LOCAL NEWS : ಕುಕನೂರು | “ಫುಟ್‌ಬಾಲ್ ಫಾರ್ ಸ್ಕೂಲ್” ವಿನೂತನ ಕಾರ್ಯಕ್ರಮಕ್ಕೆ ಚಾಲನೆ..!
✍️ ಪ್ರಜಾವೀಕ್ಷಣೆ ಡಿಜಿಟಲ್ ಸುದ್ದಿ :
ಕುಕನೂರು ಫೆ.12 : ಪಟ್ಟಣದ ಪಿಎಂ ಶ್ರೀ ಸ್ಕೂಲ್ ಜವಾಹರ ನವೋದಯ ಶಾಲೆಯಲ್ಲಿ ಇಂದು “ಫುಟ್‌ಬಾಲ್ ಫಾರ್ ಸ್ಕೂಲ್” (Football for Schools – F4S) ಎಂಬ ವಿನೂತನ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಈ ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಯಾಗಿ ಭಾಗವಹಿಸಿದ ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಬಸವರಾಜ್ ಎ. ಅವರು, ಅವಳಿ ತಾಲ್ಲೂಕಿನ ಸರ್ಕಾರಿ ಪ್ರೌಢಶಾಲೆಗಳಿಗೆ ಫುಟ್ಬಾಲ್ ವಿತರಿಸುವ ಮೂಲಕ “ಫುಟ್‌ಬಾಲ್ ಫಾರ್ ಸ್ಕೂಲ್” (Football for Schools – F4S) ಎಂಬ ವಿನೂತನ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಮೊದಲ ಹಂತದಲ್ಲಿ ಸಂಕೇತಿಕವಾಗಿ ಯಲಬುರ್ಗಾ-ಕುಕನೂರು ಅವಳಿ ತಾಲ್ಲೂಕಿನ 16 ಸರ್ಕಾರಿ ಪ್ರೌಢಶಾಲೆಗಳಿಗೆ ಫುಟ್ಬಾಲ್ ವಿತರಣೆ ಮಾಡಿದರು. ಬಳಿಕ ತಾಲೂಕಿನ 216 ಸರ್ಕಾರಿ ಪ್ರೌಢಶಾಲೆಗಳಿಗೆ ವಿತರಣೆ ಮಾಡಲಾಗುವುದು ಎಂದು ಅವರು ತಿಳಿಸಿದರು.
* ಏನಿದು ಫುಟ್‌ಬಾಲ್ ಫಾರ್ ಸ್ಕೂಲ್..?
ಫಿಫಾ (Fédération Internationale de Football Association-FIFA), ಭಾರತ ಸರ್ಕಾರದ ಶಿಕ್ಷಣ ಸಚಿವಾಲಯ ಹಾಗೂ ಅಖಿಲ ಭಾರತ ಫುಟ್‌ಬಾಲ್ ಫೆಡರೇಶನ್ (AIFF) ಜೊತೆಗೆ ಭಾರತೀಯ ಕ್ರೀಡಾ ಪ್ರಾಧಿಕಾರ (SAI) ಜಂಟಿಯಾಗಿ ಹಮ್ಮಿಕೊಂಡಿರುವ ಮಹತ್ವಾಕಾಂಕ್ಷೆಯ ಯೋಜನೆಯಾಗಿದೆ.
ಈ ಯೋಜನೆಯ ಪ್ರಮುಖ ಅಂಶಗಳು ಹೀಗಿದೆ. ಶಾಲಾ ಶಿಕ್ಷಣ ವ್ಯವಸ್ಥೆಯ ಮೂಲಕ ವಿದ್ಯಾರ್ಥಿಗಳಿಗೆ ಫುಟ್‌ಬಾಲ್ ಕ್ರೀಡೆಯನ್ನು ತಲುಪಿಸುವುದು ಮತ್ತು ಕ್ರೀಡಾ ಸಂಸ್ಕೃತಿಯನ್ನು ಬೆಳೆಸುವುದು ಇದರ ಮುಖ್ಯ ಉದ್ದೇಶವಾಗಿದೆ. ಈ ಯೋಜನೆಯಡಿ ಫಿಫಾ ಭಾರತದಾದ್ಯಂತ ಶಾಲೆಗಳಿಗೆ ಸುಮಾರು 11 ಲಕ್ಷಕ್ಕೂ ಅಧಿಕ ಫುಟ್‌ಬಾಲ್‌ಗಳನ್ನು ವಿತರಿಸುವ ಗುರಿ ಹೊಂದಿದೆ.
ಭಾರತದ ಸುಮಾರು 1.5 ಲಕ್ಷ ಶಾಲೆಗಳ 2.5 ಕೋಟಿ ವಿದ್ಯಾರ್ಥಿಗಳನ್ನು ತಲುಪುವ ಗುರಿಯನ್ನು ಈ ಯೋಜನೆ ಹೊಂದಿದ್ದು, ಇದು ನವೋದಯ ವಿದ್ಯಾಲಯ (NVS), ಕೇಂದ್ರೀಯ ವಿದ್ಯಾಲಯ (KVS) ಮತ್ತು ರಾಜ್ಯ ಸರ್ಕಾರಿ ಶಾಲೆಗಳನ್ನೊಳಗೊಂಡಿದೆ. ಶಾರೀರಿಕ ಶಿಕ್ಷಣ ಶಿಕ್ಷಕರಿಗೆ (PE Teachers) ಫುಟ್‌ಬಾಲ್ ತರಬೇತಿ ನೀಡಲು ಮಾಸ್ಟರ್ ಟ್ರೈನರ್ ಶಿಬಿರಗಳನ್ನು ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಆಯೋಜಿಸಲಾಗಿದೆ.
ಕೇವಲ ಆಟವಷ್ಟೇ ಅಲ್ಲದೆ, ಈ ಕ್ರೀಡೆಯ ಮೂಲಕ ಜೀವನ ಕೌಶಲಗಳು, ಶಿಸ್ತು ಮತ್ತು ತಂಡದ ಕೆಲಸವನ್ನು (Teamwork) ಮಕ್ಕಳಿಗೆ ಕಲಿಸುವುದು ಈ ಯೋಜನೆಯ ಆಶಯವಾಗಿದೆ. ಹುಡುಗರು ಮತ್ತು ಹುಡುಗಿಯರಿಬ್ಬರಿಗೂ ಸಮಾನವಾಗಿ ಈ ಕ್ರೀಡೆಯನ್ನು ತಲುಪಿಸಲು ಒತ್ತು ನೀಡಲಾಗಿದೆ. ಈ ಮೂಲಕ ಲಿಂಗ ಅಸಮಾನತೆ ಅಥವಾ ಲಿಂಗ ತಾರತಮ್ಯವನ್ನು ಹೋಗಲಾಡಿಸುವ ಪ್ರಮುಖ ಉದ್ದೇಶವಾಗಿದೆ.
ಈ ಸಂದರ್ಭದಲ್ಲಿ ಫುಟ್‌ಬಾಲ್ ಫಾರ್ ಸ್ಕೂಲ್ ಕಾರ್ಯಕ್ರಮದ ಆಯೋಜಕ ಆರ್. ಮರಿಸ್ವಾಮಿ, ಜವಾಹರ ನವೋದಯ ಶಾಲೆಯ ಪ್ರಾಂಶುಪಾಲ ರಾಜೇಶ್ ಎನ್. ಹಾಗೂ ತಾಲೂಕಿನ ವಿವಿಧ ಫ್ರೌಢ ಶಾಲೆಗಳ ದೈಹಿಕ ಶಿಕ್ಷಕರ ಜೊತೆಗೆ ಶಾಲಾ ಮಕ್ಕಳು ಭಾಗವಹಿಸಿದ್ದರು.