಸದಸ್ಯರು, ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

Prajavikshane

Chandru R Bhanapaur

Leave a Reply

error: Content is protected !!