You are currently viewing LOCAL EXPRESS : ಕುಕನೂರು | ಇಟಗಿ ಆರೋಗ್ಯ ಕೇಂದ್ರದಲ್ಲಿ ಸಿಬ್ಬಂದಿ ನಿರ್ಲಕ್ಷ್ಯ ಆರೋಪ: ಗ್ರಾಮಸ್ಥರ ಆಕ್ರೋಶ, ಅಧಿಕಾರಿಗಳ ವಿರುದ್ಧ ಪ್ರತಿಭಟನೆ!

LOCAL EXPRESS : ಕುಕನೂರು | ಇಟಗಿ ಆರೋಗ್ಯ ಕೇಂದ್ರದಲ್ಲಿ ಸಿಬ್ಬಂದಿ ನಿರ್ಲಕ್ಷ್ಯ ಆರೋಪ: ಗ್ರಾಮಸ್ಥರ ಆಕ್ರೋಶ, ಅಧಿಕಾರಿಗಳ ವಿರುದ್ಧ ಪ್ರತಿಭಟನೆ!

LOCAL EXPRESS : ಕುಕನೂರು | ಇಟಗಿ ಆರೋಗ್ಯ ಕೇಂದ್ರದಲ್ಲಿ ಸಿಬ್ಬಂದಿ ನಿರ್ಲಕ್ಷ್ಯ ಆರೋಪ: ಗ್ರಾಮಸ್ಥರ ಆಕ್ರೋಶ, ಅಧಿಕಾರಿಗಳ ವಿರುದ್ಧ ಪ್ರತಿಭಟನೆ!

10 ವರ್ಷಗಳಿಂದ ವೈದ್ಯರಿಲ್ಲದ ಆರೋಗ್ಯ ಕೇಂದ್ರಕ್ಕೆ ಈಗ ಎಂಬಿಬಿಎಸ್ ವೈದ್ಯರ ನೇಮಕ: ಸಮಸ್ಯೆ ಮರುಕಳಿಸದಂತೆ ಕ್ರಮದ ಭರವಸೆ ನೀಡಿದ DHO ಈಶ್ವರ್ ಸವಡಿ

 

PV NEWS ಕನ್ನಡ 24×7 |

ಕುಕನೂರು,ನ.19 : ತಾಲೂಕಿನ ಇಟಗಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರು ಹಾಗೂ ಸಿಬ್ಬಂದಿ ಸಾರ್ವಜನಿಕರಿಗೆ ಸಮರ್ಪಕವಾಗಿ ಸ್ಪಂದಿಸುತ್ತಿಲ್ಲ, ರೋಗಿಗಳಿಗೆ ಸೂಕ್ತ ಚಿಕಿತ್ಸೆ ದೊರೆಯುತ್ತಿಲ್ಲ ಎಂಬ ಗಂಭೀರ ಆರೋಪ ಕೇಳಿಬಂದಿದ್ದು, ಇದರಿಂದ ಆಕ್ರೋಶಗೊಂಡ ಗ್ರಾಮಸ್ಥರು ಹಾಗೂ ರೈತ ಪರ ಮುಖಂಡರು ಆರೋಗ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಪ್ರತಿಭಟನೆ ನಡೆಸಿದರು.

ಆಸ್ಪತ್ರೆಗೆ ಬರುವ ರೋಗಿಗಳನ್ನು ಸರಿಯಾಗಿ ತಪಾಸಣೆ ಮಾಡದೆ ಕೇವಲ ಚೀಟಿ ಬರೆದುಕೊಟ್ಟು ಕಳುಹಿಸಲಾಗುತ್ತಿದೆ. ಹೆರಿಗೆಗೆ ಬರುವ ಗರ್ಭಿಣಿಯರನ್ನು ಕುಕನೂರು ಸೇರಿದಂತೆ ಬೇರೆ ಆಸ್ಪತ್ರೆಗಳಿಗೆ ರೆಫರ್ ಮಾಡಲಾಗುತ್ತಿದೆ. ರಾತ್ರಿ ವೇಳೆ ಅಪಘಾತ ಹಾಗೂ ತುರ್ತು ಆರೋಗ್ಯ ಸಮಸ್ಯೆಗಳು ಎದುರಾದಾಗ ಬಡ ಕುಟುಂಬಗಳು ರೋಗಿಗಳನ್ನು ಬೇರೆಡೆಗೆ ಕರೆದೊಯ್ಯಲು ಪರದಾಡುವಂತಾಗಿದೆ ಎಂದು ಪ್ರತಿಭಟನಾಕಾರರು ದೂರಿದರು.

ಇತ್ತೀಚೆಗೆ ನಾಯಿ ಕಡಿತಕ್ಕೆ ಒಳಗಾದ ಮಗುವನ್ನು ಆಸ್ಪತ್ರೆಗೆ ಕರೆತಂದಾಗ ರೇಬಿಸ್ ನಿರೋಧಕ ಲಸಿಕೆ ಲಭ್ಯವಿರಲಿಲ್ಲ. ಅಗತ್ಯ ಔಷಧಗಳ ಕೊರತೆಯೂ ಇದೆ. ಸಿಬ್ಬಂದಿಯ ನಡುವಿನ ಹೊಂದಾಣಿಕೆಯ ಕೊರತೆಯಿಂದ ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದಾರೆ. ಹೀಗಾಗಿ ಕರ್ತವ್ಯ ನಿರ್ಲಕ್ಷ್ಯ ತೋರುವ ಸಿಬ್ಬಂದಿಯನ್ನು ವರ್ಗಾವಣೆ ಮಾಡಿ, ಆರೋಗ್ಯ ಕೇಂದ್ರದ ವ್ಯವಸ್ಥೆಯನ್ನು ಸುಧಾರಿಸಬೇಕು ಎಂದು ಆಗ್ರಹಿಸಿದರು.

ಎರಡು ಗಂಟೆ ಕಾದರೂ ಸ್ಪಂದನೆ ಇಲ್ಲವೆಂದು ಆಕ್ರೋಶ..!

ಆರೋಗ್ಯ ಕೇಂದ್ರದ ಸಮಸ್ಯೆ ಪರಿಶೀಲಿಸಲು ಬರುವುದಾಗಿ ತಿಳಿಸಿದ್ದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ (ಡಿಎಚ್‌ಒ) ಈಶ್ವರ್ ಸವಡಿ ಅವರು ಎರಡು ಗಂಟೆಗೂ ಹೆಚ್ಚು ಕಾಲ ಕಾಯಿಸಿದರೂ ಸಮರ್ಪಕವಾಗಿ ಸ್ಪಂದಿಸಿಲ್ಲ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದರು. ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದರು. ಸ್ಥಳದಲ್ಲಿ ಮಾತಿನ ಚಕಮಕಿ ಹಾಗೂ ಗದ್ದಲ ಉಂಟಾದ ಹಿನ್ನೆಲೆಯಲ್ಲಿ ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದರು.

10 ವರ್ಷಗಳಿಂದ ವೈದ್ಯರ ನೇಮಕವೇ ಆಗಿರಲಿಲ್ಲ!

ಪ್ರತಿಭಟನಾಕಾರರ ಅಹವಾಲು ಆಲಿಸಿದ ಡಿಎಚ್‌ಒ ಈಶ್ವರ್ ಸವಡಿ ಮಾತನಾಡಿ, ಇಟಗಿ ಗ್ರಾಮಕ್ಕೆ ಕಳೆದ ಸುಮಾರು 10 ವರ್ಷಗಳಿಂದ ಯಾವುದೇ ಸರ್ಕಾರಿ ವೈದ್ಯರ ನೇಮಕಾತಿಯಾಗಿರಲಿಲ್ಲ ಎಂಬುದನ್ನು ಬಹಿರಂಗಪಡಿಸಿದರು. ಕೊಪ್ಪಳ ಜಿಲ್ಲಾ ಆಸ್ಪತ್ರೆಗೆ ನೇಮಕಗೊಂಡಿದ್ದ ಡಾ. ಗೀತಾ ಅವರನ್ನು ವೈದ್ಯರ ಕೊರತೆಯ ಹಿನ್ನೆಲೆಯಲ್ಲಿ ಇಟಗಿಯಲ್ಲಿ ತಾತ್ಕಾಲಿಕವಾಗಿ ಸೇವೆಗೆ ಬಳಸಿಕೊಳ್ಳಲಾಗಿತ್ತು ಎಂದು ತಿಳಿಸಿದರು.

ಆಯುರ್ವೇದ ವೈದ್ಯರಿಂದ ಹೆರಿಗೆ ಹಾಗೂ ಶಸ್ತ್ರಚಿಕಿತ್ಸೆಯಂತಹ ಸೇವೆಗಳನ್ನು ನಿರೀಕ್ಷಿಸಲು ಸಾಧ್ಯವಿಲ್ಲ. ಇದೀಗ ಹೊಸದಾಗಿ ಮಹಿಳಾ ಎಂಬಿಬಿಎಸ್ ವೈದ್ಯರನ್ನು ನೇಮಕ ಮಾಡಲಾಗಿದ್ದು, ಅವರು ಈಗಾಗಲೇ ಮೂರು ದಿನಗಳಿಂದ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಮುಂದಿನ ದಿನಗಳಲ್ಲಿ ಸಾರ್ವಜನಿಕರಿಗೆ ತೊಂದರೆಯಾಗದಂತೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಸರ್ಕಾರಿ ನೌಕರರಿಗೆ ಜನರ ಸೇವೆ ಸಲ್ಲಿಸಲು ಸರ್ಕಾರ ವೇತನ ನೀಡುತ್ತದೆ. ಸಾರ್ವಜನಿಕರಿಗೆ ಸೇವೆ ಒದಗಿಸುವುದು ಅವರ ಹಕ್ಕು, ಅದು ಯಾರ ಮೇಲಿನ ಉಪಕಾರವಲ್ಲ. ಆರೋಗ್ಯ ಸೇವೆಯಲ್ಲಿ ಲೋಪವಾಗಿ ಜನರಿಗೆ ತೊಂದರೆಯಾದರೆ ಅದು ಇಲಾಖೆಯ ಜವಾಬ್ದಾರಿಯಾಗಿದೆ. ಇಂತಹ ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳಲಾಗುವುದು ಎಂದರು.

ಸಿಬ್ಬಂದಿ ವರ್ಗಾವಣೆ ವಿಚಾರದಲ್ಲಿ ಸರ್ಕಾರಿ ನಿಯಮಾವಳಿಗಳಿದ್ದು, ದೂರುಗಳ ಕುರಿತು ವಿಚಾರಣೆ ನಡೆಸಿ ವರದಿ ಪಡೆದು ಮೇಲಾಧಿಕಾರಿಗಳ ಅನುಮೋದನೆಯೊಂದಿಗೆ ಕ್ರಮ ಕೈಗೊಳ್ಳಬೇಕಾಗುತ್ತದೆ. ತಕ್ಷಣವೇ ಎಲ್ಲ ಸಿಬ್ಬಂದಿಯನ್ನು ವರ್ಗಾವಣೆ ಮಾಡಲು ಸಾಧ್ಯವಿಲ್ಲ. ಸಿಬ್ಬಂದಿ ಸಭೆ ನಡೆಸಿ ಸಾರ್ವಜನಿಕರಿಗೆ ಉತ್ತಮ ಸೇವೆ ನೀಡುವಂತೆ ಸೂಚಿಸಲಾಗುವುದು. ಸುಧಾರಣೆ ಕಂಡುಬರದಿದ್ದರೆ ಮೇಲಾಧಿಕಾರಿಗಳ ಗಮನಕ್ಕೆ ತಂದು ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದರು.

ವೈದ್ಯರ ನೇಮಕವಾದರೂ ಸೇವೆಯಲ್ಲಿ ಸುಧಾರಣೆ ಯಾವಾಗ?

ಹತ್ತು ವರ್ಷಗಳ ಕಾಲ ಕಾಯಬೇಕಾದ ಪರಿಸ್ಥಿತಿ ಎದುರಿಸಿದ ಇಟಗಿ ಗ್ರಾಮಸ್ಥರಿಗೆ ಈಗ ಎಂಬಿಬಿಎಸ್ ವೈದ್ಯರ ನೇಮಕವಾಗಿರುವುದು ಸಮಾಧಾನದ ಸಂಗತಿ. ಆದರೆ ವೈದ್ಯರ ನೇಮಕಾತಿಯೊಂದೇ ಆರೋಗ್ಯ ಸೇವೆಯ ಸುಧಾರಣೆಗೆ ಸಾಕಾಗುವುದಿಲ್ಲ. ಅಗತ್ಯ ಔಷಧಗಳು, ಸಿಬ್ಬಂದಿಯ ಸಮಯಪಾಲನೆ, ತುರ್ತು ಚಿಕಿತ್ಸೆ ಹಾಗೂ ಗರ್ಭಿಣಿಯರಿಗೆ ಸ್ಥಳೀಯವಾಗಿ ದೊರೆಯಬೇಕಾದ ಆರೋಗ್ಯ ಸೇವೆಗಳು ಸಮರ್ಪಕವಾಗಿ ಲಭ್ಯವಾಗಬೇಕು. ಅಧಿಕಾರಿಗಳ ಭರವಸೆ ಕಾರ್ಯರೂಪಕ್ಕೆ ಬಂದು ಗ್ರಾಮೀಣ ಜನರ ಆರೋಗ್ಯದ ಹಕ್ಕು ರಕ್ಷಣೆಯಾಗುತ್ತದೆಯೇ ಎಂಬುದನ್ನು ಕಾದುನೋಡಬೇಕಿದೆ.

ಈ ಸಂದರ್ಭದಲ್ಲಿ ತಾಲೂಕು ವೈದ್ಯಾಧಿಕಾರಿ ನೇತ್ರಾವತಿ ಹಿರೇಮಠ, ಪಿಎಸ್‌ಐ ಮೌನೇಶ್ ರಾಠೋಡ್, ಅಂದಪ್ಪ ಹುರುಳಿ, ಮಹೇಶ್ ದೊಡ್ಮನಿ, ಮಹೇಶ್ ಹಿರೇಮನಿ, ವಾಜೀರ್ ಸಾಬ್ ತಳಕಲ್, ಮಹಿಳಾ ಸಂಘಟನೆಯ ಪುಷ್ಪ ಸೇರಿದಂತೆ ಗ್ರಾಮದ ಮುಖಂಡರು, ಮಹಿಳೆಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.


PV NEWS ಕನ್ನಡ 24×7 |

Prajavikshane

Chandru R Bhanapaur

Leave a Reply

error: Content is protected !!