LOCAL NEWS : ರಸ್ತೆ ಅಪಘಾತ : ಎರಡು ಬೈಕ್‌ಗಳ ಮುಖಾಮುಖಿ ಡಿಕ್ಕಿ; ಓರ್ವ ಯುವಕ ಗಂಭೀರ ಗಾಯ!
ಪ್ರಜಾವೀಕ್ಷಣೆ ಡಿಜಿಟಲ್ ಸುದ್ದಿ :
ಕುಕನೂರು ಮಾ.10 : ತಾಲೂಕಿನ ಮಂಗಳೂರು– ಕುದುರೆಮೋತಿ ರಸ್ತೆಯಲ್ಲಿ ಎರಡು ಬೈಕ್‌ಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು, ಈ ಪರಿಣಾಮ ಓರ್ವ ಯುವಕ ಗಂಭೀರವಾಗಿ ಗಾಯಗೊಂಡಿರುವ ಘಟನೆ ಸೋಮವಾರ ತಡ ರಾತ್ರಿ ನಡೆದಿದೆ ಎನ್ನಲಾಗಿದೆ. ಈ ಪ್ರಕರಣ ತಡವಾಗಿ ಬೆಳಕಿಗೆ ಬಂದಿರುವುದು ವಿಶೇಷವಾಗಿದೆ.
ಮಂಗಳೂರಿನ ಸಮುದಾಯ ಆರೋಗ್ಯ ಕೇಂದ್ರದಿಂದ 1 ಕಿ.ಮೀ. ದೂರದಲ್ಲಿರುವ ಅಣ್ಣಾ ಕ್ರಿಸರ್ ಫ್ಯಾಕ್ಟರಿ ಹತ್ತಿರ ಈ ಅಪಘಾತ ಸಂಭವಿಸಿದೆ.
ಕೆಎ-37 EA-7410 ಹಾಗೂ ಕೆಎ-06 HE-4291 ಸಂಖ್ಯೆಯ ಎರಡು ಬೈಕ್‌ಗಳು ಮುಖಾಮುಖಿ ಡಿಕ್ಕಿಯಾದ ಪರಿಣಾಮ ಎರಡೂ ಬೈಕ್ ಗಳು ನುಜ್ಜುಗುಜ್ಜಾಗಿ ರಸ್ತೆಯ ಮಧ್ಯದಲ್ಲೇ ಬಿದ್ದಿವೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಈ ಅಪಘಾತದಲ್ಲಿ ಗಾಯಗೊಂಡಿರುವ ಮುತ್ತಪ್ಪ (22) ತಂದೆ ಯಂಕಪ್ಪ, ಕುದುರೆಮತಿ ಗ್ರಾಮದ ನಿವಾಸಿಯಾಗಿದ್ದು, ಪ್ರಸ್ತುತ ಗಂಗಾವತಿಯ ಮಲ್ಲನಗೌಡ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಮಂಗಳೂರಿನಿಂದ ಕುದುರೆಮೋತಿ ಕಡೆಗೆ ತೆರಳುತ್ತಿದ್ದ ಹೋಂಡಾ ಶೈನ್ ಬೈಕ್ ಹಾಗೂ ಕುದುರೆಮೋತಿಯಿಂದ ಮಂಗಳೂರು ಕಡೆಗೆ ಬರುತ್ತಿದ್ದ ಮತ್ತೊಂದು ಬೈಕ್ ನಡುವೆ ಈ ಅಪಘಾತ ಸಂಭವಿಸಿದೆ ಎನ್ನಲಾಗಿದೆ.
ಗಾಯಾಳುಗಳಿಗೆ ಮಂಗಳೂರು ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದ್ದು, ಈ ಸಂಬಂಧ ಎಂ.ಎಲ್.ಸಿ (Medico-Legal Case-MLC) ಪ್ರಕರಣ ದಾಖಲಾಗಿರುವುದಾಗಿ ತಿಳಿದು ಬಂದಿದೆ. ಈ ಘಟನೆಯು ಬೇವೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.