LOCAL EXPRESS : ತಿಪ್ಪೇಗುಂಡಿಯಾದ ಸರ್ಕಾರಿ ವಸತಿ ನಿಲಯ – ಎಸ್‌ಎಫ್‌ಐ ಆಕ್ರೋಶ, ಅಧಿಕಾರಿಗಳಿಗೆ 2 ದಿನಗಳ ಗಡುವು!

ಪ್ರಜಾವೀಕ್ಷಣೆ ಡಿಜಿಟಲ್ ಸುದ್ದಿ :
ಕುಕನೂರು, ಮೇ 15 : ತಾಲೂಕಿನ ದ್ಯಾಂಪುರದಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯವು ಸಂಪೂರ್ಣವಾಗಿ ಅವ್ಯವಸ್ಥೆಯ ಗೂಡಾಗಿದ್ದು, ಕೂಡಲೇ ಮೂಲಭೂತ ಸೌಕರ್ಯ ಒದಗಿಸುವಂತೆ ಒತ್ತಾಯಿಸಿ ಭಾರತೀಯ ವಿದ್ಯಾರ್ಥಿ ಒಕ್ಕೂಟ (SFI) ನೇತೃತ್ವದಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.
ಅಶುಚಿಯ ತಾಣವಾದ ಹಾಸ್ಟೆಲ್: ವಸತಿ ನಿಲಯದ ಆವರಣವು ಸರಿಯಾದ ನಿರ್ವಹಣೆ ಇಲ್ಲದೆ ‘ತಿಪ್ಪೇಗುಂಡಿ’ಯಂತಾಗಿದೆ ಎಂದು ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದರು. ಶೌಚಾಲಯಗಳ ಅಶುಚಿತ್ವ, ಕುಡಿಯುವ ನೀರಿನ ಸಮಸ್ಯೆ ಹಾಗೂ ಕೊಠಡಿಗಳ ದುಸ್ಥಿತಿಯಿಂದಾಗಿ ವಿದ್ಯಾರ್ಥಿಗಳು ಸಾಂಕ್ರಾಮಿಕ ರೋಗಗಳ ಭೀತಿಯಲ್ಲಿ ದಿನದೂಡುವಂತಾಗಿದೆ.
“ಸರ್ಕಾರ ವಿದ್ಯಾರ್ಥಿಗಳ ಪೌಷ್ಟಿಕಾಂಶಕ್ಕಾಗಿ ಹಣ ಬಿಡುಗಡೆ ಮಾಡಿದರೂ, ಇಲ್ಲಿ ಸುಸಜ್ಜಿತ ಮತ್ತು ಗುಣಮಟ್ಟದ ಆಹಾರ ನೀಡುತ್ತಿಲ್ಲ. ವಿದ್ಯಾರ್ಥಿಗಳ ಆರೋಗ್ಯದ ಜೊತೆ ನಿಲಯದ ಆಡಳಿತ ಮಂಡಳಿ ಚೆಲ್ಲಾಟವಾಡುತ್ತಿದೆ” ಎಂದು SFI ಮುಖಂಡರು ಸಭೆಯಲ್ಲಿ ಕಿಡಿಕಾರಿದರು.
