ಬಾಗಲಕೋಟೆ : ಬೆಳ್ಳಂಬೆಳಗ್ಗೆ ಭೀಕರ ಅಪಘಾತ ಸಂಭವಿಸಿದ್ದು, ಲಾರಿ ಹಾಗೂ ಟ್ಯಾಂಕರ್ ಮುಖಾಮುಖಿ ಡಿಕ್ಕಿಯಾಗಿ ಸ್ಥಳದಲ್ಲೇ ಮೂವರು ಸಾವನ್ನಪ್ಪಿರುವ ಘಟನೆ ಬಾಗಲಕೋಟೆ ಜಿಲ್ಲೆಯಲ್ಲಿ ನಡೆದಿದೆ.
ಜಿಲ್ಲೆಯ ಮುಧೋಳ ತಾಲೂಕಿನ ಮಂಟನೂರು ಕ್ರಾಸ್ ಬಳಿ ಬೆಳಿಗ್ಗೆ ಲಾರಿ ಹಾಗೂ ಟ್ಯಾಂಕರ್ ನಡುವೆ ಮುಖಾಮುಖಿ ಡಿಕ್ಕಿಯಾಗಿದೆ. ಈ ಪರಿಣಾಮ ಸ್ಥಳದಲ್ಲೇ ಮಲ್ಲಿಕಾರ್ಜುನ್ ಗುರಿಕಾರ್ (22) ರೇವಣಸಿದ್ದಪ್ಪ ಕಡೆಮನಿ (20) ಹಾಗೂ ಸುರೇಶ್ ಕೊಣ್ಣೂರ್ (33) ಎಂಬುವರು ಸಾವನಪ್ಪಿದ್ದಾರೆ ಎಂದು ತಿಳಿದು ಬಂದಿದೆ.
ಇನ್ನು ಅಪಘಾತದಲ್ಲಿ ರಮೇಶ್ ಮಾದರ್ ಎಂಬಾತನಿಗೆ ಗಂಭೀರವಾದ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಮಾಹಿತಿ ಇದೆ.
ಡಿಕ್ಕಿಯಾದ ರಭಸಕ್ಕೆ ಲಾರಿ ಮತ್ತು ಸಿಮೆಂಟ್ ತುಂಬಿದ ಟ್ಯಾಂಕರ್ ನಜ್ಗುಗುಜ್ಜಾಗಿದ್ದು, ಈ ಘಟನಾ ಸ್ಥಳಕೆ ಎಸ್ ಪಿ ಸಿದ್ಧಾರ್ಥ ಗೋಯಲ್ ಭೇಟಿ ಪರಿಶೀಲನೆ ನಡೆಸುತ್ತಿದ್ದಾರೆ. ಲೋಕಾಪುರ ಪೊಲೀಸ್ ಠಾಣೆಯಲ್ಲಿ ಅಪಘಾತದ ಕುರಿತು ಪ್ರಕರಣ ದಾಖಲಾಗಿದೆ.