LOCAL NEWS : ವಿದ್ಯಾರ್ಥಿಗಳ ಸುರಕ್ಷತೆಗಾಗಿ ಪೊಲೀಸ್ ಇಲಾಖೆಗೆ ಕುಕನೂರ ಹಿತರಕ್ಷಣಾ ಸಮಿತಿಯಿಂದ ಮನವಿ!
ಪ್ರಜಾವೀಕ್ಷಣೆ ಡಿಜಿಟಲ್ ಮೀಡಿಯಾ ಸುದ್ದಿ :
ಕುಕನೂರು ಮಾ. 24 : ಪಟ್ಟಣದಲ್ಲಿ ವಿದ್ಯಾರ್ಥಿಗಳ ಹಾಗೂ ಸಾರ್ವಜನಿಕರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು, ಎಸ್.ಎಫ್.ಎಸ್ ಶಾಲೆಯಿಂದ ವಿದ್ಯಾನಂದ ಗುರುಕುಲ ಶಾಲೆಯವರೆಗೆ ವಾಹನಗಳ ವೇಗ ನಿಯಂತ್ರಣ ಹಾಗೂ ಸಂತೆ ಸಮಯದಲ್ಲಿ ಸಂಚಾರ ವ್ಯವಸ್ಥೆ ಸುಧಾರಣೆಗಾಗಿ ಕುಕನೂರ ಹಿತರಕ್ಷಣಾ ಸಮಿತಿಯ ಸದಸ್ಯರು ಇಂದು ಪೊಲೀಸ್ ಇಲಾಖೆಗೆ ಮನವಿ ಸಲ್ಲಿಸಿದರು.
ಸಮಿತಿಯ ಸದಸ್ಯರು ಪೊಲೀಸ್ ಇನ್ಸ್‌ಪೆಕ್ಟರ್ ಅವರಿಗೆ ಮನವಿ ಪತ್ರವನ್ನು ಹಸ್ತಾಂತರಿಸಿ, ಶಾಲಾ ಪ್ರದೇಶದಲ್ಲಿ ಹೆಚ್ಚುತ್ತಿರುವ ವಾಹನಗಳ ವೇಗದಿಂದ ವಿದ್ಯಾರ್ಥಿಗಳಿಗೆ ಅಪಾಯ ಉಂಟಾಗುತ್ತಿರುವುದನ್ನು ವಿವರಿಸಿದರು. ಈ ಹಿನ್ನೆಲೆಯಲ್ಲಿ ಶಾಲಾ ವಲಯವನ್ನು “School Zone – Drive Slow” ಎಂದು ಘೋಷಿಸಿ, ಬ್ಯಾರಿಕೆಡ್ ಗಳನ್ನು ಅಳವಡಿಸುವಂತೆ ಅವರು ವಿನಂತಿಸಿದರು.
ಇದಲ್ಲದೆ, ಪ್ರತಿ ಶುಕ್ರವಾರ ನಡೆಯುವ ತರಕಾರಿ ಸಂತೆ ಸಂದರ್ಭದಲ್ಲಿ ರಸ್ತೆ ಎರಡೂ ಬದಿಗಳಲ್ಲಿ ವ್ಯಾಪಾರ ನಡೆಯುತ್ತಿರುವುದರಿಂದ ಸಂಚಾರಕ್ಕೆ ತೊಂದರೆ ಉಂಟಾಗುತ್ತಿದೆ. ಆದ್ದರಿಂದ, ವೀರಭದ್ರಪ್ಪ ವೃತ್ತದಿಂದ one-way ವ್ಯವಸ್ಥೆ ಜಾರಿಗೊಳಿಸಿ, ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸುವಂತೆ ಮನವಿಯಲ್ಲಿ ತಿಳಿಸಲಾಗಿದೆ.
ಪೊಲೀಸ್ ಅಧಿಕಾರಿಗಳು ಮನವಿಯನ್ನು ಸ್ವೀಕರಿಸಿ, ಸಮಸ್ಯೆಯನ್ನು ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಸಮಿತಿಯ ಸಹ ಸಂಚಾಲಕರಾದ ಮಂಜುನಾಥ ನಾಡಗೌಡ, ಪದಾಧಿಕಾರಿಗಳಾದ ಅಂದಪ್ಪ ಜವಳಿ, ರಶೀದ್ ಹಣಜಗೇರಿ, ಕಳಕೇಶ್ ಹತ್ತಿಕಟಗಿ, ಗಂಗಾಧರ್ ನಾರಾಯಣಿ, ದೇವಪ್ಪ ರಾಟಿಮನಿ, ಕನಕಪ್ಪ ಬ್ಯಾಡರ್ ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.