BREAKING NEWS : ಫಲವತ್ತಾದ ಕೃಷಿ ಭೂಮಿಯಲ್ಲಿ ವಿದ್ಯುತ್ ಯೋಜನೆಗಳಿಗೆ ಬ್ರೇಕ್ ಹಾಕಿ..! : ಶಾಸಕ ಬಸವರಾಜ ರಾಯರಡ್ಡಿ ಹೇಳಿಕೆ!

ಪ್ರಜಾವೀಕ್ಷಣೆ ಡಿಜಿಟಲ್ ಸುದ್ದಿ :
ಸೋಲಾರ್, ವಿಂಡ್ ಮಿಲ್‌ಗಳಿಗೆ ಸರ್ಕಾರಿ ಭೂಮಿಯನ್ನೇ ಬಳಸಿ : ರೈತರು ಜಮೀನು ಮಾರಾಟ ಮಾಡಬೇಡಿ – ಶಾಸಕ ಬಸವರಾಜ ರಾಯರಡ್ಡಿ!
ಕೊಪ್ಪಳ, ಜುಲೈ 06 : ರೈತರ ಫಲವತ್ತಾದ ಕೃಷಿ ಭೂಮಿಯನ್ನು ಸೋಲಾರ್ ಪ್ಯಾನಲ್, ವಿಂಡ್ ಮಿಲ್ ಹಾಗೂ ಇತರೆ ವಿದ್ಯುತ್ ಉತ್ಪಾದನಾ ಯೋಜನೆಗಳಿಗೆ ಬಳಸುವುದನ್ನು ನಿಲ್ಲಿಸಿ, ಇಂತಹ ಯೋಜನೆಗಳನ್ನು ಕೇವಲ ಸರ್ಕಾರಿ ಭೂಮಿಯಲ್ಲಿ ಮಾತ್ರ ಅನುಷ್ಠಾನಗೊಳಿಸುವಂತೆ ಕೇಂದ್ರ ಸರ್ಕಾರ ಅಗತ್ಯ ಕಾನೂನು ತಿದ್ದುಪಡಿ ತರಬೇಕೆಂದು ಯಲಬುರ್ಗಾ ಕ್ಷೇತ್ರದ ಶಾಸಕ ಹಾಗೂ ಮಾಜಿ ಸಚಿವ ಬಸವರಾಜ ರಾಯರಡ್ಡಿ ಆಗ್ರಹಿಸಿದ್ದಾರೆ.

ಪತ್ರಿಕಾ ಪ್ರಕಟಣೆಯಲ್ಲಿ ಅವರು, ಯಲಬುರ್ಗಾ ವಿಧಾನಸಭಾ ಕ್ಷೇತ್ರವು ಕೃಷಿ ಆಧಾರಿತ ಪ್ರದೇಶವಾಗಿದ್ದು, ಭವಿಷ್ಯದಲ್ಲಿ ನೀರಾವರಿ ಸೌಲಭ್ಯ ವಿಸ್ತರಿಸುವ ಸಾಧ್ಯತೆಗಳಿರುವುದರಿಂದ ಫಲವತ್ತಾದ ಜಮೀನುಗಳನ್ನು ವಿದ್ಯುತ್ ಯೋಜನೆಗಳಿಗೆ ಬಳಸುವುದು ರೈತರ ಹಿತಕ್ಕೆ ವಿರುದ್ಧವಾಗಿದೆ ಎಂದು ತಿಳಿಸಿದ್ದಾರೆ.
ಕಳೆದ ಐದು-ಆರು ವರ್ಷಗಳಿಂದ ಯಲಬುರ್ಗಾ ಸೇರಿದಂತೆ ರೋಣ, ಕುಷ್ಟಗಿ, ಗದಗ ಹಾಗೂ ಹುನಗುಂದ ಭಾಗಗಳಲ್ಲಿ ಕೇಂದ್ರ ಸರ್ಕಾರದ ಅನುಮತಿಯೊಂದಿಗೆ ಸೋಲಾರ್ ಹಾಗೂ ವಿಂಡ್ ಮಿಲ್ ಯೋಜನೆಗಳು ವೇಗವಾಗಿ ಜಾರಿಯಾಗುತ್ತಿವೆ ಎಂದು ಅವರು ಹೇಳಿದ್ದಾರೆ.

ರಾಜ್ಯ ಸರ್ಕಾರದ ಪಾತ್ರವಿಲ್ಲ…!!
ಭೂಸ್ವಾಧೀನ, ಖಾಸಗಿ ಕಂಪನಿಗಳಿಗೆ ಅನುಮತಿ ಹಾಗೂ ಯೋಜನೆಗಳ ಕಾನೂನು ರೂಪಿಸುವ ಅಧಿಕಾರ ಕೇಂದ್ರ ಸರ್ಕಾರದ ವ್ಯಾಪ್ತಿಯಲ್ಲಿದ್ದು, ಈ ವಿಷಯದಲ್ಲಿ ರಾಜ್ಯ ಸರ್ಕಾರದ ಪಾತ್ರ ಸೀಮಿತವಾಗಿದೆ ಎಂದು ರಾಯರಡ್ಡಿ ಸ್ಪಷ್ಟಪಡಿಸಿದ್ದಾರೆ.

ರೈತರಿಗೆ ಮನವಿ…!

ಕಂಪನಿಗಳ ಮಧ್ಯವರ್ತಿಗಳ ಆಮಿಷಗಳಿಗೆ ಒಳಗಾಗದೆ ತಮ್ಮ ಕೃಷಿ ಭೂಮಿಯನ್ನು ಯಾವುದೇ ಕಾರಣಕ್ಕೂ ಮಾರಾಟ ಮಾಡಬಾರದು. ಭೂಮಿ ನೀಡುವಂತೆ ಒತ್ತಡ ಬಂದರೂ ರೈತರು ತಮ್ಮ ಹಕ್ಕುಗಳಿಗಾಗಿ ದೃಢವಾಗಿ ನಿಲ್ಲಬೇಕು ಎಂದು ಅವರು ಕರೆ ನೀಡಿದ್ದಾರೆ.

ಸರ್ಕಾರಕ್ಕೆ ಪತ್ರ ಬರೆಯುವ ಭರವಸೆ…!
ರೈತರ ಹಿತರಕ್ಷಣೆಯ ದೃಷ್ಟಿಯಿಂದ ಕೃಷಿ ಭೂಮಿಯಲ್ಲಿ ಇಂತಹ ವಿದ್ಯುತ್ ಯೋಜನೆಗಳನ್ನು ಸ್ಥಗಿತಗೊಳಿಸಿ, ಸರ್ಕಾರಿ ಭೂಮಿಯಲ್ಲಿ ಮಾತ್ರ ವಿದ್ಯುತ್ ಉತ್ಪಾದನಾ ಯೋಜನೆಗಳನ್ನು ಅನುಷ್ಠಾನಗೊಳಿಸುವಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರುವಂತೆ ರಾಜ್ಯ ಸರ್ಕಾರಕ್ಕೆ ಪತ್ರ ಬರೆಯುವುದಾಗಿ ಶಾಸಕ ಬಸವರಾಜ ರಾಯರಡ್ಡಿ ತಿಳಿಸಿದ್ದಾರೆ.
