You are currently viewing PV NEWS : ಕೊಪ್ಪಳ KIMS ಆಸ್ಪತ್ರೆಯಲ್ಲಿ ಮಾನವೀಯತೆ ಎಲ್ಲಿ? ರೋಗಿಯನ್ನು ಹೊತ್ತು ಸಾಗಿಸಿದ ಬಂಧುಗಳು!

PV NEWS : ಕೊಪ್ಪಳ KIMS ಆಸ್ಪತ್ರೆಯಲ್ಲಿ ಮಾನವೀಯತೆ ಎಲ್ಲಿ? ರೋಗಿಯನ್ನು ಹೊತ್ತು ಸಾಗಿಸಿದ ಬಂಧುಗಳು!

PV NEWS : ಕೊಪ್ಪಳ KIMS ಆಸ್ಪತ್ರೆಯಲ್ಲಿ ಮಾನವೀಯತೆ ಎಲ್ಲಿ? ರೋಗಿಯನ್ನು ಹೊತ್ತು ಸಾಗಿಸಿದ ಬಂಧುಗಳು!

ಸ್ಟ್ರೆಚರ್, ವೀಲ್‌ಚೇರ್ ಸೌಲಭ್ಯಗಳ ಕೊರತೆ ಆರೋಪ: ಆಸ್ಪತ್ರೆಯ ಅವ್ಯವಸ್ಥೆಗೆ ಅಧಿಕಾರಿಗಳು ಹೊಣೆ ಹೊರುವರೆ?

PV NEWS ಕನ್ನಡ 24×7: 

ಕೊಪ್ಪಳ, ಅ. 21 : ರೋಗಿಗಳಿಗೆ ಉತ್ತಮ ಚಿಕಿತ್ಸೆ ಮತ್ತು ಮಾನವೀಯ ನೆರವು ದೊರೆಯಬೇಕಾದ ಕೊಪ್ಪಳದ ಸರ್ಕಾರಿ ಕಿಮ್ಸ್ ಆಸ್ಪತ್ರೆಯಲ್ಲಿ ವೃದ್ಧ ರೋಗಿಯೊಬ್ಬರನ್ನು ಸ್ಟ್ರೆಚರ್ ಅಥವಾ ವೀಲ್‌ಚೇರ್ ಮೂಲಕ ಸಾಗಿಸಲು ಸಾಧ್ಯವಾಗದೆ, ಬಂಧುಗಳೇ ಕೈಗಳಲ್ಲಿ ಹೊತ್ತುಕೊಂಡು ಹೋಗುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಘಟನೆ ಆಸ್ಪತ್ರೆಯ ಮೂಲಸೌಕರ್ಯ ಹಾಗೂ ರೋಗಿಗಳ ನಿರ್ವಹಣೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಈ ಕುರಿತು ಸಾಮಾಜಿಕ ಹೋರಾಟಗಾರ ಕಾಶಿಮ್ ಕೆ. ನಾಗೇಶನಹಳ್ಳಿ ಅವರು ಆಕ್ರೋಶ ವ್ಯಕ್ತಪಡಿಸಿದ್ದು, ಜನಪ್ರತಿನಿಧಿಗಳು ಭಾಷಣಗಳಲ್ಲಿ ಆಸ್ಪತ್ರೆಯ ಅಭಿವೃದ್ಧಿ ಮತ್ತು ಸೌಲಭ್ಯಗಳ ಬಗ್ಗೆ ಮಾತನಾಡುತ್ತಾರೆ. ಆದರೆ, ರೋಗಿಗಳನ್ನು ಸಾಗಿಸಲು ಅಗತ್ಯವಾದ ಮೂಲಭೂತ ವ್ಯವಸ್ಥೆಗಳೇ ಇಲ್ಲದಿರುವುದು ದುರಂತ ಎಂದು ಟೀಕಿಸಿದ್ದಾರೆ.

“ರೋಗಿಗಳಿಗೆ ಒಂದು ಸ್ಟ್ರೆಚರ್ ಅಥವಾ ವೀಲ್‌ಚೇರ್ ಕೂಡ ಸಿಗದಿದ್ದರೆ, ಆಸ್ಪತ್ರೆಯ ಅಭಿವೃದ್ಧಿಯ ಮಾತುಗಳಿಗೆ ಅರ್ಥವೇನು? ಅನಾರೋಗ್ಯದಿಂದ ಬಳಲುತ್ತಿರುವ ರೋಗಿಗಳನ್ನು ಬಂಧುಗಳೇ ಹೊತ್ತು ಸಾಗಿಸುವ ಪರಿಸ್ಥಿತಿ ಬದಲಾಗಬೇಕು. ಆಸ್ಪತ್ರೆಯ ಆಡಳಿತ ಮಂಡಳಿ ಕೂಡಲೇ ಎಚ್ಚೆತ್ತುಕೊಂಡು ಅಗತ್ಯ ಸೌಲಭ್ಯಗಳನ್ನು ಒದಗಿಸಬೇಕು” ಎಂದು ಅವರು ಆಗ್ರಹಿಸಿದ್ದಾರೆ.

ಸರ್ಕಾರಿ ಆಸ್ಪತ್ರೆ ಎಂದರೆ ಬಡವರು ಮತ್ತು ಸಾಮಾನ್ಯ ಜನರ ಆರೋಗ್ಯದ ಆಶಾಕಿರಣ. ಅಲ್ಲಿ ರೋಗಿಗಳಿಗೆ ಅಗತ್ಯ ನೆರವು ಸಿಗದಿದ್ದರೆ, ಆರೋಗ್ಯ ಸೇವೆಯ ಉದ್ದೇಶವೇ ಪ್ರಶ್ನಾರ್ಹವಾಗುತ್ತದೆ. ಆಸ್ಪತ್ರೆಯಲ್ಲಿ ಸ್ಟ್ರೆಚರ್, ವೀಲ್‌ಚೇರ್‌ಗಳ ಲಭ್ಯತೆ, ಅವುಗಳ ನಿರ್ವಹಣೆ ಹಾಗೂ ರೋಗಿಗಳ ಸಾಗಣೆಗೆ ಸಿಬ್ಬಂದಿಯ ವ್ಯವಸ್ಥೆಯನ್ನು ಅಧಿಕಾರಿಗಳು ಪರಿಶೀಲಿಸಬೇಕು.

ರೋಗಿಯ ನೋವಿಗೆ ಸ್ಪಂದಿಸುವುದೇ ನಿಜವಾದ ಅಭಿವೃದ್ಧಿ. ಕೊಪ್ಪಳ ಕಿಮ್ಸ್ ಆಸ್ಪತ್ರೆಯಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಆಡಳಿತ ಮಂಡಳಿ ತಕ್ಷಣ ಕ್ರಮ ಕೈಗೊಳ್ಳಬೇಕು. ಆಸ್ಪತ್ರೆಯ ಅವ್ಯವಸ್ಥೆ ಕುರಿತು ಸಂಬಂಧಪಟ್ಟ ಅಧಿಕಾರಿಗಳು ಸ್ಪಷ್ಟನೆ ನೀಡಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.

Prajavikshane

Chandru R Bhanapaur

Leave a Reply

error: Content is protected !!