You are currently viewing PV NEWS : ಕೊಪ್ಪಳ | ಹಟ್ಟಿ ಗ್ರಾಮದಲ್ಲಿ ಆ.16ರಂದು ‘ಸಂಯಮ ಪ್ರಶಸ್ತಿ-2026’ ಪ್ರದಾನ!

PV NEWS : ಕೊಪ್ಪಳ | ಹಟ್ಟಿ ಗ್ರಾಮದಲ್ಲಿ ಆ.16ರಂದು ‘ಸಂಯಮ ಪ್ರಶಸ್ತಿ-2026’ ಪ್ರದಾನ!

PV NEWS : ಕೊಪ್ಪಳ | ಹಟ್ಟಿ ಗ್ರಾಮದಲ್ಲಿ ಆ.16ರಂದು ‘ಸಂಯಮ ಪ್ರಶಸ್ತಿ-2026’ ಪ್ರದಾನ!

ಮದ್ಯಮುಕ್ತ ಗ್ರಾಮಕ್ಕೆ ಗೌರವ; ಹಬ್ಬದ ಸಂಭ್ರಮದಲ್ಲಿ ಹಟ್ಟಿ – ಗಣ್ಯರ ಉಪಸ್ಥಿತಿ

PV NEWS ಕನ್ನಡ 24×7 | 

ಕೊಪ್ಪಳ, ಆ.13: ಕೊಪ್ಪಳ ತಾಲೂಕಿನ ಹಟ್ಟಿ ಗ್ರಾಮದಲ್ಲಿ ಮದ್ಯಮುಕ್ತ ಗ್ರಾಮವೆಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ, ಬೆಂಗಳೂರು ವತಿಯಿಂದ ನೀಡಲಾಗುವ ‘ಸಂಯಮ ಪ್ರಶಸ್ತಿ-2026’ ಪ್ರದಾನ ಸಮಾರಂಭ ಆಗಸ್ಟ್ 16ರಂದು ಸಂಜೆ 4.30ಕ್ಕೆ ಹಟ್ಟಿ ಗ್ರಾಮದಲ್ಲಿ ನಡೆಯಲಿದೆ.

ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಕೊಪ್ಪಳ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ತಾಲೂಕು ಆಡಳಿತ ಹಾಗೂ ನಗರಸಭೆ, ಕೊಪ್ಪಳ ಇವರ ಸಂಯುಕ್ತ ಆಶ್ರಯದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ. ಸಮಾರಂಭದ ಹಿನ್ನೆಲೆಯಲ್ಲಿ ಹಟ್ಟಿ ಗ್ರಾಮದಲ್ಲಿ ವೇದಿಕೆ ನಿರ್ಮಾಣ, ಸ್ವಚ್ಛತಾ ಕಾರ್ಯ ಸೇರಿದಂತೆ ವಿವಿಧ ಸಿದ್ಧತೆಗಳು ಭರದಿಂದ ಸಾಗುತ್ತಿದ್ದು, ಗ್ರಾಮದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದೆ.

ಕಾರ್ಯಕ್ರಮದ ಯಶಸ್ಸಿಗೆ ಕೊಪ್ಪಳ ಜಿಲ್ಲೆಯ ಗಾಂಧಿ ಬಳಗದ ಸದಸ್ಯರು ಕೈಜೋಡಿಸಿದ್ದಾರೆ. ಗಣ್ಯರಿಗೆ ಆಹ್ವಾನ ಪತ್ರಿಕೆ ವಿತರಿಸುವುದರ ಜೊತೆಗೆ, ಕಾಮನೂರಿನಿಂದ ಹಟ್ಟಿ ಗ್ರಾಮದವರೆಗೆ ಕಾಲ್ನಡಿಗೆ ಜಾಥಾ ಹಮ್ಮಿಕೊಳ್ಳಲು ಸಿದ್ಧತೆ ನಡೆಸಲಾಗಿದೆ. ಅಲ್ಲದೆ ಸುತ್ತಮುತ್ತಲಿನ ಹಳ್ಳಿಗಳಿಗೆ ತೆರಳಿ ಮದ್ಯವಿರೋಧಿ ಜಾಗೃತಿ ಹಾಗೂ ಕಾರ್ಯಕ್ರಮದ ಕುರಿತು ಪ್ರಚಾರ ಕಾರ್ಯವನ್ನು ಕೈಗೊಳ್ಳಲಾಗುತ್ತಿದೆ.

ಆ.16ರಂದು ನಡೆಯಲಿರುವ ಸಮಾರಂಭದಲ್ಲಿ ಕೊಪ್ಪಳದ ಅಭಿನವ ಹಾಲಸಿದ್ಧೇಶ್ವರ ಸ್ವಾಮೀಜಿ, ಇಳಕಲ್‌ನ ಗುರು ಮಹಾಂತ ಸ್ವಾಮೀಜಿ ಸೇರಿದಂತೆ ಸಚಿವರಾದ ಶಿವರಾಜ ತಂಗಡಗಿ, ಬಸವರಾಜ ರಾಯರೆಡ್ಡಿ, ಸಂಸದರು, ಶಾಸಕರು ಹಾಗೂ ವಿವಿಧ ಕ್ಷೇತ್ರಗಳ ಗಣ್ಯರು ಭಾಗವಹಿಸುವ ನಿರೀಕ್ಷೆಯಿದೆ.

ಹಲವು ಮದ್ಯಮುಕ್ತ ಗ್ರಾಮಗಳಿಗೆ ಅಭಿನಂದನೆ

ಸಮಾರಂಭದಲ್ಲಿ ಕೊಪ್ಪಳ ಜಿಲ್ಲೆಯ ಮದ್ಯ ಮಾರಾಟ ಮುಕ್ತ ಗ್ರಾಮಗಳಿಗೆ ಅಭಿನಂದನಾ ಪ್ರಶಸ್ತಿಗಳನ್ನು ವಿತರಿಸಲಾಗುತ್ತದೆ.

ಕೊಪ್ಪಳ ತಾಲೂಕು: ಹಟ್ಟಿ, ತಾಳಕನಕಾಪುರ, ಕಾಮನೂರು, ಹನುಮನಹಳ್ಳಿ ಹಾಗೂ ಲೇಬಗೇರಿ.

ಕುಕನೂರು ತಾಲೂಕು: ಬಿನ್ನಾಳ ಹಾಗೂ ಚಿಕ್ಕೇನಕೊಪ್ಪ.

ಕುಷ್ಟಗಿ ತಾಲೂಕು: ಮತ್ನಾಳ, ನಾಗರಾಳ, ಬೋದೂರು ತಾಂಡಾ ಹಾಗೂ ಹಿರೇಬನ್ನಿಗೋಳ.

ಮದ್ಯಮುಕ್ತ ಗ್ರಾಮಗಳ ಸಾಧನೆಯನ್ನು ಗುರುತಿಸಿ ಗೌರವಿಸುವ ಈ ಕಾರ್ಯಕ್ರಮವು ಗ್ರಾಮೀಣ ಭಾಗದಲ್ಲಿ ಮದ್ಯವಿರೋಧಿ ಜಾಗೃತಿ ಹಾಗೂ ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಉತ್ತೇಜನ ನೀಡುವ ಮಹತ್ವದ ಹೆಜ್ಜೆಯಾಗಿದೆ.

ಆ.16ರ ಸಮಾರಂಭವನ್ನು ಯಶಸ್ವಿಗೊಳಿಸಲು ಜಿಲ್ಲಾಡಳಿತ, ವಿವಿಧ ಇಲಾಖೆಗಳ ಅಧಿಕಾರಿಗಳು, ಗ್ರಾಮಸ್ಥರು ಹಾಗೂ ಗಾಂಧಿ ಬಳಗದ ಸದಸ್ಯರು ಸಿದ್ಧತೆಗಳನ್ನು ತೀವ್ರಗೊಳಿಸಿದ್ದಾರೆ.

PV NEWS ಕನ್ನಡ 24×7 | ಇದು ಪ್ರಜೆಗಳ ಪರ ಹದ್ದಿನ ಕಣ್ಣು

Prajavikshane

Chandru R Bhanapaur

Leave a Reply

error: Content is protected !!