You are currently viewing PV NEWS : ಕುಕನೂರಿನಲ್ಲಿ ‘ಯುವ ಸಂಸತ್’ ಸದ್ದು! : ಪ್ರಾಮಾಣಿಕ ನಾಯಕತ್ವ, ಜಾಗೃತ ಮತದಾನವೇ ಪ್ರಜಾಪ್ರಭುತ್ವದ ಶಕ್ತಿ: ಮಲ್ಲಿಕಾರ್ಜುನ ನಾಯ್ಕರ್!

PV NEWS : ಕುಕನೂರಿನಲ್ಲಿ ‘ಯುವ ಸಂಸತ್’ ಸದ್ದು! : ಪ್ರಾಮಾಣಿಕ ನಾಯಕತ್ವ, ಜಾಗೃತ ಮತದಾನವೇ ಪ್ರಜಾಪ್ರಭುತ್ವದ ಶಕ್ತಿ: ಮಲ್ಲಿಕಾರ್ಜುನ ನಾಯ್ಕರ್!

PV NEWS : ಕುಕನೂರಿನಲ್ಲಿ ‘ಯುವ ಸಂಸತ್’ ಸದ್ದು! : ಪ್ರಾಮಾಣಿಕ ನಾಯಕತ್ವ, ಜಾಗೃತ ಮತದಾನವೇ ಪ್ರಜಾಪ್ರಭುತ್ವದ ಶಕ್ತಿ: ಮಲ್ಲಿಕಾರ್ಜುನ ನಾಯ್ಕರ್!

PV NEWS ಕನ್ನಡ 24×7: 

ಕುಕನೂರು, ಸೆ.15: ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲ್ಲೂಕು ಆಡಳಿತ, ತಾಲ್ಲೂಕು ಪಂಚಾಯತ್, ಸಮಾಜ ಕಲ್ಯಾಣ ಇಲಾಖೆ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಉನ್ನತ ಶಿಕ್ಷಣ ಇಲಾಖೆ, ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳ ಇಲಾಖೆ, ತಾಲ್ಲೂಕು ಕಾನೂನು ಸೇವೆಗಳ ಪ್ರಾಧಿಕಾರ, ಯಲಬುರ್ಗಾ ಸಹಯೋಗದಲ್ಲಿ ಆಯೋಜಿಸಿರುವ ತಾಲ್ಲೂಕು ಮಟ್ಟದ ‘ಯುವ ಸಂಸತ್’ ಸ್ಪರ್ಧೆಗೆ ಮಂಗಳವಾರ ಚಾಲನೆ ನೀಡಲಾಯಿತು.

ಪಟ್ಟಣದ ವಿದ್ಯಾನಂದ ಗುರುಕುಲ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಕಾರ್ಯಕ್ರಮಕ್ಕೂ ಮುನ್ನ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು. ಬಳಿಕ ವಿದ್ಯಾರ್ಥಿನಿಯರು ಸಂವಿಧಾನದ ಪೀಠಿಕೆಯನ್ನು ಸಾಮೂಹಿಕವಾಗಿ ವಾಚಿಸಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ವಕೀಲರ ಸಂಘದ ತಾಲ್ಲೂಕು ಉಪಾಧ್ಯಕ್ಷ ಮಲ್ಲಿಕಾರ್ಜುನ ನಾಯ್ಕರ್, ಪ್ರಜಾಪ್ರಭುತ್ವದ ಆಶಯಗಳು ಹಾಗೂ ಸಂವಿಧಾನದ ಮೌಲ್ಯಗಳನ್ನು ಯುವಜನರು ಅರಿತುಕೊಳ್ಳಬೇಕು. ವಿದ್ಯಾರ್ಥಿಗಳಲ್ಲಿ ಸಂಸತ್ತಿನ ಕಾರ್ಯವೈಖರಿ, ಚರ್ಚೆ, ಪ್ರಶ್ನೋತ್ತರ ಹಾಗೂ ಪ್ರಜಾಪ್ರಭುತ್ವದ ಮೌಲ್ಯಗಳ ಕುರಿತು ಅರಿವು ಮೂಡಿಸುವಲ್ಲಿ ಯುವ ಸಂಸತ್ ಸ್ಪರ್ಧೆಗಳು ಮಹತ್ವದ ಪಾತ್ರ ವಹಿಸುತ್ತವೆ ಎಂದರು.

ಪ್ರಜಾಪ್ರಭುತ್ವದ ಯಶಸ್ಸು ಜನರು ಎಂತಹ ನಾಯಕರನ್ನು ಆಯ್ಕೆ ಮಾಡುತ್ತಾರೆ ಎಂಬುದರ ಮೇಲೆ ಅವಲಂಬಿತವಾಗಿದೆ. ಚುನಾವಣೆಯಲ್ಲಿ ಯಾವುದೇ ಆಮಿಷ ಅಥವಾ ಪ್ರಭಾವಕ್ಕೆ ಒಳಗಾಗದೆ ಸೂಕ್ತ ವ್ಯಕ್ತಿ ಮತ್ತು ಪಕ್ಷವನ್ನು ಆಯ್ಕೆ ಮಾಡಬೇಕು. ಮತದಾನ ಪ್ರಜಾಪ್ರಭುತ್ವದಲ್ಲಿ ಜನರ ಪ್ರಮುಖ ಶಕ್ತಿಯಾಗಿದ್ದು, ಪ್ರತಿಯೊಬ್ಬ ನಾಗರಿಕರೂ ಜವಾಬ್ದಾರಿಯಿಂದ ಮತದಾನದ ಹಕ್ಕು ಚಲಾಯಿಸಬೇಕು ಎಂದು ಹೇಳಿದರು.

ಶಿಕ್ಷಣವು ಕೇವಲ ಅಕ್ಷರಜ್ಞಾನಕ್ಕೆ ಸೀಮಿತವಾಗದೆ, ತಂದೆ–ತಾಯಿಗೆ ಗೌರವ, ಪರಸ್ಪರ ಪ್ರೀತಿ, ಸಾಮರಸ್ಯ ಹಾಗೂ ಸಾಮಾಜಿಕ ಹೊಣೆಗಾರಿಕೆಯಂತಹ ಮೌಲ್ಯಗಳನ್ನು ಬೆಳೆಸಬೇಕು. ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಆಶಯಗಳನ್ನು ಕೇವಲ ಪಠ್ಯಕ್ಕೆ ಸೀಮಿತಗೊಳಿಸದೆ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ತಾಲ್ಲೂಕು ಸಮಾಜ ಕಲ್ಯಾಣ ಇಲಾಖೆಯ ಅಧೀಕ್ಷಕ ವಿಜಯಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿ, ತಾಲ್ಲೂಕು ಮಟ್ಟದ ಸ್ಪರ್ಧೆಯಲ್ಲಿ ಉತ್ತಮ ವಿಷಯ ಮಂಡಿಸುವ ಮೂವರು ವಿದ್ಯಾರ್ಥಿಗಳನ್ನು ಜಿಲ್ಲಾ ಮಟ್ಟಕ್ಕೆ ಆಯ್ಕೆ ಮಾಡಲಾಗುವುದು. ಜಿಲ್ಲಾ ಮಟ್ಟದಲ್ಲಿ ಆಯ್ಕೆಯಾಗುವ ವಿದ್ಯಾರ್ಥಿಗಳು ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದು, ವಿಜೇತರಿಗೆ ಬಹುಮಾನ ಹಾಗೂ ಪ್ರೋತ್ಸಾಹಧನ ನೀಡಲಾಗುವುದು ಎಂದು ತಿಳಿಸಿದರು.

ಎಸ್ಸಿ–ಎಸ್ಟಿ ದೌರ್ಜನ್ಯ ತಡೆ ಸಮಿತಿ ಸದಸ್ಯ ಯಮನೂರಪ್ಪ ಗೊರ್ಲೆಕೊಪ್ಪ, ಉಪನ್ಯಾಸಕ ಶ್ರೀಕಾಂತ ಕುಲಕರ್ಣಿ ಮಾತನಾಡಿದರು. ವಿದ್ಯಾನಂದ ಪ್ರೌಢಶಾಲೆಯ ಉಪಪ್ರಾಂಶುಪಾಲ ಸೋಮಶೇಖರ್ ನಿಲೋಗಲ್, ಕೆಎಲ್‌ಇ ಕಾಲೇಜಿನ ಪ್ರಾಂಶುಪಾಲ ಅರುಣಕುಮಾರ್ ಹಿರೇಮಠ, ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಎನ್. ಪಾಂಡುರಂಗ, ಸರ್ಕಾರಿ ಐಟಿಐ ಕಾಲೇಜಿನ ಪ್ರಾಂಶುಪಾಲ ಚನ್ನಬಸಪ್ಪ ಬಳ್ಳಾರಿ, ಸಿಆರ್‌ಸಿ ಪೀರ್ ಸಾಬ್ ದಫೇದಾರ್ ಸೇರಿದಂತೆ ಶಿಕ್ಷಕರು, ಅಧಿಕಾರಿಗಳು .ಕಾಲೇಜಿನ ವಿದ್ಯಾರ್ಥಿ–ವಿದ್ಯಾರ್ಥಿನಿಯರು ಯುವ ಸಂಸತ್ ಸ್ಪರ್ಧೆಯಲ್ಲಿ ಭಾಗವಹಿಸಿ ಸಂಸತ್ತಿನ ಕಲಾಪದ ಮಾದರಿಯಲ್ಲಿ ವಿವಿಧ ವಿಷಯಗಳ ಕುರಿತು ಚರ್ಚೆ, ಪ್ರಶ್ನೋತ್ತರ ಹಾಗೂ ವಿಚಾರ ಮಂಡಿಸಿದರು.

Prajavikshane

Chandru R Bhanapaur

Leave a Reply

error: Content is protected !!