BIG NEWS : ಕೊಪ್ಪಳ | ಪ್ರೀತಿಸಿ ಮದುವೆಯಾದ ಜೋಡಿಗೆ ಜೀವ ಬೆದರಿಕೆ ಆರೋಪ!
ಒಂದೂವರೆ ವರ್ಷಗಳ ಹಿಂದೆಯೇ ರಿಜಿಸ್ಟರ್ ಮದುವೆ; ಪತ್ನಿಯ ಕುಟುಂಬದವರಿಂದ ಬೆದರಿಕೆ ಆರೋಪ – ಪೊಲೀಸ್ ರಕ್ಷಣೆ ಕೋರಿ ದಂಪತಿ ಮನವಿ!
ಕೊಪ್ಪಳ, ನ 19: ಪ್ರೀತಿಸಿ ಮದುವೆಯಾಗಿ, ಅಧಿಕೃತವಾಗಿ ರಿಜಿಸ್ಟರ್ ಮ್ಯಾರೇಜ್ ಮಾಡಿಕೊಂಡಿದ್ದ ಅಂತರ್ಜಾತಿ ಯುವ ಜೋಡಿಯೊಂದು ಜೀವ ಬೆದರಿಕೆಯ ಆತಂಕದಿಂದ ರಕ್ಷಣೆ ಕೋರಿ ಕೊಪ್ಪಳ ಮಹಿಳಾ ಪೊಲೀಸ್ ಠಾಣೆಗೆ ಇಂದು ಧಾವಿಸಿ ಮನವಿ ಸಲ್ಲಿಸಿರುವ ಘಟನೆ ನಡೆದಿದೆ.
ಕೊಪ್ಪಳ ತಾಲೂಕಿನ ಟನಕಣಕಲ್ ಗ್ರಾಮದ ಹನುಮೇಶ್ ಹಾಗೂ ಉಮಾ ಎಂಬ ಯುವ ಜೋಡಿ ಕಳೆದ ನಾಲ್ಕು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದು, ಸುಮಾರು ಒಂದೂವರೆ ವರ್ಷಗಳ ಹಿಂದೆ ವಿವಾಹವಾಗಿದ್ದಾರೆ. ಅಲ್ಲದೆ, ಸರ್ಕಾರಿ ದಾಖಲೆಗಳ ಮೂಲಕ ಅಧಿಕೃತವಾಗಿ ರಿಜಿಸ್ಟರ್ ಮದುವೆಯನ್ನೂ ಮಾಡಿಕೊಂಡಿದ್ದಾರೆ. ಯುವಕ ಲಿಂಗಾಯತ ಗಾಣಿಗ ಸಮುದಾಯಕ್ಕೆ ಸೇರಿದವರಾಗಿದ್ದು, ಯುವತಿ ಬಾರ್ಕರ್ ಅಂಬಿಗರ ಸಮುದಾಯಕ್ಕೆ ಸೇರಿದವರಾಗಿದ್ದಾರೆ.
ಆದರೆ, ಇದೀಗ ಯುವತಿಯ ಮಾವ, ಅಣ್ಣ ಹಾಗೂ ತಾಯಿಯಿಂದ ಜೀವ ಬೆದರಿಕೆ ಇದೆ ಎಂದು ಹನುಮೇಶ್ ಆರೋಪಿಸಿದ್ದಾರೆ. ಈಗಾಗಲೇ ಮದುವೆಯಾಗಿರುವ ವಿಚಾರ ತಿಳಿದಿದ್ದರೂ ಯುವತಿಯನ್ನು ಬೇರೆಡೆ ಮದುವೆ ಮಾಡಲು ಪ್ರಯತ್ನಿಸುತ್ತಿದ್ದಾರೆ. ಇದರಿಂದ ತಮ್ಮ ಜೀವಕ್ಕೆ ಅಪಾಯವಿದ್ದು, ರಕ್ಷಣೆ ನೀಡಬೇಕೆಂದು ದಂಪತಿ ಪೊಲೀಸರಿಗೆ ಮನವಿ ಮಾಡಿದ್ದಾರೆ.
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಹನುಮೇಶ್, ನಮ್ಮ ಮದುವೆ ಎರಡೂ ಕುಟುಂಬಗಳಿಗೂ ತಿಳಿದಿತ್ತು. ಆದರೆ ಈಗ ಅನಗತ್ಯವಾಗಿ ತೊಂದರೆ ನೀಡಲಾಗುತ್ತಿದ್ದು, ಜೀವ ಬೆದರಿಕೆ ಎದುರಿಸುತ್ತಿದ್ದೇವೆ. ಆದ್ದರಿಂದ ಪತ್ನಿಯೊಂದಿಗೆ ಪೊಲೀಸ್ ಠಾಣೆಗೆ ಆಗಮಿಸಿ ರಕ್ಷಣೆ ಕೋರಿದ್ದೇವೆ ಎಂದು ತಿಳಿಸಿದ್ದಾರೆ.
ಈಗಾಗಲೇ ಕಾನೂನುಬದ್ಧವಾಗಿ ಮದುವೆಯಾಗಿರುವ ದಂಪತಿಯ ಸುರಕ್ಷತೆ ಹಾಗೂ ವೈಯಕ್ತಿಕ ಸ್ವಾತಂತ್ರ್ಯವನ್ನು ಗಮನದಲ್ಲಿಟ್ಟುಕೊಂಡು ಪೊಲೀಸ್ ಇಲಾಖೆ ಸೂಕ್ತ ರಕ್ಷಣೆ ಒದಗಿಸಬೇಕೆಂಬುದು ಯುವ ಜೋಡಿಯ ಮನವಿಯಾಗಿದೆ.