PV NEWS : ಮೋದಿ ಅವರ 25 ವರ್ಷಗಳ ಸಾರ್ವಜನಿಕ ಸೇವೆ: ಕುಕನೂರು–ಯಲಬುರ್ಗಾದಲ್ಲಿ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರ
PV NEWS ಕನ್ನಡ 24×7|
ಕುಕನೂರು/ಯಲಬುರ್ಗಾ, ಸೆ. 01 : ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸರ್ಕಾರದ ಮುಖ್ಯಸ್ಥರಾಗಿ 25 ವರ್ಷಗಳ ಸಾರ್ವಜನಿಕ ಸೇವೆಯ ಮೈಲುಗಲ್ಲು ತಲುಪುತ್ತಿರುವ ಹಿನ್ನೆಲೆಯಲ್ಲಿ ಜನಸೇವೆಯ ಉದ್ದೇಶದಿಂದ ಕುಕನೂರು ಹಾಗೂ ಯಲಬುರ್ಗಾ ತಾಲೂಕುಗಳಲ್ಲಿ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರಗಳನ್ನು ಆಯೋಜಿಸಲಾಗಿದೆ ಎಂದು ಬಿಜೆಪಿ ಕೊಪ್ಪಳ ಜಿಲ್ಲಾ ಅಧ್ಯಕ್ಷ ನವೀನಕುಮಾರ್ ಈ. ಗುಳಗಣ್ಣವರ ತಿಳಿಸಿದ್ದಾರೆ.
ಬೆಂಗಳೂರು ಸಪ್ತಗಿರಿ ಆಸ್ಪತ್ರೆಯ ತಜ್ಞ ವೈದ್ಯರ ಸಹಕಾರದೊಂದಿಗೆ ನಡೆಯಲಿರುವ ಈ ಆರೋಗ್ಯ ಶಿಬಿರಗಳಲ್ಲಿ ಹೃದಯರೋಗ, ನರರೋಗ, ಮೂತ್ರಪಿಂಡ ಸಂಬಂಧಿತ ಕಾಯಿಲೆಗಳು, ಕ್ಯಾನ್ಸರ್, ಸ್ತ್ರೀರೋಗ, ಮೂಳೆ–ಕೀಲು ಸಮಸ್ಯೆಗಳು ಸೇರಿದಂತೆ ವಿವಿಧ ಆರೋಗ್ಯ ಸಮಸ್ಯೆಗಳ ಕುರಿತು ಉಚಿತ ತಪಾಸಣೆ ಹಾಗೂ ವೈದ್ಯಕೀಯ ಸಲಹೆ ನೀಡಲಾಗುತ್ತದೆ. ಇದರೊಂದಿಗೆ ರಕ್ತದಾನ ಶಿಬಿರವನ್ನೂ ಆಯೋಜಿಸಲಾಗಿದೆ.
ಕುಕನೂರು ತಾಲೂಕಿನಲ್ಲಿ ಅಕ್ಟೋಬರ್ 3ರಂದು ಶಿಬಿರ
ಕುಕನೂರು ತಾಲೂಕಿನ ಶಿಬಿರವು ಅಕ್ಟೋಬರ್ 3, 2026ರ ಶನಿವಾರ ಬೆಳಿಗ್ಗೆ 10ರಿಂದ ಸಂಜೆ 5ರವರೆಗೆ ಶ್ರೀ ಅನ್ನದಾನೇಶ್ವರ ಶಾಖಾಮಠ, ಕುಕನೂರು ಇಲ್ಲಿ ನಡೆಯಲಿದೆ.
ಯಲಬುರ್ಗಾ ತಾಲೂಕಿನ ಬೇವೂರಿನಲ್ಲಿ ಅಕ್ಟೋಬರ್ 4ರಂದು
ಯಲಬುರ್ಗಾ ತಾಲೂಕಿನ ಬೇವೂರು ಗ್ರಾಮದಲ್ಲಿ ಅಕ್ಟೋಬರ್ 4, 2026ರ ಭಾನುವಾರ ಬೆಳಿಗ್ಗೆ 10ರಿಂದ ಸಂಜೆ 5ರವರೆಗೆ ಶಿಬಿರ ನಡೆಯಲಿದೆ. ಶ್ರೀ ಕೊಂಡದ ಮಲ್ಲೇಶ್ವರ ದೇವಸ್ಥಾನದ ಹತ್ತಿರದ ಬುದ್ಧ–ಬಸವ–ಅಂಬೇಡ್ಕರ್ ಭವನ ಶಿಬಿರದ ಸ್ಥಳವಾಗಿದೆ.
ಗ್ರಾಮೀಣ ಪ್ರದೇಶದ ಜನರಿಗೆ ತಜ್ಞ ವೈದ್ಯಕೀಯ ಸೇವೆಗಳನ್ನು ಅವರ ಸಮೀಪದಲ್ಲಿಯೇ ಒದಗಿಸುವ ಉದ್ದೇಶದಿಂದ ಶಿಬಿರ ಆಯೋಜಿಸಲಾಗಿದೆ. ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವವರು, ಹಿರಿಯ ನಾಗರಿಕರು, ಮಹಿಳೆಯರು ಸೇರಿದಂತೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮನವಿ ಮಾಡಲಾಗಿದೆ.
ಶಿಬಿರಕ್ಕೆ ಆಗಮಿಸುವವರು ತಮ್ಮ ಹಿಂದಿನ ವೈದ್ಯಕೀಯ ವರದಿಗಳು ಹಾಗೂ ಪ್ರಸ್ತುತ ಸೇವಿಸುತ್ತಿರುವ ಔಷಧಿಗಳ ವಿವರಗಳನ್ನು ತಮ್ಮೊಂದಿಗೆ ತರಬೇಕು ಎಂದು ಆಯೋಜಕರು ತಿಳಿಸಿದ್ದಾರೆ.
ಕುಕನೂರು ಮತ್ತು ಯಲಬುರ್ಗಾ ತಾಲೂಕಿನ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಉಚಿತ ಆರೋಗ್ಯ ತಪಾಸಣೆಯ ಸದುಪಯೋಗ ಪಡೆದುಕೊಳ್ಳುವಂತೆ ಬಿಜೆಪಿ ಕೊಪ್ಪಳ ಜಿಲ್ಲಾ ಅಧ್ಯಕ್ಷ ನವೀನಕುಮಾರ್ ಈ. ಗುಳಗಣ್ಣವರ ಮನವಿ ಮಾಡಿದ್ದಾರೆ.