Post Views: 34
LOCAL NEWS : ಮೇ 4ರಂದು ಕುಕನೂರಿನಲ್ಲಿ ಬಸವಣ್ಣ, ಅಂಬೇಡ್ಕರ್, ರಾಯಣ್ಣ ಮೂರ್ತಿಗಳಿಗೆ ಶಂಕುಸ್ಥಾಪನೆ: ಗವಿಸಿದ್ದೇಶ್ವರ ಸ್ವಾಮೀಜಿ ಸಾನ್ನಿಧ್ಯದಲ್ಲಿ ಚಾಲನೆ

ಪ್ರಜಾವೀಕ್ಷಣೆ ಡಿಜಿಟಲ್ ಸುದ್ದಿ :
ಕುಕನೂರು, ಏಪ್ರಿಲ್ 19 : ಮೇ 4ರಂದು ಕುಕನೂರು ಪಟ್ಟಣದಲ್ಲಿ ಜಗಜ್ಯೋತಿ ಬಸವೇಶ್ವರ, ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಹಾಗೂ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅವರ ಮೂರ್ತಿ ಸ್ಥಾಪನೆಗೆ ಶಂಕುಸ್ಥಾಪನೆ ನೆರವೇರಲಿದೆ ಎಂದು ಯಲಬುರ್ಗಾ ವಿಧಾನಸಭಾ ಕ್ಷೇತ್ರದ ಶಾಸಕ ಹಾಗೂ ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಅವರು ತಿಳಿಸಿದ್ದಾರೆ.
ಈ ಬಗ್ಗೆ ಭಾನುವಾರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಹಳೆ ಪಟ್ಟಣ ಪಂಚಾಯಿತಿ ಬಳಿ ಬಸವೇಶ್ವರ ಮೂರ್ತಿ ಸ್ಮಾರಕ, ಅಂಬೇಡ್ಕರ್ ಸರ್ಕಲ್ ಬಳಿ ಅಂಬೇಡ್ಕರ್ ಸ್ಮಾರಕ ಹಾಗೂ ಸಂಗೊಳ್ಳಿ ರಾಯಣ್ಣ ವೃತ್ತದ ಬಳಿ ರಾಯಣ್ಣ ಮೂರ್ತಿ ಪ್ರತಿಷ್ಠಾಪನೆಗೆ ಸರ್ಕಾರದಿಂದ ಅನುಮೋದನೆ ದೊರೆತಿದ್ದು, ಮೂರು ಪ್ರತಿಮೆಗಳ ಸ್ಥಾಪನೆಗೆ ತಲಾ ₹40 ಲಕ್ಷದಂತೆ ಒಟ್ಟು ₹1.20 ಕೋಟಿ ರೂ. ಅನುದಾನ ಮಂಜೂರು ಮಾಡಲಾಗಿದೆ ಎಂದು ಹೇಳಿದರು. ಹೀಗಾಗಿ ಅಡಿಗಲ್ಲು ಸಮಾರಂಭ ನಡೆಯಲಿದೆ ಎಂದು ತಿಳಿಸಿದರು.
ಮೂರ್ತಿ ನಿರ್ಮಾಣ ಕಾರ್ಯವನ್ನು ಕೊಲ್ಹಾಪುರದಲ್ಲಿ ನೀಡಲಾಗಿದ್ದು, ಒಂದರಿಂದ ಎರಡು ತಿಂಗಳೊಳಗೆ ಪ್ರತಿಮೆಗಳು ಸಿದ್ಧಗೊಳ್ಳಲಿವೆ. ಮೇ 4ರಂದು ಈ ಮೂರು ಮಹನೀಯರ ಪ್ರತಿಮೆಗಳಿಗೆ ಶಂಕುಸ್ಥಾಪನೆ ನೆರವೇರಿಸಲಾಗುವುದು.
ಕಾರ್ಯಕ್ರಮಕ್ಕೆ ಕೊಪ್ಪಳದ ಗವಿಸಿದ್ದೇಶ್ವರ ಮಹಾಸ್ವಾಮಿಗಳು ಆಗಮಿಸಲಿದ್ದು, ಅವರ ಸಾನ್ನಿಧ್ಯದಲ್ಲಿ ಶಂಕುಸ್ಥಾಪನೆ ನಡೆಯಲಿದೆ.
ಸಂಗೊಳ್ಳಿ ರಾಯಣ್ಣ ವೃತ್ತದಿಂದ ಹಳೆ ಪಟ್ಟಣ ಪಂಚಾಯಿತಿ ವರೆಗೆ ಪಾದಯಾತ್ರೆ ಮೂಲಕ ಕಾರ್ಯಕ್ರಮ ನಡೆಯಲಿದೆ ಎಂದು ಅವರು ತಿಳಿಸಿದರು.
ಬಳಿಕ ಅದೇ ದಿನ ಸಾಯಂಕಾಲ 5 ಗಂಟೆಗೆ ಕೃಷಿ ಮಾರುಕಟ್ಟೆ ಹಾಗೂ ತೋಟಗಾರಿಕೆ ಸಚಿವ ಶಿವಾನಂದ ಪಾಟೀಲ್ ಅವರಿಂದ ಎಪಿಎಂಸಿ ಆವರಣದಲ್ಲಿ ₹7 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ಶೀತಲ ಗೃಹ (ಕೋಲ್ಡ್ ಸ್ಟೋರೇಜ್) ಉದ್ಘಾಟನೆ ನೆರವೇರಲಿದೆ. ಜೊತೆಗೆ ನೂತನ ಪಟ್ಟಣ ಪಂಚಾಯಿತಿ ಕಟ್ಟಡ ಕಾಮಗಾರಿಗೆ ₹3 ಕೋಟಿ ರೂಪಾಯಿ ಯೋಜನೆಗೆ ಚಾಲನೆ ನೀಡಲಾಗುವುದು ಎಂದು ರಾಯರೆಡ್ಡಿ ತಿಳಿಸಿದ್ದಾರೆ.
ಈ ಎಲ್ಲಾ ಅಭಿವೃದ್ಧಿ ಕಾರ್ಯಗಳಿಗೆ ಪಕ್ಷಬೇಧ, ಜಾತಿಭೇದ ಮರೆತು ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಸೇರಿದಂತೆ ಸಾರ್ವಜನಿಕರು ಭಾಗವಹಿಸಬೇಕೆಂದು ಅವರು ಮನವಿ ಮಾಡಿದರು.
ಈ ಸುದ್ದಿಗೋಷ್ಠಿಯಲ್ಲಿ ಸಂಗಮೇಶ್ ಗುತ್ತಿ, ಗಗನ ನೋಟಗಾರ್, ಕಾಶಿಂಸಾಬ ತಳಕಲ್, ಹಣಮಂತಗೌಡ ಚಂಡೂರ್, ಸತ್ಯನಾರಾಯಣಪ್ಪ ಹರಪ್ಪನಹಳ್ಳಿ, ಹಣಮಂತಗೌಡ ಚೆಂಡೂರು ಸೇರಿದಂತೆ ಹಲವಾರು ಮುಖಂಡರು ಉಪಸ್ಥಿತರಿದ್ದರು.