LOCAL NEWS : ಕುಕನೂರು|ದ್ವೇಷ ಭಾಷಣದ ವಿಧೇಯಕ ವಿರೋಧಿಸಿ ಬಿಜೆಪಿಯಿಂದ ಪ್ರತಿಭಟನೆ!!
ಪ್ರಜಾ ವೀಕ್ಷಣೆ ಸುದ್ದಿ :
ಕುಕನೂರು: ದ್ವೇಷ ಭಾಷಣದ ವಿಧೇಯಕದ ಮೂಲಕ ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಧಕ್ಕೆ ತರುವ ಸರ್ಕಾರದ ನಡೆ ಖಂಡಿಸಿ ಬಿಜೆಪಿ ಯಲಬುರ್ಗಾ ಮಂಡಲದ ವತಿಯಿಂದ ಇಂದು ಕುಕನೂರು ಪಟ್ಟಣದ ಅಂಬೇಡ್ಕರ್ ಸರ್ಕಲ್‌ನಿಂದ ಶಿರೂರು ವೀರಭದ್ರಪ್ಪ ಸರ್ಕಲ್‌ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.
ಈ ಮೆರವಣಿಗೆಯಲ್ಲಿ ಭಾಗವಹಿಸಿದ ಬಿಜೆಪಿ ಕಾರ್ಯಕರ್ತರು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಶಿರೂರು ವೀರಭದ್ರಪ್ಪ ಸರ್ಕಲ್‌ನಲ್ಲಿ ನಡೆದ ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಬಿಜೆಪಿ ಮುಖಂಡ ವೀರಣ್ಣ ಹುಬ್ಬಳ್ಳಿ ಅವರು, ‘ದ್ವೇಷ ಭಾಷಣದ ವಿಧೇಯಕವು ಸರ್ಕಾರದ ವಿಫಲತೆಗಳನ್ನು ಮರೆಮಾಚಲು ರೂಪಿಸಿದ ಜನ ವಿರೋಧಿ ಕಾನೂನಾಗಿದೆ. ಜನರ ಪ್ರಶ್ನಿಸುವ ಹಕ್ಕು ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಉದ್ದೇಶದಿಂದಲೇ ಈ ವಿಧೇಯಕ ತರಲಾಗಿದ್ದು, ಬಿಜೆಪಿ ಇದನ್ನು ಯಾವತ್ತೂ ಸಹಿಸುವುದಿಲ್ಲ’ ಎಂದು ಹೇಳಿದರು.
ಬಳಿಕ ಮಾತನಾಡಿದ ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಶಿವಕುಮಾರ್ ನಾಗಲಾಪುರ ಮಠ ಅವರು, ‘ದ್ವೇಷ ಭಾಷಣದ ಹೆಸರಿನಲ್ಲಿ ಸರ್ಕಾರ ವಿರೋಧಿ ಧ್ವನಿಗಳನ್ನು ಕುಗ್ಗಿಸಲು ಯತ್ನಿಸಲಾಗುತ್ತಿದೆ. ಇದು ಸಂವಿಧಾನಾತ್ಮಕವಾಗಿ ನಾಗರಿಕರಿಗೆ ದೊರಕಿರುವ ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣವಾಗಿದ್ದು, ಜನತಂತ್ರದ ಮೂಲಭೂತ ಮೌಲ್ಯಗಳಿಗೆ ಧಕ್ಕೆ ತರುವ ಕ್ರಮವಾಗಿದೆ’ ಎಂದು ಆರೋಪಿಸಿದರು.
ಸರ್ಕಾರ ಈ ವಿಧೇಯಕವನ್ನು ತಕ್ಷಣವೇ ಹಿಂಪಡೆದು, ಪ್ರಜಾಪ್ರಭುತ್ವದ ಮೌಲ್ಯಗಳನ್ನು ಗೌರವಿಸಬೇಕು. ಇಲ್ಲವಾದಲ್ಲಿ ಬಿಜೆಪಿ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲಿದೆ ಎಂದು ಎಚ್ಚರಿಸಿದರು.
ಈ ವೇಳೆ ತಾಲೂಕು ದಂಡಾಧಿಕಾರಿ ತಹಸಿಲ್ದಾರ್ ಮೂಲಕ ರಾಜ್ಯಪಾಲರಿಗೆ ಮನವಿ ಪತ್ರವನ್ನು ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಅನಿಲ್ ಆಚಾರ, ವೀರಣ್ಣ ಹುಬ್ಬಳ್ಳಿ, ಶಂಭು ಜೋಳದ, ಕರಬಸಯ್ಯ ಬಿನ್ನಾಳ, ಲಕ್ಷಣ ಕಾಳಿ, ವಿನಾಯಕ ಸರಗಣಾಚಾರ, ಮಂಗಳೆಶ್ ವಾಲ್ಮೀಕಿ, ಅಯ್ಯನಗೌಡ ಕೆಂಚಣ್ಣನವರ್, ರಾಜಶೇಖರ್ ದ್ಯಾಂಪುರ, ಬಸವರಾಜ್ ಹಾಲಕೇರಿ, ಚಂದ್ರು ಬಾಗನಾಳ, ಅಂಬರೀಷ್ ಹುಬ್ಬಳ್ಳಿ ಸೇರಿದಂತೆ ಬಿಜೆಪಿ ಯಲಬುರ್ಗಾ ಮಂಡಲದ ಪದಾಧಿಕಾರಿಗಳು, ಕುಕನೂರು ತಾಲ್ಲೂಕು ಘಟಕದ ಮುಖಂಡರು, ಕಾರ್ಯಕರ್ತರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದು ಪ್ರತಿಭಟನೆಯಲ್ಲಿ ಭಾಗವಹಿಸಿದರು.