You are currently viewing PV NEWS | ಕುಕನೂರು | ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೆ ಕ್ರೀಡೆ ಅಗತ್ಯ: ಬಿಇಓ ಶ್ರೀನಿವಾಸ್ ಬನ್ನಿಗೋಳ 

PV NEWS | ಕುಕನೂರು | ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೆ ಕ್ರೀಡೆ ಅಗತ್ಯ: ಬಿಇಓ ಶ್ರೀನಿವಾಸ್ ಬನ್ನಿಗೋಳ 

PV NEWS | ಕುಕನೂರು | ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೆ ಕ್ರೀಡೆ ಅಗತ್ಯ: ಬಿಇಓ ಶ್ರೀನಿವಾಸ್ ಬನ್ನಿಗೋಳ 

 PV NEWS ಕನ್ನಡ 24×7

ಕುಕನೂರು | ಆ. 7 : ವಿದ್ಯಾರ್ಥಿಗಳ ಸಮಗ್ರ ವ್ಯಕ್ತಿತ್ವ ವಿಕಸನಕ್ಕೆ ಕ್ರೀಡೆಗಳು ಅತ್ಯಂತ ಅವಶ್ಯಕವಾಗಿದ್ದು, ಪಠ್ಯಾಭ್ಯಾಸದ ಜೊತೆಗೆ ಕ್ರೀಡಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುವುದರಿಂದ ದೈಹಿಕ ಸಾಮರ್ಥ್ಯ, ಮಾನಸಿಕ ದೃಢತೆ, ಆತ್ಮವಿಶ್ವಾಸ ಹಾಗೂ ನಾಯಕತ್ವದ ಗುಣಗಳು ಬೆಳೆಯುತ್ತವೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀನಿವಾಸ್  ಬನ್ನಿಗೋಳ ಹೇಳಿದರು.

ಜಿಲ್ಲಾ ಪಂಚಾಯತ್ ಕೊಪ್ಪಳ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ತಾಲೂಕು ಪಂಚಾಯತ್ ಕುಕನೂರು, ಕ್ಷೇತ್ರ ಶಿಕ್ಷಣಾಧಿಕಾರಿಗಳ ಹಾಗೂ ಕ್ಷೇತ್ರ ಸಮನ್ವಯಾಧಿಕಾರಿಗಳ ಕಾರ್ಯಾಲಯ ಯಲಬುರ್ಗಾ ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ 2026–27ನೇ ಸಾಲಿನ ಕುಕನೂರು ಪೂರ್ವ ವಲಯ ಮಟ್ಟದ ಪ್ರೌಢ ಶಾಲೆಗಳ ಕ್ರೀಡಾಕೂಟವನ್ನು ಶುಕ್ರವಾರ ಬಳಗೇರಿಯ ಶ್ರೀಮತಿ ಶಿವಮ್ಮ ಗಂ. ಬಸವರಡ್ಡಿ ರಡ್ಡೇರ ಸರ್ಕಾರಿ ಪ್ರೌಢ ಶಾಲೆ ಆವರಣದಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು.

ಸೋಲು–ಗೆಲುವನ್ನು ಸಮಾನ ಮನೋಭಾವದಿಂದ ಸ್ವೀಕರಿಸುವ ಗುಣವನ್ನು ಕ್ರೀಡೆಗಳು ಬೆಳೆಸುತ್ತವೆ. ಗ್ರಾಮೀಣ ಭಾಗದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಜಿಲ್ಲಾ, ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡಲು ಇಂತಹ ವಲಯ ಮಟ್ಟದ ಕ್ರೀಡಾಕೂಟಗಳು ಭದ್ರ ಬುನಾದಿಯಾಗುತ್ತವೆ. ವಿದ್ಯಾರ್ಥಿಗಳು ಕ್ರೀಡಾಸ್ಪೂರ್ತಿಯಿಂದ ಸ್ಪರ್ಧೆಗಳಲ್ಲಿ ಭಾಗವಹಿಸಿ ತಮ್ಮ ಶಾಲೆ ಹಾಗೂ ವಲಯದ ಕೀರ್ತಿಯನ್ನು ಹೆಚ್ಚಿಸಬೇಕು ಎಂದು ಅವರು ಕರೆ ನೀಡಿದರು.

ತಾಲೂಕು ಪ್ರಭಾರಿ ದೈಹಿಕ ಶಿಕ್ಷಣಾಧಿಕಾರಿ ಶರಣಪ್ಪ ವೀರಾಪುರ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಕ್ರೀಡಾ ಮನೋಭಾವ, ಶಿಸ್ತು, ಸಮಯಪ್ರಜ್ಞೆ, ನಾಯಕತ್ವ ಹಾಗೂ ತಂಡದ ಸಹಕಾರದ ಗುಣಗಳನ್ನು ಬೆಳೆಸುವ ಉದ್ದೇಶದಿಂದ ಕ್ರೀಡಾಕೂಟ ಆಯೋಜಿಸಲಾಗಿದೆ. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾಗುವ ವಿದ್ಯಾರ್ಥಿಗಳು ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸುವ ಅರ್ಹತೆ ಪಡೆಯಲಿದ್ದಾರೆ ಎಂದು ತಿಳಿಸಿದರು.

ಕ್ರೀಡಾಕೂಟದಲ್ಲಿ ಕುಕನೂರು ಪೂರ್ವ ವಲಯದ ವಿವಿಧ ಪ್ರೌಢ ಶಾಲೆಗಳ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಉತ್ಸಾಹದಿಂದ ಪಾಲ್ಗೊಂಡು ಅಥ್ಲೆಟಿಕ್ಸ್ ಸೇರಿದಂತೆ ವಿವಿಧ ಸ್ಪರ್ಧೆಗಳಲ್ಲಿ ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಿದರು.

ಹಳೆ ವಿದ್ಯಾರ್ಥಿಗಳ ಸೇವಾಭಾವಕ್ಕೆ ಮೆಚ್ಚುಗೆ..!!

ಈ ಕ್ರೀಡಾಕೂಟದ ವಿಶೇಷವೆಂದರೆ, ಆಗಮಿಸಿದ್ದ ಅತಿಥಿಗಳು, ಅಧಿಕಾರಿಗಳು, ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ಏರ್ಪಡಿಸಿದ್ದ ಸಂಪೂರ್ಣ ಊಟೋಪಚಾರದ ವೆಚ್ಚವನ್ನು ಇದೇ ಶಾಲೆಯ 2008–09ನೇ ಸಾಲಿನ ಹಳೆ ವಿದ್ಯಾರ್ಥಿಗಳ ಬಳಗ ಭರಿಸಿತು. ತಮ್ಮ ಶಾಲೆಯ ಮೇಲಿನ ಅಭಿಮಾನ ಹಾಗೂ ಸಾಮಾಜಿಕ ಜವಾಬ್ದಾರಿಯ ಸಂಕೇತವಾಗಿ ಹಳೆ ವಿದ್ಯಾರ್ಥಿಗಳಾದ ಜೆಸ್ಕಾಂ ನೌಕರರಾದ ಬಳ್ಳೇಶ್ ಬಾಳಕೊಪ್ಪ, ಮಲ್ಲೇಶ್ ಮಳೆಕೊಪ್ಪ, ಶಿವು ಅರಕೆರೆ, ಬಾಲಚಂದ್ರ ಟೈಂಗುಂಟೆ, ಹನುಮಂತ ಉಪ್ಪಾರ, ರವಿ ಒಗ್ರಿ, ವಿಜಯಕುಮಾರ್ ಬೂದುಗುಂಪ, ಮಂಜುನಾಥ್ ಬೂದುಗುಂಪ, ಕುಮಾರಸ್ವಾಮಿ ಕೋಮರ್, ಮಂಜುನಾಥ್ ಇಟಗಿ, ಬಸವರಾಜ್ ತವರಮನಿ, ಮಹಾಂತೇಶ್ ವಂಬಳ, ಜಗದೀಶ್ ರಾಜೂರು, ಕಳಕಪ್ಪ ಕೋಮರ್ ಹಾಗೂ ಮಂಜುನಾಥ್ ಹೂಗಾರ್ ಇವರುಗಳು ಕೈಗೊಂಡ ಈ ಸೇವಾ ಕಾರ್ಯಕ್ಕೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಎಲ್ಲರೂ ಶ್ಲಾಘನೆ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಎಸ್‌ಡಿಎಂಸಿ ಅಧ್ಯಕ್ಷ ಶರಣಪ್ಪ ಬೂದು, ಮುಖ್ಯೋಪಾಧ್ಯಾಯಿನಿ ಅಕ್ಕಮಹಾದೇವಿ ಜಿ.ಎನ್. ಮಠ, ಬಿಆರ್‌ಸಿ ಶರಣಗೌಡ ಪೊಲೀಸ್ ಪಾಟೀಲ್,  ಮಹೇಶ್ ಶಬರಾದ, ಬಸಪ್ಪ ತಳವಾರ, ಶರಣಪ್ಪ ಚಾಕ್ರಿ, ಬಸವರಾಜ್ ಮೇಟಿ, ಸುರೇಶ್ ಅಬಿಗೇರಿ, ಶಿವಾನಂದ, ಉಮೇಶ್ ಕಂಬಳಿ, ಕಳಕರೆಡ್ಡಿ ರೆಡ್ಡರ, ಶಿಕ್ಷಣ ಇಲಾಖೆಯ ಅಧಿಕಾರಿಗಳು, ಶಿಕ್ಷಕರು, ಪೋಷಕರು, ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಸದಸ್ಯರು, ಶಾಲಾ ಸಿಬ್ಬಂದಿ ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

— PV NEWS ಕನ್ನಡ 24×7

(ಇದು ಪ್ರಜೆಗಳ ಪರ ಹದ್ದಿನ ಕಣ್ಣು)

Prajavikshane

Chandru R Bhanapaur

Leave a Reply

error: Content is protected !!