ಕೊಪ್ಪಳ, ಜೂನ್ 25: ಅಖಿಲ ಭಾರತ ಪ್ರಜಾಸತ್ತಾತ್ಮಕ ಯುವಜನ ಸಂಘಟನೆ (ಎಐಡಿವೈಒ) ಸ್ಥಾಪನೆಯ 60ನೇ ವರ್ಷದ ಅಂಗವಾಗಿ ಜೂನ್ 27ರಂದು ಕೊಲ್ಕತ್ತಾದಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ಯುವಜನ ಮೆರವಣಿಗೆ ಹಾಗೂ ಸಾರ್ವಜನಿಕ ಸಭೆಯಲ್ಲಿ ಪಾಲ್ಗೊಳ್ಳಲು ಕೊಪ್ಪಳ ಜಿಲ್ಲೆಯಿಂದ 10ಕ್ಕೂ ಹೆಚ್ಚು ಪ್ರತಿನಿಧಿಗಳು ಗುರುವಾರ ಪ್ರಯಾಣ ಬೆಳೆಸಿದರು.
ಪ್ರಯಾಣಕ್ಕೂ ಮುನ್ನ ಕೊಪ್ಪಳ ರೈಲು ನಿಲ್ದಾಣದ ಮುಂಭಾಗದಲ್ಲಿ ಜಮಾಯಿಸಿದ ಕಾರ್ಯಕರ್ತರು, ‘ವಿದ್ಯಾರ್ಥಿ–ಯುವಜನರ ಐಕ್ಯತೆ ಚಿರಾಯುವಾಗಲಿ’, ‘ನೇತಾಜಿ–ಭಗತ್ ಸಿಂಗ್ ನಮ್ಮ ಆದರ್ಶ’, ‘ಉನ್ನತ ನೀತಿ–ಉನ್ನತ ಸಂಸ್ಕೃತಿ ನಮ್ಮ ಗುರಿ’ ಹಾಗೂ ‘ಎಐಡಿವೈಒ ಜಿಂದಾಬಾದ್’ ಎಂಬ ಘೋಷಣೆಗಳನ್ನು ಕೂಗುವ ಮೂಲಕ ಸಮಾವೇಶ ಯಶಸ್ವಿಗೊಳಿಸುವ ಸಂಕಲ್ಪ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ಶರಣು ಪಾಟೀಲ್ ಮಾತನಾಡಿ, “1966ರ ಜೂನ್ 26ರಂದು ಶಿವದಾಸ್ ಘೋಷ್ ಅವರ ವಿಚಾರಗಳ ಪ್ರೇರಣೆಯಿಂದ ಸ್ಥಾಪಿತವಾದ ಎಐಡಿವೈಒ, ಇಂದು ದೇಶದ 24ಕ್ಕೂ ಹೆಚ್ಚು ರಾಜ್ಯಗಳಲ್ಲಿ ಸಕ್ರಿಯವಾಗಿದೆ. ಕಳೆದ ಆರು ದಶಕಗಳಿಂದ ಯುವಜನರ ಹಕ್ಕುಗಳು, ಉದ್ಯೋಗ, ವೈಜ್ಞಾನಿಕ ಶಿಕ್ಷಣ ಹಾಗೂ ಸಾಮಾಜಿಕ ನ್ಯಾಯಕ್ಕಾಗಿ ಸಂಘಟನೆ ನಿರಂತರ ಹೋರಾಟ ನಡೆಸುತ್ತಾ ಬಂದಿದೆ” ಎಂದರು.
ಮುಂದುವರಿದು ಮಾತನಾಡಿದ ಅವರು, “ನಿರುದ್ಯೋಗ, ಭ್ರಷ್ಟಾಚಾರ, ಆನ್‌ಲೈನ್ ಲಾಟರಿ, ಖಾಲಿ ಹುದ್ದೆಗಳ ಭರ್ತಿ, ಜಾತಿವಾದ ಮತ್ತು ಕೋಮುವಾದದ ವಿರುದ್ಧ ಸಂಘಟನೆ ಸದಾ ಧ್ವನಿಯೆತ್ತಿದೆ. ಯುವಜನರಲ್ಲಿ ಮಾನವೀಯ ಮೌಲ್ಯಗಳನ್ನು ಬೆಳೆಸುವ ಜೊತೆಗೆ ಮಾದಕವಸ್ತು ವ್ಯಸನ, ಮೂಢನಂಬಿಕೆ ಹಾಗೂ ಮಹಿಳೆಯರ ಮೇಲಿನ ದೌರ್ಜನ್ಯದ ವಿರುದ್ಧ ಜಾಗೃತಿ ಮೂಡಿಸಲಾಗುತ್ತಿದೆ” ಎಂದು ತಿಳಿಸಿದರು.
ಜೂನ್ 27ರಂದು ಬೃಹತ್ ರ‍್ಯಾಲಿ:
ಕೊಲ್ಕತ್ತಾದ ಕಾಲೇಜ್ ಸ್ಟ್ರೀಟ್‌ನಿಂದ ಸುಭೋಧ್ ಮಲ್ಲಿಕ್ ಸ್ಕ್ವೇರ್‌ವರೆಗೆ ಬೃಹತ್ ರಾಷ್ಟ್ರಮಟ್ಟದ ಮೆರವಣಿಗೆ ನಡೆಯಲಿದ್ದು, ಸಾರ್ವಜನಿಕ ಸಭೆಯಲ್ಲಿ ಎಸ್‌ಯುಸಿಐ(ಸಿ) ಕೇಂದ್ರ ಸಮಿತಿ ಸದಸ್ಯ ಅರುಣ್ ಸಿಂಗ್, ಎಐಡಿವೈಒ ಅಖಿಲ ಭಾರತ ಪ್ರಧಾನ ಕಾರ್ಯದರ್ಶಿ ಅಮರ್ಜಿತ್ ಕುಮಾರ್ ಸೇರಿದಂತೆ ಹಲವು ಮುಖಂಡರು ಮಾತನಾಡಲಿದ್ದಾರೆ.
ಈ ಸಂದರ್ಭದಲ್ಲಿ ಸಂಘಟನೆಯ ಪದಾಧಿಕಾರಿಗಳಾದ ಅಜ್ಮಿರ್ ನಿಟ್ಟಾಲಿ, ಶುಭಾನ್ ಸಾಬ್ ನಿರ್ಲಗಿ, ಚಂದ್ರು ಭಾನಾಪುರ, ವೀರೇಶ್ ಬಿಸರಳ್ಳಿ, ರಾಜು ಬಿಸರಳ್ಳಿ, ಶಿವಮೂರ್ತಿ ವಡಗನಾಳ್, ಜಾಹಿದ್ ಕೊಪ್ಪಳ ಸೇರಿದಂತೆ ಹಲವು ಕಾರ್ಯಕರ್ತರು ಉಪಸ್ಥಿತರಿದ್ದರು.
“ಜೂನ್ 27ರಂದು ಕೋಲ್ಕತ್ತಾದಲ್ಲಿ ನಡೆಯಲಿರುವ ಎಐಡಿವೈಒ (AIDYO) ಸಂಘಟನೆಯ 60ನೇ ಸಂಸ್ಥಾಪನಾ ದಿನದ ಸಮಾರೋಪ ಸಮಾರಂಭ ಮತ್ತು ಬೃಹತ್ ರ‍್ಯಾಲಿಯಲ್ಲಿ ಕರ್ನಾಟಕದ ಯುವಜನತೆ ಹಾಗೂ ಪ್ರಜ್ಞಾವಂತ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ರಾಜ್ಯ ಸಮಿತಿ ಕರೆ ನೀಡಿದೆ. ಸರ್ಕಾರಿ ಹುದ್ದೆಗಳ ತಕ್ಷಣದ ಭರ್ತಿ ಹಾಗೂ ನೇಮಕಾತಿ ಭ್ರಷ್ಟಾಚಾರದ ವಿರುದ್ಧ ನಿರಂತರ ಹೋರಾಡುತ್ತಿರುವ ಸಂಘಟನೆಯು, ಆನ್‌ಲೈನ್ ಗೇಮ್ಸ್ ಮತ್ತು ಮಾದಕ ವ್ಯಸನಗಳಿಂದ ಹಾದಿ ತಪ್ಪುತ್ತಿರುವ ಇಂದಿನ ಯುವಸಮುದಾಯದಲ್ಲಿ ಭಗತ್ ಸಿಂಗ್ ಹಾಗೂ ನೇತಾಜಿಯವರ ಆದರ್ಶಗಳ ಮೂಲಕ ವೈಚಾರಿಕ ಮತ್ತು ಸಾಂಸ್ಕೃತಿಕ ಪ್ರಜ್ಞೆ ಮೂಡಿಸಲು ಶ್ರಮಿಸುತ್ತಿದೆ.”
:- ಸಿದ್ದಲಿಂಗ ಬಾಗೇವಾಡಿ, ರಾಜ್ಯ ಕಾರ್ಯದರ್ಶಿ, AIDYO, ಕರ್ನಾಟಕ.