BIG NEWS : ಸಮಾನತೆ, ಐಕ್ಯತೆ ಆಧಾರಿತ ಭಾರತ ಕಟ್ಟೋಣ : ಸನತ್ ಕುಮಾರ್ ಬೆಳಗಲಿ ಕರೆ
ಪ್ರಜಾವೀಕ್ಷಣೆ ಡಿಜಿಟಲ್ ಸುದ್ದಿ :
ಹುಬ್ಬಳ್ಳಿ, ಮೇ 16 : ‘ಎಲ್ಲಾ ಜಾತಿ-ಧರ್ಮದವರು ಕಟ್ಟಿದ ಈ ಭಾರತ ದೇಶವನ್ನು ಎಲ್ಲರೂ ಸೇರಿ ಉಳಿಸಬೇಕು. ಐಕ್ಯತೆ ಮತ್ತು ಸಮಾನತೆಯ ಭಾರತವನ್ನು ನಿರ್ಮಿಸೋಣ’ ಎಂದು ಹಿರಿಯ ಪತ್ರಕರ್ತ ಹಾಗೂ ಚಿಂತಕ ಸನತಕುಮಾರ ಬೆಳಗಲಿ ಕರೆ ನೀಡಿದರು.
ಇಂದು ನಗರದ ಆರ್. ಎನ್. ಶೆಟ್ಟಿ ಕಲ್ಯಾಣ ಮಂಟಪದಲ್ಲಿ ನರಗುಂದ ನವಲಗುಂದ ರೈತ ಬಂಡಾಯ ವೇಧಿಕೆಯ ಅಡಿಯಲ್ಲಿ ಲಡಾಯಿ ಪ್ರಕಾಶನ ಗದಗ್, ಚಿತ್ತಾರ ಕಲಾ ಬಳಗ ಧಾರವಾಡ, ಕವಿ ಪ್ರಕಾಶನ ಕವಲಕ್ಕಿ ಹಾಗೂ ಮೇ ಸಾಹಿತ್ಯ ಮೇಳ ಬಳಗ ಹುಬ್ಬಳ್ಳಿ ಇವುಗಳ ಸಂಯುಕ್ತಾಶ್ರಯದಲ್ಲಿ “ಸಾಂವಿಧಾನಿಕ ಪ್ರಜಾಸತ್ತೆಯ ಮೇಲಿನ ದಾಳಿ, ಚಹರೆ ಮತ್ತು ಹೊರದಾರಿಗಳು” ಎಂಬ ಮುಖ್ಯ ವಿಷಯಾಧಾರಿತ 12ನೇ ಮೇ ಸಾಹಿತ್ಯ ಮೇಳಕ್ಕೆ ಶುಕ್ರವಾರ ಚಾಲನೆ ದೊರೆಯಿತು.
ವಿಶೇಷವಾಗಿ ದೇಶದ ವಿವಿಧ ರಾಜ್ಯಗಳ ನಕ್ಷೆಗಳನ್ನು ಗಣ್ಯರು ಜೋಡಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು. ಈ ಸಂದರ್ಭದಲ್ಲಿ ಸಾಹಿತ್ಯಾಸಕ್ತರು, ಚಿಂತಕರು ಹಾಗೂ ವಿವಿಧ ಕ್ಷೇತ್ರಗಳ ಗಣ್ಯರು ಉಪಸ್ಥಿತರಿದ್ದರು.
ಮೇಳದಲ್ಲಿ ಸಮಾಜಮುಖಿ, ಪ್ರಗತಿ ಪರ ಸಾಹಿತಿಗಳ ಪುಸ್ತಕ ಹಾಗೂ ಸಂವಿಧಾನದ ಕುರಿತು ಚಿತ್ರಕಲಾ ಮೇಳ ನಡೆಯಿತು.
ಇದೇ ಸಂದರ್ಭದಲ್ಲಿ ಗಣ್ಯರಿಂದ ವಿವಿಧ ಪುಸ್ತಕಗಳನ್ನು ಬಿಡುಗಡೆಗೊಳಿಸಲಾಯಿತು.
12ನೇ ಮೇ ಸಾಹಿತ್ಯ ಮೇಳವನ್ನು ಉದ್ಘಾಟಿಸಿ ಮಾತನಾಡಿದ ಬೆಳಗಲಿ ಅವರು, ‘ಸಂವಿಧಾನ ನಮಗೆ ಬೆಳಕು ನೀಡಿದೆ. ಆದರೆ, ಕೇಂದ್ರ ಸರ್ಕಾರ ಸಂವಿಧಾನ ವಿರೋಧಿ ಕ್ರಮಗಳನ್ನು ಕೈಗೊಳ್ಳುತ್ತಿದೆ. ಮತದಾರರನ್ನು ಹೊರ ಹಾಕಿ ಎಸ್‌ಐಆರ್ ಜಾರಿಗೆ ತಂದು ಪ್ರಜಾಪ್ರಭುತ್ವ ಹರಣ ಮಾಡಿ ಮತದಾನದ ಹಕ್ಕನ್ನು ಕಸಿದುಕೊಳ್ಳಲಾಗುತ್ತಿದೆ” ಎಂದು ಆರೋಪಿಸಿದರು.
“ಫಾಸಿಸ್ಟ್ ಶಕ್ತಿಗಳ ಕೈಯಿಂದ ಅಧಿಕಾರವನ್ನು ಕಸಿದುಕೊಳ್ಳುವವರಿಗೆ ಭದ್ರತೆಯೇ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಇದು ಒಕ್ಕೂಟ ರಾಷ್ಟ್ರವಾಗಿದ್ದು, ‘ಏಕ್ ಸಂಸ್ಕೃತಿ, ಏಕ್ ಭಾಷೆ’ ಹೇರಿಕೆಯ ಮೂಲಕ ದೇಶವನ್ನು ಒಡೆಯುವ ಹುನ್ನಾರ ನಡೆಯುತ್ತಿದೆ” ಎಂದು ಅವರು ಅಭಿಪ್ರಾಯಪಟ್ಟರು.
“ಮಣಿಪುರ ಹೊತ್ತಿ ಉರಿಯುತ್ತಿದೆಯಾದರೂ ಪ್ರಧಾನಿ ಅಲ್ಲಿಗೆ ತೆರಳಿ ಸಮಸ್ಯೆ ಬಗೆಹರಿಸಲು ಸಾಧ್ಯವಾಗುತ್ತಿಲ್ಲ. ಎಲ್ಲಾ ಜಾತಿ-ಧರ್ಮದವರು ಕಟ್ಟಿದ ಈ ದೇಶವನ್ನು ಎಲ್ಲರೂ ಸೇರಿ ಉಳಿಸಬೇಕು. ಐಕ್ಯತೆ ಮತ್ತು ಸಮಾನತೆಯ ಭಾರತವನ್ನು ನಿರ್ಮಿಸೋಣ” ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಆಂಧ್ರಪ್ರದೇಶದ ಪ್ರಗತಿಪರ ಚಿಂತಕ ಪಾಣಿ ಕರ್ನುಲ್ ಮಾತನಾಡಿ, “ಮಾನವೀಯತೆ, ಸಮಾನತೆ ಮತ್ತು ಸಾಮಾಜಿಕ ನ್ಯಾಯವೇ ನಮ್ಮ ಪರಮ ಧರ್ಮವಾಗಬೇಕಿದೆ. ಬ್ರಹ್ಮಣ್ಯ ಮತ್ತು ಜಾತ್ಯತೀತತೆಯ ಹೆಸರಿನಲ್ಲಿರುವ ಶ್ರೇಣೀಕೃತ ಅಸಮಾನತೆ ಹಾಗೂ ಸಾಮಾಜಿಕ ತಾರತಮ್ಯಗಳನ್ನು ಸಂಪೂರ್ಣವಾಗಿ ತ್ಯಜಿಸಿ, ಪ್ರತಿಯೊಬ್ಬ ಮಾನವನಿಗೂ ಸಮಾನ ಗೌರವ ಸಿಗುವಂತಹ ಮುಕ್ತ ಸಮಾಜವನ್ನು ನಿರ್ಮಿಸಬೇಕಿದೆ. ಇದಕ್ಕಾಗಿ ಕೇವಲ ಒಂದು ರಾಜ್ಯ ಅಥವಾ ಪ್ರಾಂತ್ಯಕ್ಕೆ ಸೀಮಿತವಾಗದೆ, ಭೌಗೋಳಿಕ ಗಡಿಗಳನ್ನು ಮೀರಿ ನಾವೆಲ್ಲರೂ ಶೋಷಣೆಮುಕ್ತ ಮತ್ತು ವೈಚಾರಿಕ ಸಮಾಜದ ನಿರ್ಮಾಣಕ್ಕಾಗಿ ಒಂದಾಗಬೇಕಾಗಿದೆ ಎಂದು ಹೇಳಿದರು.
ಮೇಳದ ಉದ್ಘಾಟನಾ ಸಮಾರಂಭದ ವೇದಿಕೆಯಲ್ಲಿ ಅನಿಲ ಹೊಸಮನಿ, ಸನತಕುಮಾರ ಬೆಳಗಲಿ, ಕೆ. ನೀಲಾ, ಕೆ.ಪಿ. ಸುರೇಶ್ ಹಾಗೂ ಬಸವರಾಜ ಸುಳಿಭಾವಿ, ಸವಿತಾ ಬನ್ನಂಜೆ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಯ ಸಾಹಿತ್ಯಾಸಕ್ತರು, ಚಿಂತಕರು ಮತ್ತು ಪತ್ರಕರ್ತರು, ಹೋರಾಟಗಾರರು ಹಾಗೂ ವಿವಿಧ ಕ್ಷೇತ್ರಗಳ ಗಣ್ಯರು ಉಪಸ್ಥಿತರಿದ್ದರು ಹಾಗೂ ಜೊತೆಗೆ ಪ್ರಗತಿಪರ ಸಾಹಿತ್ಯ ಆಸಕ್ತರಿಂದ ಸಭಾಂಗಣ ತುಂಬಿ ತುಳುಕುತ್ತಿತ್ತು.
“ಸಂವಿಧಾನದ ಆಶಯಗಳನ್ನು ಬಲಪಡಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ನಿಜವಾಗಿ ನಾವು ಋಣಿಯಾಗಿರಬೇಕಾಗಿರುವುದು ದುಡಿಯುವ ಕಾರ್ಮಿಕ ವರ್ಗಕ್ಕೆ ಎಂಬುದನ್ನು ಸ್ಪಷ್ಟವಾಗಿ ಅರಿಯಬೇಕಿದೆ.
“ದೇಶದ ಸಂಪತ್ತಿನ ಬಹುಪಾಲು ಕೆಲವೇ ಜನರ ಕೈಗಳಲ್ಲಿ ಕೇಂದ್ರೀಕೃತವಾಗಿದೆ. ಶೋಷಣೆಯಿಂದ ಮುಕ್ತವಾಗಿ, ಜಾತಿ-ಭೇದಭಾವ ಮೀರಿ ಎಲ್ಲರೂ ಒಂದಾಗಿ ಧ್ವನಿ ಎತ್ತಬೇಕಿದೆ. ನಾನು ಬ್ರಾಹ್ಮಣಶಾಹಿ ಮತ್ತು ಬಂಡವಾಳಶಾಹಿ ವಿರೋಧಿ”