SPECIAL STORY : ಕುಕನೂರು | ರ‍್ಯಾವಣಕಿ ಸರ್ಕಾರಿ ಪ್ರೌಢಶಾಲೆಯ ಅವ್ಯವಸ್ಥೆಯ ಅನಾವರಣ : ಭದ್ರತೆಯಿಲ್ಲದ ಶಾಲಾ ಆವರಣ..!!

You are currently viewing SPECIAL STORY : ಕುಕನೂರು | ರ‍್ಯಾವಣಕಿ ಸರ್ಕಾರಿ ಪ್ರೌಢಶಾಲೆಯ ಅವ್ಯವಸ್ಥೆಯ ಅನಾವರಣ : ಭದ್ರತೆಯಿಲ್ಲದ ಶಾಲಾ ಆವರಣ..!!

SPECIAL STORY : ಕುಕನೂರು | ರ‍್ಯಾವಣಕಿ ಸರ್ಕಾರಿ ಪ್ರೌಢಶಾಲೆಯ ಅವ್ಯವಸ್ಥೆಯ ಅನಾವರಣ : ಭದ್ರತೆಯಿಲ್ಲದ ಶಾಲಾ ಆವರಣ..!!

ಪ್ರಜಾವೀಕ್ಷಣೆ ವಿಶೇಷ ಸುದ್ದಿ : 

ಕುಕನೂರು : ಒಂದು ಉತ್ತಮ ಶಿಕ್ಷಣ ಸಂಸ್ಥೆಗೆ ಕೇವಲ ಕಟ್ಟಡವಿದ್ದರೆ ಸಾಲದು, ಅಲ್ಲಿ ಕಲಿಯುವ ಮಕ್ಕಳಿಗೆ ಸುರಕ್ಷಿತ ವಾತಾವರಣವೂ ಅತಿ ಮುಖ್ಯ. ಆದರೆ, ತಾಲೂಕಿನ ರ‍್ಯಾವಣಕಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಕನಿಷ್ಠ ಸೌಲಭ್ಯಗಳಾದ ಕಾಂಪೌಂಡ್ ಗೋಡೆ ಮತ್ತು ಮುಖ್ಯ ದ್ವಾರ ಇಲ್ಲದಿರುವುದು ಆತಂಕಕ್ಕೆ ಕಾರಣವಾಗಿದೆ.

ಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವಂತಹ ರ‍್ಯಾವಣಕಿ ಪ್ರೌಢಶಾಲೆಗೆ ಈಗಾಗಲೇ ನರೇಗಾ ಯೋಜನೆ ಅಡಿಯಲ್ಲಿ ಶಾಲೆಯ ಸುತ್ತಲೂ ಕಾಂಪೌಂಡ್ ನಿರ್ಮಾಣಕ್ಕಾಗಿ ಒಂದು ವರ್ಷ ಹಿಂದೆಯೇ 10 ಲಕ್ಷ ರೂಪಾಯಿಗಳ ಟೆಂಡರ್ ಹಾಗೂ ಆಡಳಿತಾತ್ಮಕ ಅನುಮೋದನೆ ಕೂಡ ದೊರೆತಿದ್ದರು, ಸಹ ಈ ಕಾಮಗಾರಿಯನ್ನು ಕೈಯೆತ್ತಿ ಕೊಂಡಿಲ್ಲ ಎಂಬುದು ವಿಷಾದನೀಯ ಸಂಗತಿ.

ಈ ಕಾಮಗಾರಿಯ ಬಗ್ಗೆ ಗುತ್ತಿಗೆದಾರರಿಂದ ನಿರಾಶಕ್ತಿ ತೋರಿಸುತ್ತಿರುವುದು ಎದ್ದು ಕಾಣುತ್ತಿದೆ. ಇದಕ್ಕೆ ಮೂಲ ಕಾರಣ ನರೇಗಾ ಯೋಜನೆ ಅಡಿಯಲ್ಲಿ ಗುತ್ತಿಗೆದಾರರಿಗೆ ಸರಿಯಾದ ಸಮಯಕ್ಕೆ ಹಣ ಸಂದಾಯವಾಗುವುದಿಲ್ಲ ಎಂಬ ಕಾರಣವೊಡ್ಡಿ ಗುತ್ತಿಗೆದಾರರು ಹಿಂದೆ ಸರಿಯುತ್ತಿದ್ದಾರೆ ಎಂದು ಕೇಳಿ ಬಂದಿದೆ.

ಈ ಸಮಸ್ಯೆಯನ್ನು ಅರಿತುಕೊಂಡು ಶಿಕ್ಷಣ ಇಲಾಖೆ ಹಾಗೂ ತಾಲೂಕು ಪಂಚಾಯತ್ ಆಡಳಿತದ ಅಧಿಕಾರಿಗಳು ಆದಷ್ಟು ಬೇಗ ಈ ಕಾಂಪೌಂಡ್ ನಿರ್ಮಾಣ ಕಾರ್ಯದಲ್ಲಿ ತೊಡಗಬೇಕು ಎನ್ನುವುದು ಸಾರ್ವಜನಿಕರ ಹಾಗೂ ಪಾಲಕರ ಆಗ್ರಹವಾಗಿದೆ.

ಕಾಂಪೌಂಡ್ ಹಾಗೂ ಶೌಚಾಲಯ ಇಲ್ಲದ್ದಿದರೆ ಉದ್ಭವಿಸಿರುವ ಪ್ರಮುಖ ಸಮಸ್ಯೆಗಳು

  • ಶೌಚಾಲಯದ ಸಮಸ್ಯೆ : ಮಾಹಿತಿ ಪ್ರಕಾರ ಪ್ರೌಢ ಶಾಲೆ ಸ್ಥಳಾಂತರ ಆಗಿ ಸರಿಸುಮಾರು ಒಂದು ವರ್ಷ ಕಳೆದರೂ ಮೂಲಭೂತ ಸೌಕರ್ಯವಾದ ಶೌಚಾಲಯ ಇಲ್ಲದಿರುವುದು ದುರಂತದ ಸಂಗತಿ, ಇತ್ತೀಚಿಗೆ ಕಳೆದ ವಾರದಲ್ಲಿ ಶೌಚಾಲಯವನ್ನು ಕಟ್ಟಿಸಲಾಗಿದೆ ಎಂದು ತಿಳಿದು ಬಂದಿದೆ. ಈ ಹಿಂದೆ ಪ್ರೌಢ ಶಾಲೆಗಳಲ್ಲಿ ಶೌಚಾಲಯದ ಸಮಸ್ಯೆ ಇತ್ತು. ಎಂಬುದು ಸತ್ಯ. ಕೇವಲ ಸೌಲಭ್ಯದ ಕೊರತೆಯಲ್ಲ, ಅದು ವಿದ್ಯಾರ್ಥಿಗಳ ಆರೋಗ್ಯ ಮತ್ತು ಶಿಕ್ಷಣದ ಮೇಲೆ ನೇರ ಪರಿಣಾಮ ಬೀರುವ ಗಂಭೀರ ವಿಷಯವಾಗಿದೆ. ಈ ಪ್ರೌಢ ಶಾಲೆಯಲ್ಲಿ ಎಂಟನೇ ತರಗತಿಯಿಂದ 10ನೇ ತರಗತಿಯಲ್ಲಿ ಒಟ್ಟು 55 ಹೆಣ್ಣು ಮಕ್ಕಳು ವ್ಯಾಸಂಗ ಮಾಡುತ್ತಿದ್ದು, ಈ ಸಮಯದಲ್ಲಿ ವಯಸ್ಸಿನ ಹೆಣ್ಣು ಮಕ್ಕಳಿಗೆ ಋತುಚಕ್ರದ ಸಮಯದಲ್ಲಿ ಖಾಸಗಿತನ ಮತ್ತು ಸರಿಯಾದ ವಿಲೇವಾರಿ ವ್ಯವಸ್ಥೆ (Incinerators) ಇಲ್ಲದಿರುವುದು ಅವರ ಹಾಜರಾತಿಯ ಮೇಲೆ ಪರಿಣಾಮ ಬೀರಬಹುದು.

  • ಮಕ್ಕಳ ಸುರಕ್ಷತೆಗೆ ಧಕ್ಕೆ: ಶಾಲೆಯ ಆವರಣಕ್ಕೆ ಯಾವುದೇ ತಡೆಗೋಡೆ ಇಲ್ಲದಿರುವುದರಿಂದ ವಿದ್ಯಾರ್ಥಿಗಳು ಆಟವಾಡುವಾಗ ಅಥವಾ ಬಿಡುವಿನ ಸಮಯದಲ್ಲಿ ಅರಿಯದೇ ರಸ್ತೆಗೆ ಬರುವ ಸಾಧ್ಯತೆಯಿದೆ. ಇದು ಅಪಘಾತಗಳಿಗೆ ಆಹ್ವಾನ ನೀಡುವಂತಿದೆ.

  • ಅನಧಿಕೃತ ವ್ಯಕ್ತಿಗಳ ಪ್ರವೇಶ: ಗೇಟ್ ಇಲ್ಲದ ಕಾರಣ ಶಾಲಾ ಅವಧಿಯಲ್ಲಿ ಮತ್ತು ಶಾಲೆಯ ನಂತರ ಅಪರಿಚಿತರು, ಕಿಡಿಗೇಡಿಗಳು ಮುಕ್ತವಾಗಿ ಆವರಣದೊಳಗೆ ಪ್ರವೇಶಿಸುತ್ತಿದ್ದಾರೆ. ಇದು ಶಾಲೆಯ ಶಿಸ್ತನ್ನು ಹಾಳುಮಾಡುತ್ತಿದೆ.

  • ಪ್ರಾಣಿಗಳ ಕಾಟ: ಈ ಶಾಲೆ ಇರುವ ಕೂಗಳತೆ ದೂರದಲ್ಲಿ ಕಳೆದ ವರ್ಷ ಒಬ್ಬ ರೈತರ ಮೇಲೆ ಕರಡಿ ದಾಳಿ ಮಾಡಿತ್ತು, ರೈತನು ಹೊಲದಲ್ಲಿ ಕೆಲಸ ಮಾಡುತ್ತಿರುವಾಗ ಕರಡಿಯ ಒಂದು ದಾಳಿ ಮಾಡಿ ಗಂಭೀರ ಗಾಯವನ್ನು ಮಾಡಿತ್ತು. ಜೊತೆಗೆ ಬೀದಿನಾಯಿಗಳು ಮತ್ತು ದನಕರುಗಳು ಶಾಲಾ ಕೊಠಡಿಗಳ ವರೆಗೂ ಬರುತ್ತಿದ್ದು, ಶಾಲೆಯ ಪರಿಸರ ಅಶುಚಿಯಾಗುತ್ತಿದೆ.

  • ಶಾಲಾ ಆಸ್ತಿಯ ರಕ್ಷಣೆ: ಕಾಂಪೌಂಡ್ ಇಲ್ಲದ ಕಾರಣ ಶಾಲೆಯ ಕಿಟಕಿ, ಬಾಗಿಲು ಹಾಗೂ ಗಿಡಮರಗಳ ರಕ್ಷಣೆ ಮಾಡುವುದು ಶಿಕ್ಷಕರಿಗೆ ಮತ್ತು ಸಿಬ್ಬಂದಿಗೆ ಸವಾಲಾಗಿ ಪರಿಣಮಿಸಿದೆ.

ಸಾರ್ವಜನಿಕರ ಆಗ್ರಹ:

ಈಗಾಗಲೇ ಪೋಷಕರು ಮತ್ತು ಶಾಲಾ ಅಭಿವೃದ್ಧಿ ಸಮಿತಿ (SDMC) ಹಲವಾರು ಬಾರಿ ಮನವಿ ಮಾಡಿದರೂ ಸಹ, ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಗಮನಹರಿಸಿಲ್ಲ ಎಂಬ ಆರೋಪ ಕೇಳಿ ಬರುತ್ತಿದೆ.

“ಮಕ್ಕಳ ಭವಿಷ್ಯ ರೂಪಿಸುವ ಶಾಲೆಯಲ್ಲಿ ಅವರಿಗೆ ಕನಿಷ್ಠ ರಕ್ಷಣೆ ಇಲ್ಲದಿರುವುದು ವಿಷಾದನೀಯ. ಕೂಡಲೇ ಸರ್ಕಾರ ಅಥವಾ ಸಂಬಂಧಪಟ್ಟ ಇಲಾಖೆ ಕಾಂಪೌಂಡ್ ನಿರ್ಮಿಸಿಕೊಡಬೇಕು.”

    -: ಗವಿಸಿದ್ದಪ್ಪ

ಪೋಷಕರ ಅಭಿಪ್ರಾಯ.

 

“ಯಾವುದೇ ಅಹಿತಕರ ಘಟನೆ ನಡೆಯದಂತೆ ನಮ್ಮ ಶಿಕ್ಷಕ ವರ್ಗದವರು ಅತೀವ ಮುತ್ತುವರ್ಜಿ ಕಾಳಜಿ ವಹಿಸುತ್ತಿದ್ದಾರೆ. ಈ ಬಗ್ಗೆ ಶಿಕ್ಷಣ ಇಲಾಖೆ ಮತ್ತು ಸ್ಥಳೀಯ ಆಡಳಿತ ಮಂಡಳಿಗೆ ಸಾಕಷ್ಟು ಬಾರಿ ಮನವಿ ಮಾಡಿದ್ದೇವೆ. ಆದಷ್ಟು ಬೇಗ ಮಾಡಿಕೊಡ್ತವೆ ಎನ್ನುವ ಭರವಸೆ ನೀಡಿದ್ದಾರೆ”

ಶರಣಪ್ಪ ಮೂಗನವರ್, 

ಮುಖ್ಯೋಪಾಧ್ಯಯರು, ಸರ್ಕಾರಿ ಪ್ರೌಢ ಶಾಲೆ ರ‍್ಯಾವಣಕಿ.

“ಶಾಲೆಯ ಕಾಂಪೌಂಡ್ ಹಾಗೂ ಶೌಚಾಲಯ ಕುರಿತು ಮಾಹಿತಿ ತಿಳಿದುಕೊಂಡಿದ್ದು, ಆದಷ್ಟು ಬೇಗ ಕಾಂಪೌಂಡ್ ಹಾಗೂ ಶೌಚಾಲಯವನ್ನು ನಿರ್ಮಾಣ ಮಾಡುವ ಕುರಿತು ತಾಲೂಕ ಪಂಚಾಯತ್ ಆಡಳಿತಕ್ಕೆ ಸೂಚನೆ ನೀಡಲಾಗುವುದು”

 ಸೋಮಶೇಖರಗೌಡ ಪಾಟೀಲ್

 ಉಪ ನಿರ್ದೇಶಕರು 

 ಸಾರ್ವಜನಿಕ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಕೊಪ್ಪಳ

Leave a Reply

error: Content is protected !!