You are currently viewing PV NEWS : ಕೊಪ್ಪಳ | ಬರ ಘೋಷಣೆ ಜೊತೆಗೆ ಪರಿಹಾರ ಘೋಷಿಸಲಿ: ವಿರೋಧ ಪಕ್ಷದ ಮುಖಂಡರ ಆಗ್ರಹ! 

PV NEWS : ಕೊಪ್ಪಳ | ಬರ ಘೋಷಣೆ ಜೊತೆಗೆ ಪರಿಹಾರ ಘೋಷಿಸಲಿ: ವಿರೋಧ ಪಕ್ಷದ ಮುಖಂಡರ ಆಗ್ರಹ! 

PV NEWS : ಕೊಪ್ಪಳ | ಬರ ಘೋಷಣೆ ಜೊತೆಗೆ ಪರಿಹಾರ ಘೋಷಿಸಲಿ: ವಿರೋಧ ಪಕ್ಷದ ಮುಖಂಡರ ಆಗ್ರಹ! 

PV NEWS ಕನ್ನಡ 24×7: 

ಕೊಪ್ಪಳ, ಸೆ.15: ಕೊಪ್ಪಳ ಜಿಲ್ಲೆಯಲ್ಲಿ ಬರ ಪರಿಸ್ಥಿತಿ ತೀವ್ರವಾಗಿದ್ದರೂ ಸರ್ಕಾರ ಬರಪೀಡಿತ ತಾಲೂಕುಗಳ ಘೋಷಣೆ ಮಾಡದೆ ನಿರ್ಲಕ್ಷ್ಯ ವಹಿಸುತ್ತಿದೆ ಎಂದು ಮಾಜಿ ಸಚಿವ ವೆಂಕಟರಾವ್ ನಾಡಗೌಡ ಆರೋಪಿಸಿದರು.

ಕೊಪ್ಪಳವನ್ನು ಬರಪೀಡಿತ ತಾಲೂಕುಗಳ ಪಟ್ಟಿಗೆ ಸೇರಿಸುವಂತೆ ಆಗ್ರಹಿಸಿ ಸಿ.ವಿ. ಚಂದ್ರಶೇಖರ್ ನೇತೃತ್ವದಲ್ಲಿ ಹಮ್ಮಿಕೊಂಡಿರುವ ಎರಡು ದಿನಗಳ ‘ನ್ಯಾಯಕ್ಕಾಗಿ ನಡಿಗೆ’ ಪಾದಯಾತ್ರೆಯ ಅಂಗವಾಗಿ ಅಳವಂಡಿಯಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಕೊಪ್ಪಳ ಜಿಲ್ಲೆಯಿಂದ ಇಬ್ಬರು ಸಚಿವರು ಇದ್ದರೂ ಜಿಲ್ಲೆಯ ರೈತರ ಸಮಸ್ಯೆಗಳು ಬಗೆಹರಿದಿಲ್ಲ. ಸಚಿವರು ಹಾಗೂ ಶಾಸಕರು ರೈತರ ಸಂಕಷ್ಟದ ಕುರಿತು ಧ್ವನಿ ಎತ್ತುತ್ತಿಲ್ಲ. ಬರ ಪರಿಹಾರ ಕಾಮಗಾರಿಗಳಿಗೆ ಕೇಂದ್ರದತ್ತ ಬೆರಳು ತೋರಿಸುವ ಬದಲು ರಾಜ್ಯ ಸರ್ಕಾರ ತನ್ನ ಜವಾಬ್ದಾರಿ ನಿರ್ವಹಿಸಬೇಕು’ ಎಂದು ಒತ್ತಾಯಿಸಿದರು.

‘ರಾಜ್ಯದಲ್ಲಿ ಸುಮಾರು 200 ತಾಲೂಕುಗಳಲ್ಲಿ ಬರ ಪರಿಸ್ಥಿತಿ ಇದೆ ಎಂದು ಸಚಿವರೇ ಹೇಳುತ್ತಿದ್ದಾರೆ. ಹಾಗಿದ್ದರೆ ಬರ ಘೋಷಣೆ ಮಾಡಲು ವಿಳಂಬ ಏಕೆ? ಬರ ಘೋಷಣೆಯ ಜೊತೆಗೆ ಪರಿಹಾರವನ್ನೂ ಘೋಷಿಸಬೇಕು’ ಎಂದರು.

‘ಹಿಂದಿನ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ರೈತರ ಸಮಸ್ಯೆಗಳಿಗೆ ಸ್ಪಂದಿಸಿ ₹25 ಸಾವಿರ ಕೋಟಿ ಬೆಳೆ ಸಾಲ ಮನ್ನಾ ಮಾಡಲಾಗಿತ್ತು. ರೈತರ ಸಂಕಷ್ಟದ ಸಂದರ್ಭದಲ್ಲಿ ಕೇಂದ್ರದ ನೆರವಿಗಾಗಿ ಕಾಯದೆ ರಾಜ್ಯ ಸರ್ಕಾರ ತನ್ನಿಂದಾಗುವ ಕ್ರಮಗಳನ್ನು ಕೈಗೊಳ್ಳಬೇಕು’ ಎಂದು ನಾಡಗೌಡ ಹೇಳಿದರು.

ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ ಮಾತನಾಡಿ, ‘ಕೊಪ್ಪಳ ತಾಲೂಕಿನಲ್ಲಿ ಬೆಳೆಗಳು ಒಣಗಿ ಭೂಮಿ ಬರಡಾಗಿದೆ. ಇಂತಹ ಪರಿಸ್ಥಿತಿಯಲ್ಲೂ ಕೆಲವೇ ಹನಿಗಳ ಮಳೆಯನ್ನು ಆಧಾರವಾಗಿಸಿಕೊಂಡು ಕೊಪ್ಪಳವನ್ನು ಬರಪೀಡಿತ ತಾಲೂಕುಗಳ ಪಟ್ಟಿಯಿಂದ ಹೊರಗಿಟ್ಟಿರುವುದು ಸರಿಯಲ್ಲ. ಸರ್ಕಾರ ಹೆಲಿಕಾಪ್ಟರ್ ಮೂಲಕ ಬರ ಪರಿಶೀಲನೆ ನಡೆಸುವುದಕ್ಕಿಂತ ರೈತರ ಜಮೀನುಗಳಿಗೆ ತೆರಳಿ ವಾಸ್ತವ ಸ್ಥಿತಿ ಅರಿಯಬೇಕು’ ಎಂದು ಆಗ್ರಹಿಸಿದರು.

‘ರೈತರಿಗಾಗಿ ನಾವು ಪಾದಯಾತ್ರೆ ನಡೆಸುತ್ತಿದ್ದರೆ, ಇಲ್ಲಿನ ಶಾಸಕರು ಅಧಿಕಾರಕ್ಕಾಗಿ ಬೆಂಗಳೂರು ಮತ್ತು ದೆಹಲಿಗೆ ಪದೇಪದೇ ತೆರಳುತ್ತಿದ್ದಾರೆ’ ಎಂದು ಅವರು ಟೀಕಿಸಿದರು.

ರಾಜ್ಯ ಕೋರ್ ಕಮಿಟಿ ಸದಸ್ಯ ಸಿ.ವಿ. ಚಂದ್ರಶೇಖರ್ ಮಾತನಾಡಿ, ‘ನಿಯಮಾವಳಿಗಳ ವ್ಯಾಪ್ತಿಯಲ್ಲಿ ವಿಶೇಷ ಅನುದಾನ ತಂದು ಪರಿಹಾರ ಕಾಮಗಾರಿಗಳನ್ನು ಕೈಗೊಳ್ಳುವ ಅವಕಾಶವಿದೆ. ಕೊಪ್ಪಳವನ್ನು ಬರಪೀಡಿತ ತಾಲೂಕುಗಳ ಪಟ್ಟಿಗೆ ಸೇರಿಸಲು ಶಾಸಕರು ಸರ್ಕಾರದ ಮಟ್ಟದಲ್ಲಿ ಕೈಗೊಂಡ ಕ್ರಮಗಳೇನು? ಸರ್ಕಾರ ಅವರ ಮನವಿಯನ್ನು ತಿರಸ್ಕರಿಸಿದೆಯೇ ಅಥವಾ ಯಾವುದೇ ಕ್ರಮ ಕೈಗೊಂಡಿಲ್ಲವೇ ಎಂಬುದನ್ನು ಸ್ಪಷ್ಟಪಡಿಸಬೇಕು’ ಎಂದು ಪ್ರಶ್ನಿಸಿದರು.

‘ಬರ ಪಟ್ಟಿಯಿಂದ ಕೊಪ್ಪಳವನ್ನು ಹೊರಗಿಟ್ಟ ಬಳಿಕವೂ ಜನಪ್ರತಿನಿಧಿಗಳು ಮೌನವಾಗಿರುವುದೇಕೆ? ಸಚಿವ ಸ್ಥಾನಕ್ಕಾಗಿ ಬೆಂಗಳೂರು ಮತ್ತು ದೆಹಲಿಗೆ ತೆರಳಿದಷ್ಟು ಬಾರಿ ಬರ ಸಮಸ್ಯೆ ಪರಿಹಾರಕ್ಕಾಗಿ ಸರ್ಕಾರದ ಗಮನ ಸೆಳೆಯಲು ಪ್ರಯತ್ನಿಸಿದ್ದಾರೆಯೇ?’ ಎಂದು ಅವರು ಪ್ರಶ್ನಿಸಿದರು.

ಪಾದಯಾತ್ರೆ

ಬೆಳಗಟ್ಟಿಯ ಕನಕರಾಯ ದೇವಸ್ಥಾನ–ಮುಸ್ತಫಾ ಖಾದ್ರಿ ದರ್ಗಾ ಆವರಣದಲ್ಲಿ ಪಾದಯಾತ್ರೆಗೆ ಚಾಲನೆ ನೀಡಲಾಯಿತು. ಬಳಿಕ ರಘುನಾಥನಹಳ್ಳಿ, ಅಳವಂಡಿ, ಕಂಪ್ಲಿ ಹಾಗೂ ಮೊರನಾಳ ಮಾರ್ಗವಾಗಿ ಪಾದಯಾತ್ರೆ ಸಾಗಿತು.

PV NEWS ಕನ್ನಡ 24×7 | ಕೊಪ್ಪಳ

Prajavikshane

Chandru R Bhanapaur

Leave a Reply

error: Content is protected !!