LOCAL EXPRESS : ಕುಕನೂರು | ಮಹಿಳಾ ಗ್ರಾಮ ಆಡಳಿತಾಧಿಕಾರಿ ರಾಣಿ ಹಳ್ಳಿ ಅವರಿಗೆ ಬಳಗೇರಿಗೆ ಮರುನಿಯೋಜಿಸಲು ರೈತರು, ಗ್ರಾಮಸ್ಥರ ಆಗ್ರಹ!
ತಾಲೂಕಿನ ನಾಲ್ಕೈದು ಗ್ರಾಮಗಳಲ್ಲಿ ಗ್ರಾಮ ಆಡಳಿತ ಅಧಿಕಾರಿಗಳ ಹುದ್ದೆ ಖಾಲಿ; ಇರುವ ಅಧಿಕಾರಿಗಳ ನಿಯೋಜನೆಯಿಂದ ಸಾರ್ವಜನಿಕರಿಗೆ ಮತ್ತಷ್ಟು ತೊಂದರೆ ಆತಂಕ!
PV NEWS ಕನ್ನಡ 24×7 |
ಕುಕನೂರು, ನ.19: ಮಹಿಳಾ ಗ್ರಾಮ ಆಡಳಿತ ಅಧಿಕಾರಿ ರಾಣಿ ಹಳ್ಳಿ ಅವರನ್ನು ಮತ್ತೆ ಬಳಗೇರಿ ಗ್ರಾಮಕ್ಕೆ ನಿಯೋಜಿಸುವಂತೆ ಆಗ್ರಹಿಸಿ ಬಳಗೇರಿ ಹಾಗೂ ಬುದಗುಂಪಿ ಗ್ರಾಮದ ರೈತರು ಮತ್ತು ಸಾರ್ವಜನಿಕರು ಗುರುವಾರ ಕುಕನೂರು ತಹಶೀಲ್ದಾರ್ ಬಸವರಾಜ ಬಣ್ಣೆಶಿರೂರು ಅವರಿಗೆ ಮನವಿ ಸಲ್ಲಿಸಿದರು.
ರಾಣಿ ಹಳ್ಳಿ ಅವರು ಹಲವು ವರ್ಷಗಳಿಂದ ಬಳಗೇರಿ ವೃತ್ತದ ಗ್ರಾಮ ಆಡಳಿತ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ರೈತರು ಹಾಗೂ ಸಾರ್ವಜನಿಕರೊಂದಿಗೆ ಉತ್ತಮ ಬಾಂಧವ್ಯ ಹೊಂದಿ ಜನಪರವಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಆದರೆ, ರಾಜಕೀಯ ಪ್ರಭಾವ ಹಾಗೂ ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ಸಚಿವ ಬಸವರಾಜ ರಾಯರೆಡ್ಡಿ ಅವರ ಶಿಫಾರಸು ಪತ್ರದ ಮೂಲಕ ಅವರನ್ನು ಕುಷ್ಟಗಿ ತಾಲ್ಲೂಕಿನ ಹಿರೇಮನ್ನಾಪುರ ಗ್ರಾಮಕ್ಕೆ ನಿಯೋಜಿಸಲಾಗಿದೆ ಎಂದು ಮನವಿಯಲ್ಲಿ ಆರೋಪಿಸಲಾಗಿದೆ.
ಈಗಾಗಲೇ ಕುಕನೂರು ತಾಲ್ಲೂಕಿನ ನಾಲ್ಕೈದು ಗ್ರಾಮಗಳಲ್ಲಿ ಗ್ರಾಮ ಆಡಳಿತ ಅಧಿಕಾರಿಗಳ ಹುದ್ದೆಗಳು ಖಾಲಿ ಇವೆ. ಇಂತಹ ಸಂದರ್ಭದಲ್ಲಿ ಬಳಗೇರಿ ಗ್ರಾಮದ ಅಧಿಕಾರಿಯನ್ನು ಬೇರೆಡೆಗೆ ನಿಯೋಜಿಸಿರುವುದರಿಂದ ರೈತರು ಮತ್ತು ಸಾರ್ವಜನಿಕರಿಗೆ ಕಂದಾಯ ಇಲಾಖೆಯ ಕೆಲಸಗಳಿಗೆ ಮತ್ತಷ್ಟು ತೊಂದರೆಯಾಗಲಿದೆ. ಪಹಣಿ, ಜಮೀನಿನ ದಾಖಲೆಗಳು, ವಿವಿಧ ಪ್ರಮಾಣಪತ್ರಗಳು ಸೇರಿದಂತೆ ದಿನನಿತ್ಯದ ಸರ್ಕಾರಿ ಕೆಲಸಗಳಿಗಾಗಿ ಜನರು ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಬಹುದು. ಆದ್ದರಿಂದ ರಾಣಿ ಹಳ್ಳಿ ಅವರನ್ನು ಮತ್ತೆ ಬಳಗೇರಿ ಗ್ರಾಮ ಆಡಳಿತ ಅಧಿಕಾರಿಯಾಗಿ ನೇಮಿಸಬೇಕು ಎಂದು ರೈತರು ಒತ್ತಾಯಿಸಿದರು.
ಸರ್ಕಾರಿ ನೌಕರರು ಯಾವುದೇ ರಾಜಕೀಯ ಅಥವಾ ಖಾಸಗಿ ಒತ್ತಡವಿಲ್ಲದೆ ಕರ್ತವ್ಯ ನಿರ್ವಹಿಸಲು ಅವಕಾಶ ಕಲ್ಪಿಸಬೇಕು. ಅಧಿಕಾರಿಗಳ ಮೇಲೆ ದೌರ್ಜನ್ಯ ಹಾಗೂ ಅನಗತ್ಯ ಹಸ್ತಕ್ಷೇಪ ಮಾಡುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಸಾಮಾಜಿಕ ಹೋರಾಟಗಾರ ಸುರೇಶ್ ಬಳೂಟಗಿ ಸೇರಿದಂತೆ ಲಕ್ಷ್ಮಣ ಕಮ್ಮಾರ್, ಯಂಕಣ್ಣ ಆರೇರ್, ಶಿವು ಅರಕೇರಿ, ಶಿವಕುಮಾರ ಮುದ್ದಾಪುರ, ಮಂಜುನಾಥ ರಡ್ಡೇರ, ಶರಣಪ್ಪ ಬಾರಕೇರ, ಈರಪ್ಪ ಭಜಂತ್ರಿ ಹಾಗೂ ಮಾರುತಿ ಭಜಂತ್ರಿ ಸೇರಿದಂತೆ ಹಲವು ಗ್ರಾಮಸ್ಥರು ಮನವಿಗೆ ಸಹಿ ಹಾಕಿದ್ದಾರೆ.
ತಹಶೀಲ್ದಾರ್ ಮನವಿ ಸ್ವೀಕರಿಸಿದ್ದು, ರಾಣಿ ಹಳ್ಳಿ ಅವರ ಮರುನಿಯೋಜನೆ ಕುರಿತು ಜಿಲ್ಲಾಡಳಿತ ಯಾವ ನಿರ್ಧಾರ ಕೈಗೊಳ್ಳಲಿದೆ ಎಂಬುದನ್ನು ಗ್ರಾಮಸ್ಥರು ಹಾಗೂ ರೈತರು ಎದುರು ನೋಡುತ್ತಿದ್ದಾರೆ.