You are currently viewing BIG NEWS : ಗೃಹಲಕ್ಷ್ಮಿ ಹಣದಿಂದ 2 ಲಕ್ಷ ಮಹಿಳೆಯರು ವಂಚಿತ: ಸರ್ಕಾರದ ಲೋಪ ಒಪ್ಪಿಕೊಂಡ ಶಾಸಕ ರಾಯರೆಡ್ಡಿ..!

BIG NEWS : ಗೃಹಲಕ್ಷ್ಮಿ ಹಣದಿಂದ 2 ಲಕ್ಷ ಮಹಿಳೆಯರು ವಂಚಿತ: ಸರ್ಕಾರದ ಲೋಪ ಒಪ್ಪಿಕೊಂಡ ಶಾಸಕ ರಾಯರೆಡ್ಡಿ..!

BIG NEWS : ಗೃಹಲಕ್ಷ್ಮಿ ಹಣದಿಂದ 2 ಲಕ್ಷ ಮಹಿಳೆಯರು ವಂಚಿತ: ಸರ್ಕಾರದ ಲೋಪ ಒಪ್ಪಿಕೊಂಡ ಶಾಸಕ ರಾಯರೆಡ್ಡಿ..!

ಪ್ರಜಾವೀಕ್ಷಣೆ ಡಿಜಿಟಲ್ ಸುದ್ದಿ : 

ಯಲಬುರ್ಗಾ, ಜುಲೈ 2 : ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ಅನುಷ್ಠಾನದಲ್ಲಿ ಕೆಲವು ಆಡಳಿತಾತ್ಮಕ ಹಾಗೂ ತಾಂತ್ರಿಕ ಲೋಪಗಳಿರುವುದನ್ನು ಕಾಂಗ್ರೆಸ್ ಹಿರಿಯ ಶಾಸಕ ಬಸವರಾಜ್ ರಾಯರೆಡ್ಡಿ ಬಹಿರಂಗವಾಗಿ ಒಪ್ಪಿಕೊಂಡಿದ್ದಾರೆ.

ಯಲಬುರ್ಗಾದಲ್ಲಿ ಗುರುವಾರ ಮಾತನಾಡಿದ ಅವರು, “ಸರ್ಕಾರ ಅಂದಮೇಲೆ ನ್ಯೂನತೆಗಳು ಸಾಕಷ್ಟಿರುತ್ತವೆ” ಎಂದು ಹೇಳುವ ಮೂಲಕ ಗ್ಯಾರಂಟಿ ಯೋಜನೆಗಳ ಜಾರಿಯಲ್ಲಿ ಎದುರಾಗಿರುವ ಸಮಸ್ಯೆಗಳ ಕುರಿತು ಸ್ಪಷ್ಟನೆ ನೀಡಿದರು.

ಗೃಹಲಕ್ಷ್ಮಿ ಯೋಜನೆಯಡಿ ರಾಜ್ಯದಲ್ಲಿ ಒಟ್ಟು 1 ಕೋಟಿ 26 ಲಕ್ಷ ಅರ್ಹ ಫಲಾನುಭವಿಗಳಿಗೆ ಪ್ರತಿ ತಿಂಗಳು ಹಣ ಪಾವತಿಸಬೇಕಾಗಿದೆ. ಆದರೆ ದಾಖಲಾತಿ ದೋಷಗಳು ಹಾಗೂ ತಾಂತ್ರಿಕ ಕಾರಣಗಳಿಂದಾಗಿ ಪ್ರಸ್ತುತ 1 ಕೋಟಿ 24 ಲಕ್ಷ ಮಹಿಳೆಯರಿಗೆ ಮಾತ್ರ ಹಣ ತಲುಪುತ್ತಿದ್ದು, ಸುಮಾರು 2 ಲಕ್ಷ ಅರ್ಹ ಫಲಾನುಭವಿಗಳಿಗೆ ಇನ್ನೂ ಹಣ ಜಮೆಯಾಗಿಲ್ಲ ಎಂದು ಅವರು ತಿಳಿಸಿದರು.

ಪ್ರತಿ ತಿಂಗಳು ಸುಮಾರು ₹2,500 ಕೋಟಿ ಹಣವನ್ನು ಭ್ರಷ್ಟಾಚಾರ ರಹಿತವಾಗಿ ನೇರವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ಜಮೆ ಮಾಡಲಾಗುತ್ತಿದೆ. ಆದರೆ ಹಲವು ಫಲಾನುಭವಿಗಳು ಮೃತಪಟ್ಟಿದ್ದರೂ ಅವರ ಖಾತೆಗಳಿಗೆ ಹಣ ಜಮೆಯಾಗುತ್ತಿರುವುದು ಹಾಗೂ ಕೆಲವು ಅನರ್ಹರು ಯೋಜನೆಗಳ ಪ್ರಯೋಜನ ಪಡೆಯುತ್ತಿರುವುದು ಪರಿಷ್ಕರಣೆ ವೇಳೆ ಪತ್ತೆಯಾಗಿದೆ ಎಂದು ಹೇಳಿದರು.

ಗೃಹಜ್ಯೋತಿ ಯೋಜನೆಯ ಕುರಿತು ಮಾತನಾಡಿದ ರಾಯರೆಡ್ಡಿ, ರಾಜ್ಯದಲ್ಲಿ ಸುಮಾರು 1 ಕೋಟಿ 68 ಲಕ್ಷ ಕುಟುಂಬಗಳಿಗೆ ಉಚಿತ ವಿದ್ಯುತ್ ಸೌಲಭ್ಯ ನೀಡಲಾಗುತ್ತಿದೆ. ಆದರೆ ಕೆಲವು ಸರ್ಕಾರಿ ನೌಕರರ ಮನೆಗಳಿಗೂ ಈ ಯೋಜನೆಯ ಲಾಭ ದೊರೆಯುತ್ತಿರುವುದು ಗಮನಕ್ಕೆ ಬಂದಿರುವುದರಿಂದ, ಅನರ್ಹ ಫಲಾನುಭವಿಗಳನ್ನು ಗುರುತಿಸಿ ಯೋಜನೆಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಪರಿಷ್ಕರಣೆ ಅಗತ್ಯವಾಗಿದೆ ಎಂದು ತಿಳಿಸಿದರು.

ಗ್ಯಾರಂಟಿ ಯೋಜನೆಗಳ ಮುಂದುವರಿಕೆಗೆ ಕಾಂಗ್ರೆಸ್ ಸರ್ಕಾರ ಬದ್ಧವಾಗಿದೆ ಎಂದು ಸ್ಪಷ್ಟಪಡಿಸಿದ ಅವರು, ಈ ಯೋಜನೆಗಳಿಗೆ ಪ್ರತಿವರ್ಷ ಸುಮಾರು ₹52 ಸಾವಿರ ಕೋಟಿ ವೆಚ್ಚವಾಗುತ್ತಿದ್ದು, ಅದನ್ನು ಸರ್ಕಾರ ಭರಿಸುತ್ತಿದೆ ಎಂದರು. “ಯಾರೇ ಮುಖ್ಯಮಂತ್ರಿ ಆದರೂ ಗ್ಯಾರಂಟಿ ಯೋಜನೆಗಳು ಸ್ಥಗಿತಗೊಳ್ಳುವುದಿಲ್ಲ. ಇದು ಯಾವುದೇ ವ್ಯಕ್ತಿಯ ವೈಯಕ್ತಿಕ ಕಾರ್ಯಕ್ರಮವಲ್ಲ, ಕಾಂಗ್ರೆಸ್ ಪಕ್ಷದ ಬದ್ಧತೆಯ ಕಾರ್ಯಕ್ರಮವಾಗಿದೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೂ ಈ ಯೋಜನೆಗಳನ್ನು ಮುಂದುವರಿಸುವ ಬದ್ಧತೆ ಇದೆ” ಎಂದು ರಾಯರೆಡ್ಡಿ ಹೇಳಿದರು.

Prajavikshane

Chandru R Bhanapaur

Leave a Reply

error: Content is protected !!