ಕೊಪ್ಪಳ, ಆ.28: ಜಿಲ್ಲೆಯಲ್ಲಿ ಮಳೆ ಕೊರತೆ ಹಾಗೂ ಬೆಳೆಹಾನಿ ತೀವ್ರವಾಗಿದ್ದರೂ ಕೊಪ್ಪಳ, ಯಲಬುರ್ಗಾ ಮತ್ತು ಕುಷ್ಟಗಿ ತಾಲೂಕುಗಳನ್ನು ಬರಪೀಡಿತ ಪಟ್ಟಿಯಿಂದ ಕೈಬಿಟ್ಟಿರುವ ರಾಜ್ಯ ಸರ್ಕಾರದ ಕ್ರಮ ಅವೈಜ್ಞಾನಿಕ ಹಾಗೂ ರೈತ ವಿರೋಧಿಯಾಗಿದೆ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ನವೀನ್ ಕುಮಾರ್ ಗುಳಗಣ್ಣವರ ಆರೋಪಿಸಿದ್ದಾರೆ.
ಈ ಕುರಿತು ಶುಕ್ರವಾರ ಪತ್ರಿಕಾ ಹೇಳಿಕೆ ನೀಡಿರುವ ಅವರು, ಆ.27ರಂದು ರಾಜ್ಯ ಸರ್ಕಾರ ಹೊರಡಿಸಿರುವ ಆದೇಶದಂತೆ ರಾಜ್ಯದ 101 ತಾಲೂಕುಗಳನ್ನು ಬರಪೀಡಿತವೆಂದು ಘೋಷಿಸಲಾಗಿದೆ. ಕೊಪ್ಪಳ ಜಿಲ್ಲೆಯ ಗಂಗಾವತಿ, ಕುಕನೂರು ಹಾಗೂ ಕನಕಗಿರಿ ತಾಲೂಕುಗಳನ್ನು ತೀವ್ರ ಬರಪೀಡಿತವೆಂದು ಪರಿಗಣಿಸಿರುವುದು ಸ್ವಾಗತಾರ್ಹ. ಆದರೆ ಮಳೆ ಕೊರತೆ ಎದುರಿಸುತ್ತಿರುವ ಕೊಪ್ಪಳ, ಯಲಬುರ್ಗಾ ಹಾಗೂ ಕುಷ್ಟಗಿ ತಾಲೂಕುಗಳನ್ನು ಪಟ್ಟಿಯಿಂದ ಹೊರಗಿಟ್ಟಿರುವುದು ತಾರತಮ್ಯಪೂರ್ಣ ನಿರ್ಧಾರವಾಗಿದೆ ಎಂದು ತಿಳಿಸಿದ್ದಾರೆ.
ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಜುಲೈ 13ರವರೆಗಿನ ಅಂಕಿಅಂಶಗಳನ್ನು ಉಲ್ಲೇಖಿಸಿರುವ ಅವರು, ಕೊಪ್ಪಳ ತಾಲೂಕಿನಲ್ಲಿ ಶೇ.46, ಯಲಬುರ್ಗಾದಲ್ಲಿ ಶೇ.38 ಹಾಗೂ ಕುಷ್ಟಗಿಯಲ್ಲಿ ಶೇ.32ರಷ್ಟು ಮಳೆ ಕೊರತೆ ದಾಖಲಾಗಿದೆ ಎಂದು ಹೇಳಿದ್ದಾರೆ.
ಆಗಸ್ಟ್ ಮಧ್ಯಭಾಗದಲ್ಲಿಯೂ ಜಿಲ್ಲೆಯಲ್ಲಿ ಒಟ್ಟಾರೆ ಮಳೆ ಕೊರತೆ ಸುಮಾರು ಶೇ.37ರಷ್ಟಿದೆ. ಮಣ್ಣಿನ ತೇವಾಂಶ ಕುಸಿತ, ಬಿತ್ತನೆ ವಿಫಲತೆ ಹಾಗೂ ಒಣಗುತ್ತಿರುವ ಬೆಳೆಗಳ ಸ್ಥಿತಿಯನ್ನು ಸಚಿವರು ಮತ್ತು ಅಧಿಕಾರಿಗಳು ಪರಿಶೀಲಿಸಿದ್ದರೂ, ಮೂರು ತಾಲೂಕುಗಳನ್ನು ಬರಪೀಡಿತ ಪಟ್ಟಿಯಿಂದ ಹೊರಗಿಟ್ಟಿರುವುದು ಸಮೀಕ್ಷೆಯ ವಿಶ್ವಾಸಾರ್ಹತೆಯ ಬಗ್ಗೆ ಪ್ರಶ್ನೆ ಮೂಡಿಸಿದೆ ಎಂದು ಅವರು ದೂರಿದ್ದಾರೆ.
ಗ್ರಾಮವಾರು ಸಮೀಕ್ಷೆಗೆ ಒತ್ತಾಯ
ಬರ ಪರಿಸ್ಥಿತಿ ನಿರ್ಧರಿಸುವಾಗ ಕೇವಲ ಕಚೇರಿ ಅಂಕಿಅಂಶಗಳನ್ನು ಆಧರಿಸದೆ ಗ್ರಾಮವಾರು ಮಳೆ ಪ್ರಮಾಣ, ಸತತ ಒಣ ಅವಧಿ, ಮಣ್ಣಿನ ತೇವಾಂಶ, ಬಿತ್ತನೆ ಪ್ರಮಾಣ ಮತ್ತು ವಾಸ್ತವಿಕ ಬೆಳೆಹಾನಿಯನ್ನು ಪರಿಗಣಿಸಬೇಕು. ರೈತರ ಹೊಲಗಳಲ್ಲಿನ ನೈಜ ಪರಿಸ್ಥಿತಿಯನ್ನು ಆಧರಿಸಿ ವೈಜ್ಞಾನಿಕ ಮರುಸಮೀಕ್ಷೆ ನಡೆಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಸರ್ಕಾರದ ಆದೇಶದಲ್ಲಿಯೇ ಬರ ಪರಿಸ್ಥಿತಿಯನ್ನು ವಾರಕ್ಕೊಮ್ಮೆ ಮರುಪರಿಶೀಲಿಸಿ, ಅರ್ಹವಾಗುವ ಹೆಚ್ಚುವರಿ ತಾಲೂಕುಗಳನ್ನು ನಂತರ ಅಧಿಸೂಚಿಸುವ ಅವಕಾಶವಿದೆ. ಹೀಗಾಗಿ ಕೊಪ್ಪಳ, ಯಲಬುರ್ಗಾ ಮತ್ತು ಕುಷ್ಟಗಿ ತಾಲೂಕುಗಳಲ್ಲಿ ತಕ್ಷಣ ಮರುಸಮೀಕ್ಷೆ ನಡೆಸಿ, ಅವುಗಳನ್ನೂ ತೀವ್ರ ಬರಪೀಡಿತ ತಾಲೂಕುಗಳ ಪಟ್ಟಿಗೆ ಸೇರಿಸಬೇಕು ಎಂದು ಆಗ್ರಹಿಸಿದ್ದಾರೆ.
ಬೆಳೆಹಾನಿಗೆ ವೈಜ್ಞಾನಿಕ ಜಂಟಿ ಸಮೀಕ್ಷೆ ನಡೆಸಿ ರೈತರಿಗೆ ಪರಿಹಾರ ನೀಡಬೇಕು. ಕುಡಿಯುವ ನೀರು, ಜಾನುವಾರುಗಳಿಗೆ ಮೇವು ಹಾಗೂ ಉದ್ಯೋಗದ ತುರ್ತು ವ್ಯವಸ್ಥೆ ಕಲ್ಪಿಸಬೇಕು ಎಂದು ಅವರು ಹೇಳಿದ್ದಾರೆ.
ಸರ್ಕಾರ ಕೂಡಲೇ ತನ್ನ ನಿರ್ಧಾರವನ್ನು ಪರಿಷ್ಕರಿಸದಿದ್ದರೆ ರೈತರೊಂದಿಗೆ ಸೇರಿ ಪ್ರಜಾಸತ್ತಾತ್ಮಕ ಹೋರಾಟ ನಡೆಸುವುದು ಅನಿವಾರ್ಯವಾಗಲಿದೆ ಎಂದು ನವೀನ್ ಕುಮಾರ್ ಗುಳಗಣ್ಣವರ ಎಚ್ಚರಿಸಿದ್ದಾರೆ.