ಕೊಪ್ಪಳ, ಜು. 30: ಬಣಜಿಗ ಸಮುದಾಯವನ್ನು 2ಎ ಮೀಸಲಾತಿ ವ್ಯಾಪ್ತಿಗೆ ಸೇರಿಸುವಂತೆ ಆಗ್ರಹಿಸಿ ಜಿಲ್ಲಾ ಬಣಜಿಗ ಸಮಾಜ ಘಟಕದ ಪದಾಧಿಕಾರಿಗಳು ಗುರುವಾರ ಜಿಲ್ಲಾಧಿಕಾರಿ ಸುರೇಶ್ ಬಿ. ಇಟ್ನಾಳ್ ಅವರಿಗೆ ಮನವಿ ಸಲ್ಲಿಸಿದರು.
ಬಳಿಕ ಮಾತನಾಡಿದ ಜಿಲ್ಲಾ ಬಣಜಿಗ ಸಮಾಜ ಘಟಕದ ಅಧ್ಯಕ್ಷ ವೀರೇಶ್ ಬಂಗಾರಶೆಟ್ರು, ಬಣಜಿಗ ಸಮುದಾಯಕ್ಕೆ ಸಂಬಂಧಿಸಿದ ಪ್ರಕರಣಗಳಲ್ಲಿ ಉಚ್ಚ ನ್ಯಾಯಾಲಯದ ಏಕಸದಸ್ಯ ಪೀಠವು ಮಹತ್ವದ ಆದೇಶ ನೀಡಿದ್ದು, ಉದ್ಯೋಗಕ್ಕಾಗಿ ಪ್ರವರ್ಗ ‘ಡಿ’ ಹಾಗೂ ಶಿಕ್ಷಣಕ್ಕಾಗಿ ಪ್ರವರ್ಗ ‘ಬಿ’ ಅಡಿಯಲ್ಲಿ ವರ್ಗೀಕರಿಸಿರುವುದು ಸಂವಿಧಾನದ ಪರಿಚ್ಛೇದ 16(4)ರ ಆಶಯಕ್ಕೆ ವಿರುದ್ಧವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದೆ ಎಂದು ತಿಳಿಸಿದರು.
ಆದ್ದರಿಂದ ಸಮುದಾಯವನ್ನು ಪ್ರವರ್ಗ ‘ಡಿ’ ಬದಲಿಗೆ ಪ್ರವರ್ಗ ‘ಬಿ’ ಅಡಿಯಲ್ಲಿ ಮರುವರ್ಗೀಕರಿಸುವಂತೆ ನ್ಯಾಯಾಲಯ ನಿರ್ದೇಶನ ನೀಡಿರುವ ಹಿನ್ನೆಲೆಯಲ್ಲಿ, ಅದರಂತೆ ಸರ್ಕಾರ ಅಗತ್ಯ ಕ್ರಮ ಕೈಗೊಂಡು ಬಣಜಿಗ ಸಮುದಾಯಕ್ಕೆ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿದರು.
ಬಣಜಿಗ ಸಮುದಾಯವು ಶೈಕ್ಷಣಿಕ ಹಾಗೂ ಆರ್ಥಿಕವಾಗಿ ಹಿಂದುಳಿದಿರುವುದರಿಂದ ಸರ್ಕಾರಿ ಉದ್ಯೋಗಗಳಲ್ಲಿ ಸೂಕ್ತ ಅವಕಾಶಗಳಿಂದ ವಂಚಿತವಾಗುತ್ತಿದೆ. ಹೀಗಾಗಿ ನ್ಯಾಯಾಲಯದ ಆದೇಶದಂತೆ ಸಮುದಾಯಕ್ಕೆ ಅನುಕೂಲವಾಗುವ ರೀತಿಯಲ್ಲಿ ವರ್ಗೀಕರಣ ಪರಿಷ್ಕರಿಸಿ, 2ಎ ಮೀಸಲಾತಿ ಕಲ್ಪಿಸಲು ಸಂಬಂಧಿಸಿದ ಇಲಾಖೆಗೆ ಅಗತ್ಯ ನಿರ್ದೇಶನ ನೀಡಬೇಕು ಎಂದು ಮನವಿಯಲ್ಲಿ ಕೋರಲಾಗಿದೆ.
ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿ ಸುರೇಶ್ ಬಿ. ಇಟ್ನಾಳ್, ಮನವಿಯನ್ನು ಸಂಬಂಧಿತ ಸಚಿವಾಲಯಕ್ಕೆ ಸಲ್ಲಿಸಿ ಅಗತ್ಯ ಕ್ರಮಕ್ಕಾಗಿ ರವಾನಿಸಲಾಗುವುದು ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಸಿದ್ದರಾಮೇಶ್ವರ, ರಾಜ್ಯ ಉಪಾಧ್ಯಕ್ಷ ಅಂದಪ್ಪ ಜವಳಿ, ಗೌರವಾಧ್ಯಕ್ಷ ಸಂಗಣ್ಣ ಟೆಂಗಿನಕಾಯಿ, ಉಪಾಧ್ಯಕ್ಷರಾದ ಮಲ್ಲಣ್ಣ ಪಾವಲಿ, ಶರಣಪ್ಪ ಬಳಗಾನೂರ, ಶರಣಪ್ಪ ಗದ್ದಿ, ರಾಚಪ್ಪ ಅಂಗಡಿ, ಪ್ರಧಾನ ಕಾರ್ಯದರ್ಶಿ ಬಸವರಾಜ ಪಗಡದಿನ್ನಿ, ಕಾರ್ಯದರ್ಶಿ ಬಸವರಾಜ ಜೋಳದ, ತಾಲ್ಲೂಕು ಅಧ್ಯಕ್ಷ ಶಾಂತಪ್ಪ ಸೋಮಲಾಪುರ ಸೇರಿದಂತೆ ಸಮಾಜದ ವಿವಿಧ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.