You are currently viewing BREAKING NEWS : ರ‍್ಯಾವಣಕಿ ಗ್ರಾಮದ ರೈತರ ಹೋರಾಟಕ್ಕೆ ಎಚ್.ಡಿ. ಕುಮಾರಸ್ವಾಮಿ ಅಭಯ! : ಅಹೋರಾತ್ರಿ ಧರಣಿ ಮಾಡುತ್ತಿರುವ ರೈತರು..!

BREAKING NEWS : ರ‍್ಯಾವಣಕಿ ಗ್ರಾಮದ ರೈತರ ಹೋರಾಟಕ್ಕೆ ಎಚ್.ಡಿ. ಕುಮಾರಸ್ವಾಮಿ ಅಭಯ! : ಅಹೋರಾತ್ರಿ ಧರಣಿ ಮಾಡುತ್ತಿರುವ ರೈತರು..!

BREAKING NEWS : ರ‍್ಯಾವಣಕಿ ಗ್ರಾಮದ ರೈತರ ಹೋರಾಟಕ್ಕೆ ಎಚ್.ಡಿ. ಕುಮಾರಸ್ವಾಮಿ ಅಭಯ! : ಅಹೋರಾತ್ರಿ ಧರಣಿ ಮಾಡುತ್ತಿರುವ ರೈತರು..!

220 ಕೆ.ವಿ. ವಿದ್ಯುತ್ ಪ್ರಸರಣ ಮಾರ್ಗದ ಪರಿಹಾರ ತಾರತಮ್ಯ ಆರೋಪ; ಜಿಲ್ಲಾಧಿಕಾರಿಗೆ ರೈತರ ಸಮಸ್ಯೆ ಪರಿಹರಿಸಲು ಸೂಚನೆ

ರೈತರ ಅಹೋರಾತ್ರಿ ಧರಣಿಗೆ ಜೆಡಿಎಸ್ ಜಿಲ್ಲಾ ವಕ್ತಾರ ಮಲ್ಲನಗೌಡ ಕೋನಗೌಡ್ರು ಸಾಥ್; ನ್ಯಾಯ ಸಿಗುವವರೆಗೂ ಹೋರಾಟ ಮುಂದುವರಿಸುವ ಎಚ್ಚರಿಕೆ

ಪ್ರಜಾವೀಕ್ಷಣೆ ಡಿಜಿಟಲ್ ಸುದ್ದಿ |

ಕುಕನೂರು, ಅ. 22: ತಾಲ್ಲೂಕಿನ ರ‍್ಯಾವಣಕಿ ಗ್ರಾಮದಲ್ಲಿ 220 ಕೆ.ವಿ. ವಿದ್ಯುತ್ ಪ್ರಸರಣ ಮಾರ್ಗದ ಕಂಬಗಳ ಅಳವಡಿಕೆ ಹಾಗೂ ಪರಿಹಾರ ವಿತರಣೆಯಲ್ಲಿ ತಾರತಮ್ಯವಾಗಿದೆ ಎಂದು ಆರೋಪಿಸಿ ರೈತರು ನಡೆಸುತ್ತಿರುವ ಅಹೋರಾತ್ರಿ ಧರಣಿಗೆ ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಬೆಂಬಲ ವ್ಯಕ್ತಪಡಿಸಿದ್ದಾರೆ. ದೂರವಾಣಿ ಕರೆ ಮೂಲಕ ರೈತರೊಂದಿಗೆ ಮಾತನಾಡಿ ಅಭಯ ನೀಡಿರುವ ಅವರು, ಜಿಲ್ಲಾಧಿಕಾರಿಗಳೊಂದಿಗೆ ಮಾತನಾಡಿ ರೈತರ ಸಮಸ್ಯೆಗಳನ್ನು ಪರಿಹರಿಸುವಂತೆ ಸೂಚನೆ ನೀಡಿದ್ದಾರೆ ಎಂದು ರೈತರು ತಿಳಿಸಿದ್ದಾರೆ.

ರೈತರ ಜಮೀನುಗಳಲ್ಲಿ ಹೆಚ್ಚುವರಿ ವಿದ್ಯುತ್ ಲೈನ್‌ಗಳನ್ನು ಅಳವಡಿಸಲಾಗುತ್ತಿದೆ. ಆದರೆ ಅದಕ್ಕೆ ತಕ್ಕ ಪರಿಹಾರ ನೀಡುತ್ತಿಲ್ಲ ಎಂಬುದು ರೈತರ ಆಕ್ಷೇಪ. ಈ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಅಹೋರಾತ್ರಿ ಧರಣಿ ಆರಂಭಿಸಿರುವ ರೈತರು, ನ್ಯಾಯ ಸಿಗುವವರೆಗೂ ಹೋರಾಟ ಮುಂದುವರಿಸುವುದಾಗಿ ಎಚ್ಚರಿಸಿದ್ದಾರೆ.

ರೈತರ ಹೋರಾಟಕ್ಕೆ ಜೆಡಿಎಸ್ ಪಕ್ಷದ ಜಿಲ್ಲಾ ವಕ್ತಾರ ಮಲ್ಲನಗೌಡ ಕೋನಗೌಡ್ರು ಕೂಡ ಸಾಥ್ ನೀಡಿದ್ದು, ನೊಂದ ರೈತರ ಪರ ಧ್ವನಿ ಎತ್ತುವ ಮೂಲಕ ಅವರೊಂದಿಗೆ ಬೆಂಬಲವಾಗಿ ನಿಂತಿದ್ದಾರೆ.

ಜಿಲ್ಲಾಧಿಕಾರಿಗೆ ರೈತರ ಸಮಸ್ಯೆ ಪರಿಹರಿಸಲು HDK ಸೂಚನೆ : 

ರ‍್ಯಾವಣಕಿ ಗ್ರಾಮದ ರೈತರ ಸಮಸ್ಯೆಗಳ ಕುರಿತು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ದೂರವಾಣಿ ಮೂಲಕ ಜಿಲ್ಲಾಧಿಕಾರಿಗಳೊಂದಿಗೆ ಮಾತನಾಡಿದ್ದಾರೆ ಎಂದು ರೈತರು ತಿಳಿಸಿದ್ದಾರೆ. ರೈತರು ಎದುರಿಸುತ್ತಿರುವ ಕಷ್ಟಗಳನ್ನು ಗಂಭೀರವಾಗಿ ಪರಿಗಣಿಸಿ, ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.

ಕೇಂದ್ರ ಸಚಿವರ ದೂರವಾಣಿ ಕರೆ ಹಾಗೂ ಅಭಯದಿಂದ ರೈತರ ಹೋರಾಟಕ್ಕೆ ಮತ್ತಷ್ಟು ಬಲ ಬಂದಿದ್ದು, ತಮ್ಮ ಬೇಡಿಕೆಗಳಿಗೆ ನ್ಯಾಯ ದೊರೆಯುವ ನಿರೀಕ್ಷೆಯಲ್ಲಿ ಧರಣಿ ಮುಂದುವರಿಸಿದ್ದಾರೆ.

ಒಪ್ಪಂದಕ್ಕಿಂತ ಹೆಚ್ಚುವರಿ ಲೈನ್‌ಗಳ ಅಳವಡಿಕೆ?

ರ‍್ಯಾವಣಕಿ ಗ್ರಾಮದ ಸರ್ವೇ ನಂಬರ್ 48, 49, 51, 57, 58 ಮತ್ತು 59ರ ಜಮೀನುಗಳಲ್ಲಿ 220 ಕೆ.ವಿ. ವಿದ್ಯುತ್ ಪ್ರಸರಣ ಕಂಬಗಳನ್ನು ಅಳವಡಿಸಲಾಗುತ್ತಿದೆ. ಟಾಟಾ ಸೋಲಾರ್ ಪವರ್ ಪ್ರೈವೇಟ್ ಲಿಮಿಟೆಡ್, ಟೊರೆಂಟ್ ಸೋಲಾರ್ ಪವರ್ ಪ್ರೈವೇಟ್ ಲಿಮಿಟೆಡ್ ಸೇರಿದಂತೆ ವಿವಿಧ ಖಾಸಗಿ ಕಂಪನಿಗಳ ವಿದ್ಯುತ್ ಹಾಗೂ ಸೌರ ಯೋಜನೆಗಳಿಂದ ಯಲಬುರ್ಗಾ ವಿಧಾನಸಭಾ ಕ್ಷೇತ್ರದ ರೈತರು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ರೈತರ ಪ್ರಕಾರ, ವಿದ್ಯುತ್ ಪ್ರಸರಣ ಮಾರ್ಗದಲ್ಲಿ ಆರು ಲೈನ್‌ಗಳನ್ನು ಅಳವಡಿಸುವ ಕುರಿತು ಆರಂಭದಲ್ಲಿ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಆದರೆ ಇದೀಗ ಹೆಚ್ಚುವರಿಯಾಗಿ ಇನ್ನೂ ಆರು ಲೈನ್‌ಗಳನ್ನು ಅಳವಡಿಸಲಾಗುತ್ತಿದೆ. ಹೆಚ್ಚುವರಿ ಲೈನ್‌ಗಳಿಗೆ ಪರಿಹಾರ ನೀಡುವಂತೆ ಕಂಪನಿಗಳಿಗೆ ಮನವಿ ಮಾಡಿದರೂ, ಈಗಾಗಲೇ ಪರಿಹಾರ ನೀಡಲಾಗಿದೆ; ಉಳಿದ ಲೈನ್‌ಗಳಿಗೆ ಪರಿಹಾರ ನೀಡುವುದಿಲ್ಲ ಎಂಬ ಉತ್ತರ ಬಂದಿದೆ ಎಂದು ರೈತರು ದೂರಿದ್ದಾರೆ.

ಒಪ್ಪಂದದಲ್ಲಿ ಎಷ್ಟು ಲೈನ್‌ಗಳಿಗೆ ಅನುಮತಿ ನೀಡಲಾಗಿದೆ, ವಾಸ್ತವವಾಗಿ ಎಷ್ಟು ಲೈನ್‌ಗಳನ್ನು ಅಳವಡಿಸಲಾಗಿದೆ, ಹೆಚ್ಚುವರಿ ಲೈನ್‌ಗಳಿಗೆ ರೈತರ ಅನುಮತಿ ಪಡೆಯಲಾಗಿದೆಯೇ ಮತ್ತು ಪರಿಹಾರ ನಿಗದಿಪಡಿಸಲಾಗಿದೆಯೇ ಎಂಬುದರ ಕುರಿತು ಸ್ಪಷ್ಟತೆ ಇಲ್ಲದಿರುವುದು ರೈತರ ಅಸಮಾಧಾನಕ್ಕೆ ಕಾರಣವಾಗಿದೆ.

ಮಧ್ಯವರ್ತಿಗಳಿಂದ ತೊಂದರೆ?

ಕಂಪನಿಗಳು ಮತ್ತು ರೈತರ ನಡುವೆ ಮಧ್ಯಸ್ಥಿಕೆ ವಹಿಸುವ ಕೆಲವು ಖಾಸಗಿ ವ್ಯಕ್ತಿಗಳಿಂದ ತೊಂದರೆಯಾಗುತ್ತಿದೆ ಎಂಬ ಆರೋಪವೂ ಕೇಳಿಬಂದಿದೆ. ಮಧ್ಯವರ್ತಿಗಳ ಮೂಲಕ ರೈತರೊಂದಿಗೆ ವ್ಯವಹರಿಸುವ ಸಂದರ್ಭದಲ್ಲಿ ರೈತರ ಹಿತಾಸಕ್ತಿಗೆ ಧಕ್ಕೆಯಾಗುತ್ತಿದೆ. ಜಮೀನಿನ ಹಕ್ಕು ಹಾಗೂ ಪರಿಹಾರದ ವಿಚಾರದಲ್ಲಿ ನ್ಯಾಯ ಕೇಳುವ ಸಾಮಾನ್ಯ ರೈತರಿಗೆ ಸೂಕ್ತ ಸ್ಪಂದನೆ ಸಿಗುತ್ತಿಲ್ಲ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಖಾಸಗಿ ಕಂಪನಿಗಳ ಪರವಾಗಿ ಅಧಿಕಾರಿಗಳು ಹಾಗೂ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ರೈತರ ಜಮೀನುಗಳಲ್ಲಿ ವಿದ್ಯುತ್ ಪ್ರಸರಣ ಕಂಬಗಳನ್ನು ಅಳವಡಿಸುವಾಗ ಸಮರ್ಪಕ ಪರಿಹಾರ ನೀಡದೆ ನಿರ್ಲಕ್ಷ್ಯ ವಹಿಸಲಾಗುತ್ತಿದೆ ಎಂಬ ಆರೋಪಗಳೂ ಇವೆ. ಈ ಆರೋಪಗಳ ಕುರಿತು ಸಂಬಂಧಪಟ್ಟ ಕಂಪನಿಗಳು ಹಾಗೂ ಅಧಿಕಾರಿಗಳ ಸ್ಪಷ್ಟನೆ ಅಗತ್ಯವಾಗಿದೆ.

ದೂರು ನೀಡಲು ಹೋದ ರೈತರಿಗೆ ಜೈಲು ಎಚ್ಚರಿಕೆ?

ವಿದ್ಯುತ್ ಪ್ರಸರಣ ಕಾಮಗಾರಿಯಿಂದ ಅನ್ಯಾಯವಾಗಿದೆ ಎಂದು ಆರೋಪಿಸಿ ರೈತರು ಯಲಬುರ್ಗಾ ಪೊಲೀಸ್ ವೃತ್ತ ನಿರೀಕ್ಷಕರು ಹಾಗೂ ಸ್ಥಳೀಯ ಪೊಲೀಸ್ ಠಾಣೆಗೆ ದೂರು ಸಲ್ಲಿಸಲು ತೆರಳಿದ್ದಾರೆ. ಆದರೆ ಪೊಲೀಸರು ತಮ್ಮ ಸಮಸ್ಯೆಗೆ ಸೂಕ್ತವಾಗಿ ಸ್ಪಂದಿಸದೆ, ಕಾಮಗಾರಿ ನಿಲ್ಲಿಸಲು ಮುಂದಾದರೆ ಜೈಲು ಪಾಲಾಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ ಎಂಬುದು ರೈತರ ಆರೋಪ.

“ನೀವೇನಾದರೂ ಕೆಲಸ ನಿಲ್ಲಿಸುವ ಧೈರ್ಯ ಮಾಡಿದರೆ ಜೈಲು ಪಾಲಾಗುತ್ತೀರಿ” ಎಂದು ಪೊಲೀಸರು ಗದರಿಸಿದ್ದಾರೆ ಎಂದು ರೈತರು ದೂರಿದ್ದಾರೆ. ನ್ಯಾಯಕ್ಕಾಗಿ ಪೊಲೀಸ್ ಠಾಣೆಗೆ ತೆರಳಿದಾಗ ತಮ್ಮ ಅಹವಾಲು ಆಲಿಸುವ ಬದಲು ಇಂತಹ ಎಚ್ಚರಿಕೆ ನೀಡಿರುವುದು ರೈತರಲ್ಲಿ ಆಕ್ರೋಶ ಮೂಡಿಸಿದೆ.

ದೂರು ಸಲ್ಲಿಸಲು ಹೋದ ರೈತರಿಗೆ ಪೊಲೀಸರು ಯಾವ ರೀತಿಯಲ್ಲಿ ಸ್ಪಂದಿಸಿದ್ದಾರೆ ಎಂಬುದರ ಕುರಿತು ಪೊಲೀಸ್ ಇಲಾಖೆಯ ಸ್ಪಷ್ಟನೆ ಲಭ್ಯವಾಗಿಲ್ಲ. ರೈತರ ಆರೋಪಗಳ ಬಗ್ಗೆ ಹಿರಿಯ ಪೊಲೀಸ್ ಅಧಿಕಾರಿಗಳು ಪರಿಶೀಲನೆ ನಡೆಸಬೇಕು ಎಂಬ ಒತ್ತಾಯವೂ ಕೇಳಿಬಂದಿದೆ.

ನ್ಯಾಯ ಸಿಗುವವರೆಗೂ ಅಹೋರಾತ್ರಿ ಧರಣಿ..!

ವಿದ್ಯುತ್ ಪ್ರಸರಣ ಮಾರ್ಗದ ಕಾಮಗಾರಿಯಿಂದ ಉಂಟಾಗಿರುವ ಸಮಸ್ಯೆಗಳಿಗೆ ಪರಿಹಾರ ದೊರೆಯದಿದ್ದರೆ ಖಾಸಗಿ ಕಂಪನಿಗಳ ವಿರುದ್ಧ ಸಂಘಟಿತ ಹೋರಾಟ ನಡೆಸುವುದಾಗಿ ರಾವಣಕಿ ಗ್ರಾಮದ ರೈತರು ಎಚ್ಚರಿಕೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಅಹೋರಾತ್ರಿ ಧರಣಿ ಆರಂಭಿಸಿರುವ ರೈತರು, ತಮ್ಮ ಬೇಡಿಕೆಗಳು ಈಡೇರುವವರೆಗೂ ಹೋರಾಟ ಮುಂದುವರಿಸುವುದಾಗಿ ತಿಳಿಸಿದ್ದಾರೆ.

ಒಪ್ಪಂದದ ವಿವರಗಳನ್ನು ಬಹಿರಂಗಪಡಿಸಬೇಕು, ಹೆಚ್ಚುವರಿ ಲೈನ್‌ಗಳ ಅಳವಡಿಕೆ ಹಾಗೂ ಪರಿಹಾರ ವಿತರಣೆಯ ಬಗ್ಗೆ ಪರಿಶೀಲನೆ ನಡೆಸಬೇಕು. ರೈತರ ದೂರುಗಳಿಗೆ ಸಂಬಂಧಪಟ್ಟ ಅಧಿಕಾರಿಗಳು ಸ್ಪಂದಿಸಬೇಕು ಎಂಬುದು ಅವರ ಪ್ರಮುಖ ಬೇಡಿಕೆ.

ರೈತರ ಅಹೋರಾತ್ರಿ ಧರಣಿಯಲ್ಲಿ ಕರಿಯಪ್ಪ ಚನ್ನದಾಸರ್, ಮಾರುತಿ ಚನ್ನದಾಸರ್, ವಿರೂಪಾಕ್ಷಯ್ಯ ಹಿರೇಮಠ, ಹಿರಯ್ಯ ಮಠದ, ಮೋದಿನ್ ಸಾಬ್ ಕಿಲ್ಲೆದ್, ಕುಮಾರಯ್ಯ ಮಠದ, ಹನುಮಪ್ಪ ತಳವಾರ, ಶರಣಪ್ಪ ತಳವಾರ, ಈರಪ್ಪ ತಳವಾರ, ಶಂಕ್ರಪ್ಪ ತಿಮ್ಮಣ್ಣನವರ, ಪ್ರವೀಣ್ ತಮ್ಮಣ್ಣನವರ, ಮೈಲಾರಪ್ಪ ಕುದ್ರಿಮೋತಿ, ವೀರನಗೌಡ ಕಬಾಡಿ ಸೇರಿದಂತೆ ಇತರ ರೈತರು ಭಾಗವಹಿಸಿದ್ದರು.

ರ‍್ಯಾವಣಕಿ ಗ್ರಾಮದ ರೈತರ ಅಹೋರಾತ್ರಿ ಧರಣಿಗೆ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರ ಅಭಯ ಹಾಗೂ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿರುವ ವಿಚಾರದಿಂದ ರೈತರಲ್ಲಿ ಸಮಸ್ಯೆ ಪರಿಹಾರದ ನಿರೀಕ್ಷೆ ಮೂಡಿದೆ. ರೈತರ ಆರೋಪಗಳ ಕುರಿತು ಖಾಸಗಿ ಕಂಪನಿಗಳು, ಪೊಲೀಸ್ ಇಲಾಖೆ ಹಾಗೂ ಜಿಲ್ಲಾಡಳಿತ ಯಾವ ರೀತಿಯಲ್ಲಿ ಕ್ರಮ ಕೈಗೊಳ್ಳಲಿವೆ ಎಂಬುದು ಈಗ ಕುತೂಹಲ ಮೂಡಿಸಿದೆ.

Prajavikshane

Chandru R Bhanapaur

Leave a Reply

error: Content is protected !!