LOCAL NEWS : ಕುಕನೂರು ಪ. ಪಂ. ಸಾಮಾನ್ಯ ಸಭೆ : ಪಟ್ಟಣದ ಸ್ವಚ್ಛತೆಯ ಬಗ್ಗೆ ಧ್ವನಿ ಎತ್ತಿದ ಸದಸ್ಯರು!

PV ನ್ಯೂಸ್ ಡಿಜಿಟಲ್ :
ಕುಕನೂರು, ಮೇ 19 : ಇಲ್ಲಿನ ಪಟ್ಟಣದ ಪ್ರವಾಸಿ ಮಂದಿರದ ಸಭಾಂಗಣದಲ್ಲಿ ನಡೆದ ಪಟ್ಟಣ ಪಂಚಾಯತ್ ಸರ್ವ ಸದಸ್ಯರುಗಳ ಸಾಮಾನ್ಯ ಸಭೆ ನಡೆಯಿತು.
ಪಟ್ಟಣದ ವಾರ್ಡ್‌ಗಳ ಸ್ವಚ್ಛತೆ ಹಾಗೂ ಚರಂಡಿ ವ್ಯವಸ್ಥೆಯ ಅಸ್ತವ್ಯಸ್ತ ನಿರ್ವಹಣೆಯ ಕುರಿತು ಸದಸ್ಯರು ತೀವ್ರ ಅಸಮಾಧಾನ ವ್ಯಕ್ತಪಡಿಸಿ, ತಕ್ಷಣದ ಸುಧಾರಣೆಗೆ ಕಡ್ಡಾಯವಾಗಿ ಕ್ರಮ ಕೈಗೊಳ್ಳಬೇಕು, ಅನಧಿಕೃತ ಕಟ್ಟಡಗಳಿಗೆ ವಿದ್ಯುತ್ ಸಂಪರ್ಕವನ್ನು ತಕ್ಷಣದಿಂದ ಬಂದ್ ಮಾಡಬೇಕು ಎಂದು ಅಧಿಕಾರಿಗಳನ್ನು ಒತ್ತಾಯಿಸಿದರು.
ವಾರ್ಡ್‌ಗಳಲ್ಲಿ ಕಸದ ರಾಶಿ : ಸದಸ್ಯರ ಆಕ್ರೋಶ!
ಸಭೆ ಆರಂಭವಾಗುತ್ತಿದ್ದಂತೆ ಪಟ್ಟಣದ ವಿವಿಧ ವಾರ್ಡ್‌ಗಳ ಪ್ರತಿನಿಧಿಗಳು ತಮ್ಮ ಭಾಗದ ನೈರ್ಮಲ್ಯದ ಸ್ಥಿತಿಗತಿಯನ್ನು ಸಭೆಯ ಗಮನಕ್ಕೆ ತಂದರು.
ಸದಸ್ಯರ ವಾದ :- “ಹಲವು ವಾರ್ಡ್‌ಗಳಲ್ಲಿ ಕಸದ ಗಾಡಿಗಳು ಸಕಾಲಕ್ಕೆ ಬರುತ್ತಿಲ್ಲ. ಮುಖ್ಯ ರಸ್ತೆ ಹಾಗೂ ಗಲ್ಲಿಗಳ ಮೂಲೆಗಳಲ್ಲಿ ಕಸದ ರಾಶಿ ಬಿದ್ದಿದ್ದರೂ ವಿಲೇವಾರಿ ಮಾಡಲು ಪೌರಕಾರ್ಮಿಕರು ಮುಂದಾಗುತ್ತಿಲ್ಲ. ಸಾರ್ವಜನಿಕರು ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ” ಎಂದು ಸದಸ್ಯರು ತರಾಟೆಗೆ ತೆಗೆದುಕೊಂಡರು.
ಪೌರಕಾರ್ಮಿಕರ ಮೂಲ ಹುದ್ದೆಗೆ ಕಳಿಸುವ ಕುರಿತು ತೀವ್ರ ಚರ್ಚೆ :
ಪಟ್ಟಣ ಪಂಚಾಯತಿ ಕಚೇರಿಯಲ್ಲಿ ಸುಮಾರು ವರ್ಷಗಳಿಂದ ಪೌರಕಾರ್ಮಿಕರೆಂದು ನೇಮಕವಾಗಿ ಆಡಳಿತಾತ್ಮಕ ಬೇರೆ ಬೇರೆ ಕೆಲಸಗಳು ಮಾಡುತ್ತಿರುವುದು ಸದಸ್ಯರುಗಳಲ್ಲಿ ಹಾಗೂ ಪೌರಕಾರ್ಮಿಕರಲ್ಲಿಅಸಮಾಧಾನ ವ್ಯಕ್ತವಾಗಿದೆ.
ಅಂತಹ ಪೌರಕಾರ್ಮಿಕರನ್ನ ಗುರುತಿಸಿ ಅವರನ್ನು ಮೂಲ ನೇಮಕವಾದ ಕೆಲಸದತ್ತ ಕಳಿಸುವುದಕ್ಕಾಗಿ ಇಂದಿನ ಸಭೆಯಲ್ಲಿ ಬಹಳಷ್ಟು ಚರ್ಚೆ ನಡೆಯಿತು.

ಮಹಿಳಾ ಸದಸ್ಯ ಲಕ್ಷ್ಮಿ ಸಬರದ್ ಮಾತನಾಡಿ, ವಾರ್ಡ್‌ಗಳಲ್ಲಿ ಚರಂಡಿಗಳನ್ನು ಸರಿಯಾಗಿ ಸ್ವಚ್ಛಗೊಳಿಸುತ್ತಿಲ್ಲ. ಕಸದ ಗಾಡಿಗಳು ಸಕಾಲಕ್ಕೆ ಬರುತ್ತಿಲ್ಲ. ಇದರಿಂದಾಗಿ ಸೊಳ್ಳೆಗಳ ಕಾಟ ಹೆಚ್ಚಾಗಿದ್ದು, ಸಾರ್ವಜನಿಕರಲ್ಲಿ ಸಾಂಕ್ರಾಮಿಕ ರೋಗಗಳ ಭೀತಿ ಎದುರಾಗಿದೆ. ಈ ಬಗ್ಗೆ ನಮ್ಮ ವಾರ್ಡಿನ ಜನ ನನಗೆ ತರಾಟೇ ತೆಗೆದುಕೊಂಡಿದ್ದಾರೆ. ಶೀಘ್ರದಲ್ಲೇ ಈ ಸಮಸ್ಯೆ ಬಗೆಹರಿಸಿ ಎಂದು ಒತ್ತಾಯಿಸಿದರು.
‘ಪಟ್ಟಣದ ನೈರ್ಮಲ್ಯದ ಸ್ಥಿತಿಗತಿ ಸಂಪೂರ್ಣ ಹದಗೆಟ್ಟಿದ್ದು, ಆರೋಗ್ಯ ವಿಭಾಗದ ಅಧಿಕಾರಿಗಳು ಕಣ್ಣು ಮುಚ್ಚಿ ಕುಳಿತಿದ್ದಾರೆ, ವಾರ್ಡ್‌ಗಳಲ್ಲಿ ಬೀದಿ ದೀಪಗಳ ನಿರ್ವಹಣೆ ಸರಿಯಾಗಿ ನಡೆಯುತ್ತಿಲ್ಲ’ ಎಂದು ಸದಸ್ಯ ಮಲ್ಲಿಕಾರ್ಜುನ್ ಚೌದರಿ ಕಿಡಿಕಾರಿದರು.
