You are currently viewing PV NEWS : ಮಂಗಳೂರು ವಿವಿಯ ನಿವೃತ್ತ ಪ್ರಾಧ್ಯಾಪಕಿ ಡಾ. ವಾಹೀದಾ ಸುಲ್ತಾನಾ ನಿಧನ; ಶಿಷ್ಯರಲ್ಲಿ ದುಃಖದ ಛಾಯೆ!

PV NEWS : ಮಂಗಳೂರು ವಿವಿಯ ನಿವೃತ್ತ ಪ್ರಾಧ್ಯಾಪಕಿ ಡಾ. ವಾಹೀದಾ ಸುಲ್ತಾನಾ ನಿಧನ; ಶಿಷ್ಯರಲ್ಲಿ ದುಃಖದ ಛಾಯೆ!

PV NEWS : ಮಂಗಳೂರು ವಿವಿಯ ನಿವೃತ್ತ ಪ್ರಾಧ್ಯಾಪಕಿ ಡಾ. ವಾಹೀದಾ ಸುಲ್ತಾನಾ ನಿಧನ; ಶಿಷ್ಯರಲ್ಲಿ ದುಃಖದ ಛಾಯೆ!

PV NEWS KANNADA 24×7 : 

ಮಂಗಳೂರು, ಆ. 6: ಮಂಗಳೂರು ವಿಶ್ವವಿದ್ಯಾನಿಲಯದ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ನಿವೃತ್ತ ಪ್ರಾಧ್ಯಾಪಕಿ ಹಾಗೂ ಮಾಜಿ ವಿಭಾಗ ಮುಖ್ಯಸ್ಥೆ ಡಾ. ವಾಹೀದಾ ಸುಲ್ತಾನಾ (70) ಅವರು ಹೃದಯಾಘಾತದಿಂದ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಗುರುವಾರ ಅಪರಾಹ್ನ ನಿಧನರಾದರು. ಸುಮಾರು ಮೂರು ದಶಕಗಳ ಕಾಲ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದ ಅವರು, ವಿಭಾಗ ಮುಖ್ಯಸ್ಥರಾಗಿ ನಿವೃತ್ತಿ ಹೊಂದಿದ್ದರು.

ಅವರು ಪತಿ, ಇಬ್ಬರು ಸಹೋದರರು ಹಾಗೂ ಮೂವರು ಸಹೋದರಿಯರನ್ನು ಅಗಲಿದ್ದಾರೆ. ಅವರ ಅಂತ್ಯಕ್ರಿಯೆ ಶುಕ್ರವಾರ ಅಪರಾಹ್ನ ಮೈಸೂರಿನಲ್ಲಿ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಡಾ. ವಾಹೀದಾ ಸುಲ್ತಾನಾ ಅವರು ಮಂಗಳೂರು ವಿಶ್ವವಿದ್ಯಾನಿಲಯದ ಮಹಿಳಾ ವಸತಿ ನಿಲಯದ ವಾರ್ಡನ್ ಆಗಿಯೂ, ಅಲ್ಪಸಂಖ್ಯಾತ ಹಾಗೂ ಇತರ ಹಿಂದುಳಿದ ವರ್ಗಗಳ (ಒಬಿಸಿ) ವಿದ್ಯಾರ್ಥಿಗಳಿಗೆ ಐಎಎಸ್–ಕೆಎಎಸ್ ತರಬೇತಿ ಕಾರ್ಯಕ್ರಮದ ಸಂಯೋಜಕರಾಗಿಯೂ ಸೇವೆ ಸಲ್ಲಿಸಿದ್ದರು. ಮಾಧ್ಯಮ, ಆರೋಗ್ಯ, ತಂತ್ರಜ್ಞಾನ, ಮಹಿಳಾ ವಿಚಾರಗಳು ಸೇರಿದಂತೆ ವಿವಿಧ ವಿಷಯಗಳ ಕುರಿತು ಅವರು ಲೇಖನಗಳನ್ನು ರಚಿಸಿದ್ದು, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ನಿಯತಕಾಲಿಕಗಳಲ್ಲಿ ಸಂಶೋಧನಾ ಪ್ರಬಂಧಗಳನ್ನು ಪ್ರಕಟಿಸಿದ್ದರು.

ಬಾಂಗ್ಲಾದೇಶ, ಮಲೇಶ್ಯ, ಶ್ರೀಲಂಕಾ ಹಾಗೂ ಹಾಂಗ್ ಕಾಂಗ್‌ನಲ್ಲಿ ನಡೆದ ಅಂತಾರಾಷ್ಟ್ರೀಯ ಸಮ್ಮೇಳನಗಳಲ್ಲಿ ಭಾಗವಹಿಸಿ ಸಂಶೋಧನಾ ಪ್ರಬಂಧಗಳನ್ನು ಮಂಡಿಸಿದ್ದ ಅವರು, ಕಾರ್ಪೊರೇಟ್ ಕಮ್ಯುನಿಕೇಶನ್ಸ್, ಮಹಿಳೆ ಮತ್ತು ಮಾಧ್ಯಮ, ಆರೋಗ್ಯ ಸಂವಹನ ಮೊದಲಾದ ಕ್ಷೇತ್ರಗಳಲ್ಲಿ ವಿಶೇಷ ಆಸಕ್ತಿ ಹೊಂದಿದ್ದರು. ಏಷ್ಯನ್ ಕಾಂಗ್ರೆಸ್ ಫಾರ್ ಮೀಡಿಯಾ ಆ್ಯಂಡ್ ಕಮ್ಯುನಿಕೇಶನ್ ಸಂಸ್ಥೆಯ ರಾಷ್ಟ್ರೀಯ ಸಮಿತಿಯ ಉಪನಿರ್ದೇಶಕರಾಗಿಯೂ ಅವರು ಕಾರ್ಯನಿರ್ವಹಿಸಿದ್ದರು. ಅವರ ನಿಧನಕ್ಕೆ ಮಂಗಳೂರು ವಿಶ್ವವಿದ್ಯಾನಿಲಯದ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ಹಳೆ ವಿದ್ಯಾರ್ಥಿಗಳ ಸಂಘ (MAM) ತೀವ್ರ ಸಂತಾಪ ವ್ಯಕ್ತಪಡಿಸಿದೆ.

ಗುರುವಿನ ಅಗಲಿಕೆಗೆ ಶಿಷ್ಯನ ಭಾವನಾತ್ಮಕ ನುಡಿ

ಡಾ. ವಾಹೀದಾ ಸುಲ್ತಾನಾ ಅವರ ಅಗಲಿಕೆ ಅವರ ಶಿಷ್ಯರು ಹಾಗೂ ಪತ್ರಿಕೋದ್ಯಮ ಕ್ಷೇತ್ರದ ಅನೇಕ ಮಂದಿಗೆ ವೈಯಕ್ತಿಕ ನಷ್ಟವಾಗಿದೆ. ಅವರ ವಿದ್ಯಾರ್ಥಿಯಾಗಿದ್ದ ಪತ್ರಕರ್ತ ಚಂದ್ರು ಆರ್. ಭಾನಾಪುರ ಅವರು ತಮ್ಮ ನೆನಪುಗಳನ್ನು ಭಾವಪೂರ್ಣವಾಗಿ ಹಂಚಿಕೊಂಡಿದ್ದಾರೆ.

 

CHANDRU R BHANAPUR
ಚಂದ್ರು ಆರ್. ಭಾನಾಪುರ್.

“2018ರಲ್ಲಿ ನಾನು ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಪತ್ರಿಕೋದ್ಯಮ ವ್ಯಾಸಂಗ ಮಾಡುತ್ತಿದ್ದಾಗ, ಜರ್ನಲಿಸಂನ ಕುರಿತು ಅನೇಕ ವಿಷಯಗಳನ್ನು ಅತ್ಯಂತ ಆತ್ಮೀಯತೆಯಿಂದ ಕಲಿಸಿದ ಗುರುಗಳು ಡಾ. ವಾಹೀದಾ ಸುಲ್ತಾನಾ ಮೇಡಂ. ಅವರು ಕೇವಲ ಶಿಕ್ಷಕರಷ್ಟೇ ಅಲ್ಲ, ತಾಯಿಯಂತಹ ಹೃದಯ ಹೊಂದಿದ್ದ ವ್ಯಕ್ತಿತ್ವ.

ಅವರು ತಮ್ಮ ಕೆಂಪು ಬಣ್ಣದ ವೋಕ್ಸ್‌ವ್ಯಾಗನ್ ಕಾರಿನಲ್ಲಿ ವಿಭಾಗದ ಆವರಣಕ್ಕೆ ಪ್ರವೇಶಿಸುವಾಗ ಕಾಣುತ್ತಿದ್ದ ಆ ಗೌರವಾನ್ವಿತ ವ್ಯಕ್ತಿತ್ವ ಇಂದಿಗೂ ಕಣ್ಣ ಮುಂದೆ ನಿಂತಂತಿದೆ. ಒಂದು ದಿನ ಅವರಂತೆಯೇ ಒಂದು ಕಾರು ಪಡೆದು ಇದೇ ಕ್ಯಾಂಪಸ್‌ಗೆ ಪ್ರವೇಶಿಸಬೇಕು ಎಂಬ ಕನಸು ನನಗೂ ಆಗಲೇ ಹುಟ್ಟಿತ್ತು.

ನಾವು ಪತ್ರಿಕೋದ್ಯಮದ ಎರಡನೇ ವರ್ಷಕ್ಕೆ ಕಾಲಿಟ್ಟಾಗ ಅವರು ನಿವೃತ್ತಿಯಾದದ್ದು ನಮಗೆ ಅತ್ಯಂತ ಬೇಸರ ತಂದಿತ್ತು. ಈಗ ಅವರ ನಿಧನದ ಸುದ್ದಿ ಕೇಳಿದ ಕ್ಷಣ, ಅವರು ತರಗತಿಯಲ್ಲಿ ಪಾಠ ಮಾಡುತ್ತಿದ್ದ ದಿನಗಳೆಲ್ಲವೂ ಕಣ್ಣ ಮುಂದೆ ಚಲನಚಿತ್ರದಂತೆ ಮೂಡಿಬಂದವು. ಅವರ ಅಗಲಿಕೆ ಮನಸ್ಸಿಗೆ ಆಳವಾದ ನೋವುಂಟು ಮಾಡಿದೆ.

‘ವಿ ಮಿಸ್ ಯು ಪ್ರೊಫೆಸರ್ ವಾಹೀದಾ ಸುಲ್ತಾನಾ ಮೇಡಂ… ನಿಮ್ಮ ಆತ್ಮಕ್ಕೆ ಚಿರಶಾಂತಿ ದೊರೆಯಲಿ’ ಎಂದು ಭಾವಪೂರ್ಣವಾಗಿ ನಮನ ಸಲ್ಲಿಸುತ್ತೇನೆ” ಎಂದು ಚಂದ್ರು ಆರ್. ಭಾನಾಪುರ ಅವರು ಸಂತಾಪ ಸೂಚಿಸಿದ್ದಾರೆ.

ಡಾ. ವಾಹೀದಾ ಸುಲ್ತಾನಾ ಅವರ ಅಗಲಿಕೆ ಮಂಗಳೂರು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮ ಕ್ಷೇತ್ರಕ್ಕೆ ತುಂಬಲಾರದ ನಷ್ಟವಾಗಿದ್ದು, ಅವರ ಬೋಧನೆ, ಮಾರ್ಗದರ್ಶನ ಮತ್ತು ವ್ಯಕ್ತಿತ್ವ ವಿದ್ಯಾರ್ಥಿಗಳ ಮನಸ್ಸಿನಲ್ಲಿ ಸದಾ ಅಜರಾಮರವಾಗಿರಲಿದೆ.

Prajavikshane

Chandru R Bhanapaur

Leave a Reply

error: Content is protected !!