BREAKING : ಧಾರವಾಡದಲ್ಲಿ ಧರಣಿಗೆ ಸಜ್ಜಾಗಿದ್ದ ಉದ್ಯೋಗಾಂಕ್ಷಿಗಳ ಬಂಧನ..! : ಮಾನವ ಹಕ್ಕುಗಳ ದಿನವೇ ಹೋರಾಟದ ಹಕ್ಕನ್ನು ಕಸಿದ ಸರ್ಕಾರ..!!
ಧಾರವಾಡದಲ್ಲಿ ಧರಣಿಗೆ ಸಜ್ಜಾಗಿದ್ದ ಉದ್ಯೋಗಾಂಕ್ಷಿಗಳ ಬಂಧನ: ಸರ್ಕಾರ ವಿರುದ್ದ ಪ್ರತಿಭಟನಾಕಾರರ ಆಕ್ರೋಶ : ಬಿಡುಗಡೆಗೆ ಎ ಐ ಡಿ ವೈ ಓ ಆಗ್ರಹ..!!
ಪ್ರಜಾವೀಕ್ಷಣೆ ಡಿಜಿಟಲ್ ಸುದ್ದಿ :
ಧಾರವಾಡ : ಉದ್ಯೋಗಕ್ಕೆ ಆಗ್ರಹಿಸಿ ಧರಣಿಗೆ ಸಜ್ಜಾಗುತ್ತಿದ್ದ ಉದ್ಯೋಗಾಂಕ್ಷಿಗಳನ್ನು ಯಾವುದೇ ಮುನ್ಸೂಚನೆ ನೀಡದೇ ಪೊಲೀಸರು ಏಕಾಏಕಿ ಬಂಧಿಸಿದ ಘಟನೆ ಧಾರವಾಡದಲ್ಲಿ ಇಂದು ಬೆಳಗ್ಗೆ ನಡೆದಿದೆ. ಸರ್ಕಾರದ ಈ ಕ್ರಮಕ್ಕೆ ಉದ್ಯೋಗಾಂಕ್ಷಿಗಳಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ರಾಜ್ಯ ಸರ್ಕಾರ ಉದ್ಯೋಗಾಂಕ್ಷಿಗಳ ಬೇಡಿಕೆಗಳಿಗೆ ಇದುವರೆಗೂ ಸ್ಪಂದಿಸಿಲ್ಲ. ಹಲವು ತಿಂಗಳುಗಳಿಂದ ಮುಖ್ಯಮಂತ್ರಿ ಭೇಟಿ ಕೋರಿ ಮನವಿ ಸಲ್ಲಿಸಿದ್ದರೂ ಹಾಗೂ ಮುಖ್ಯ ಕಾರ್ಯದರ್ಶಿಗೆ ಆಗ್ರಹಪತ್ರ ನೀಡಿದ್ದರೂ ಯಾವುದೇ ಸ್ಪಷ್ಟ ಪ್ರತಿಕ್ರಿಯೆ ದೊರಕಿಲ್ಲ ಎಂದು ಉದ್ಯೋಗಾಂಕ್ಷಿಗಳ ಹೋರಾಟ ಸಮಿತಿ ಆರೋಪಿಸಿದೆ. ಈ ನಡುವೆ ಧರಣಿಗೆ ಸಿದ್ಧವಾಗುತ್ತಿದ್ದ ಕ್ಷಣದಲ್ಲೇ ಬಂಧನಕ್ಕಿಳಿದಿರುವುದು ಜನತಂತ್ರದ ಹರಣಕ್ಕೆ ಸಮಾನ ಎಂದು ಸಮಿತಿ ತಿಳಿಸಿದೆ.
ಸರ್ಕಾರದ ಈ ಕ್ರಮವು ಯುವಜನ ವಿರೋಧಿಯಾಗಿದ್ದು, ಪ್ರತಿಭಟನೆಯ ಹಕ್ಕನ್ನೇ ದಮನ ಮಾಡಲಾಗಿದೆ ಎಂದು ಹೋರಾಟ ಸಮಿತಿಯ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಒಳಮಿಸಲಾತಿಯ ನೆಪದಲ್ಲಿ ನೇಮಕಾತಿ ಪ್ರಕ್ರಿಯೆಗಳನ್ನು ವಿಳಂಬ ಮಾಡಲಾಗುತ್ತಿದೆ; ಉದ್ಯೋಗದ ಕನಿಷ್ಠ ಹಕ್ಕು ಕೇಳುವುದೇ ಅಪರಾಧವಾಗಿರುವ ಸ್ಥಿತಿ ನಿರ್ಮಾಣವಾಗಿದೆ ಎಂದು ಅವರು ತಿಳಿಸಿದ್ದಾರೆ.
ಬಂಧಿತರಲ್ಲಿ ಉದ್ಯೋಗಾಂಕ್ಷಿಗಳ ಹೋರಾಟ ಸಮಿತಿಯ ರಾಜ್ಯ ಸಂಚಾಲಕ ಸಿದ್ದಲಿಂಗ ಬಾಗೇವಾಡಿ, ಸಹ ಸಂಚಾಲಕರು ಭವಾನಿ ಶಂಕರ್ ಎಸ್. ಗೌಡ, ಚನ್ನಬಸವ ಜಾನೇಕಲ್, ಎಐಡಿವೈಓ ರಾಜ್ಯ ಅಧ್ಯಕ್ಷ ಶರಣಪ್ಪ ಉದ್ಬಾಳ್, ಎಐಕೆಕೆಎಂಎಸ್ ರಾಜ್ಯ ಉಪಾಧ್ಯಕ್ಷ ಲಕ್ಷ್ಮಣ ಜಡಗಣ್ಣವರ್, ಎಐಡಿವೈಓ ರಾಜ್ಯ ಉಪಾಧ್ಯಕ್ಷ ಜಗನ್ನಾಥ ಎಸ್. ಎಚ್., ಉದ್ಯೋಗಾಂಕ್ಷಿ ಪಾಲಾಕ್ಷ. ಕೆ ಸೇರಿದಂತೆ ಹಲವರು ಸೇರಿದ್ದಾರೆ.
ಬಂಧಿತರನ್ನು ತಕ್ಷಣ ಬಿಡುಗಡೆ ಮಾಡಬೇಕು ಹಾಗೂ ಉದ್ಯೋಗಾಂಕ್ಷಿಗಳ ನ್ಯಾಯಯುತ ಬೇಡಿಕೆಗಳಿಗೆ ಸರ್ಕಾರ ಸ್ಪಂದಿಸಬೇಕು ಎಂದು ಹೋರಾಟ ಸಮಿತಿ ಆಗ್ರಹಿಸಿದೆ. ಸರ್ಕಾರದ ದಬ್ಬಾಳಿಕೆಯ ವಿರುದ್ಧ ಹೋರಾಟ ಮತ್ತಷ್ಟು ತೀವ್ರಗೊಳ್ಳಲಿದೆ ಎಂದು ಸಮಿತಿ ಎಚ್ಚರಿಸಿದೆ.