LOCAL BREAKING : ಅಂಬೇಡ್ಕರ್ ಸೇರಿದಂತೆ ಮಹನೀಯರ ಭಾವಚಿತ್ರಕ್ಕೆ ಅಪಮಾನ: ಆರೋಪಿ ಬಂಧನ, ಪೊಲೀಸರ ಕಾರ್ಯಾಚರಣೆಗೆ ಮೆಚ್ಚುಗೆ!

ಪ್ರಜಾವೀಕ್ಷಣೆ ಡಿಜಿಟಲ್ ಸುದ್ದಿ :
ಕುಕನೂರು, ಏ.23: ತಾಲೂಕಿನ ವೀರಾಪುರ ಗ್ರಾಮದಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಸೇರಿದಂತೆ ಮಹನೀಯರ ಭಾವಚಿತ್ರಗಳಿಗೆ ಸೆಗಣಿ ಎರಚಿ ವಿಕೃತಿ ಮೆರೆದಿದ್ದ ಪ್ರಕರಣದಲ್ಲಿ ಪ್ರಮುಖ ಆರೋಪಿಯನ್ನು ಗುರುವಾರ ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.
ಏಪ್ರಿಲ್ 16ರಂದು ಗ್ರಾಮದ ವೃತ್ತದಲ್ಲಿದ್ದ ಅಂಬೇಡ್ಕರ್ ಸೇರಿದಂತೆ ಮಹನೀಯರ ನಾಮಫಲಕ ಹಾಗೂ ಭಾವಚಿತ್ರಗಳಿಗೆ ದುಷ್ಕರ್ಮಿಗಳು ಸೆಗಣಿ ಎರಚಿ ಅವಮಾನ ಮಾಡಿದ್ದರು.

ಘಟನೆ ಬೆಳಕಿಗೆ ಬಂದ ತಕ್ಷಣ ಸ್ಥಳೀಯರು ಹಾಗೂ ವಿವಿಧ ಸಂಘಟನೆಗಳ ಕಾರ್ಯಕರ್ತರು ಜಮಾಯಿಸಿ, ಕಿಡಿಗೇಡಿಗಳ ಬಂಧನಕ್ಕೆ ಆಗ್ರಹಿಸಿ ಪ್ರತಿಭಟನೆ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ಹಲವು ದಲಿತ ಸಂಘಟನೆಗಳೂ ಆರೋಪಿಯ ಬಂಧನಕ್ಕಾಗಿ ತೀವ್ರ ಒತ್ತಾಯ ಮಾಡಿದ್ದವು. ಘಟನೆಯಿಂದಾಗಿ ಗ್ರಾಮದಲ್ಲಿ ಕೆಲ ದಿನಗಳ ಕಾಲ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು.
ಪ್ರಕರಣದ ತನಿಖೆ ನಡೆಸಿದ ಪೊಲೀಸರು, ಇದೇ ಗ್ರಾಮದ ಶಿವಕುಮಾರ್ (23) ಎಂಬ ಯುವಕನನ್ನು ಬಂಧಿಸಿದ್ದು, ಆತನೇ ಪ್ರಮುಖ ಆರೋಪಿ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಏಪ್ರಿಲ್ 20ರಂದು ಅಂಬೇಡ್ಕರ್ ಜಯಂತಿ ಕಾರ್ಯಕ್ರಮ ನಡೆಸಲು ಗ್ರಾಮದಲ್ಲಿ ನಿರ್ಧರಿಸಲಾಗಿತ್ತು. ಇದರ ಅಂಗವಾಗಿ ಅಂಬೇಡ್ಕರ್ ಬಡಾವಣೆಯ ಪ್ರತಿ ಮನೆಯಿಂದ ₹200ರಂತೆ ಸಂಗ್ರಹಿಸಿ, ಒಟ್ಟು ₹14 ಸಾವಿರ ಹಣ ಸಂಗ್ರಹಿಸಲಾಗಿತ್ತು. ಈ ಪೈಕಿ ₹7 ಸಾವಿರವನ್ನು ವೈಯಕ್ತಿಕ ಖರ್ಚಿಗೆ ಬಳಸಿಕೊಂಡಿದ್ದಾನೆ. ಈ ಜಯಂತಿಯನ್ನು ಮುಂದೂಡುವುದಕ್ಕಾಗಿ ಈ ರೀತಿ ಕೃತಿ ಎಸಗಿದ್ದಾನೆ ಎಂದು ತನಿಖೆಯಲ್ಲಿ ಬಹಿರಂಗವಾಗಿದೆ.
