ಕೊಪ್ಪಳ : ನಮ್ಮ ಭಾರತ ದೇಶ ಎಷ್ಟೇ ಮುಂದುವರೆದರು ಸಹ ಇನ್ನು ನಮ್ಮ ಗ್ರಾಮೀಣ ಪ್ರದೇಶಗಳಲ್ಲಿ ಕೆಲವು ಅನಾಚಾರ ಮೂಢನಂಬಿಕೆ ಹಾಗೂ ಬಹಳಷ್ಟು ಅನಿಷ್ಟ ಪದ್ದತಿಗಳು ಇನ್ನೂ ಜಾರಿದೆ ಎನ್ನುವುದೇ ವಿಪರ್ಯಾಸವಾಗಿದೆ. ಇದೀಗ ಕೊಪ್ಪಳ ಜಿಲ್ಲೆವೊಂದರಲ್ಲಿ ಅಂತರ್ಜಾತಿ ವಿವಾಹವಾಗಿದ್ದಕ್ಕೆ ಯುವಕನ ಕುಟುಂಬಕ್ಕೆ ಗ್ರಾಮಸ್ಥರು ಸಾಮಾಜಿಕ ಬಹಿಷ್ಕಾರ ಹಾಕಿರುವ ಘಟನೆ ನಡೆದಿದೆ.
ಅಂತರ್ಜಾತಿ ವಿವಾಹವಾಗಿದ್ದಕ್ಕೆ ಸಾಮಾಜಿಕ ಬಹಿಷ್ಕಾರ ಹಾಕಿದ್ದಾರೆ ಎನ್ನುವ ವಿಷಯ ಇದೀಗ ತಡವಾಗಿ ಬೆಳಕಿಗೆ ಬಂದಿದೆ. ಕೊಪ್ಪಳ ಜಿಲ್ಲೆಯ ಭಾಗ್ಯನಗರದಲ್ಲಿ ಯುವಕನ ಕುಟುಂಬಕ್ಕೆ ಗ್ರಾಮಸ್ಥರು ಬಹಿಷ್ಕಾರ ಹಾಕಿದ್ದಾರೆ ಎಂದು ತಿಳಿದು ಬಂದಿದೆ. ಶಂಕ್ರಪ್ಪ ಎಂಬುವವರ ಪುತ್ರ ಅಂತರ್ಜಾತಿ ವಿವಾಹವಾಗಿದ್ದ ಎಂದು ಹೇಳಲಾಗುತ್ತಿದ್ದು, ಶಂಕ್ರಪ್ಪ ಬೇನಳ್ಳಿ ಕುಟುಂಬಕ್ಕೆ ಇದೀಗ ಗ್ರಾಮಸ್ಥರು ಸಾಮಾಜಿಕ ಬಹಿಷ್ಕಾರ ಹಾಕಿದ್ದಾರೆ.
ಸುತ್ತಮುತ್ತಲಿನ ಊರುಗಳಲ್ಲಿ ಹಾಗೂ ತಮ್ಮ ಗ್ರಾಮದಲ್ಲಿ ನಡೆಯುವ ಸಮಾಜದ ಯಾವುದೇ ಸಮಾರಂಭಗಳಿಗೆ ಶಂಕ್ರಪ್ಪ ಕುಟುಂಬಕ್ಕೆ ಆಹ್ವಾನ ಇಲ್ಲ. ಅಂತರ್ಜಾತಿ ವಿವಾಹವಾಗಿದ್ದಕ್ಕೆ ಇದೀಗ ಕುಟುಂಬಕ್ಕೆ ಒಂದು ಲಕ್ಷ ರೂಪಾಯಿ ದಂಡ ಕಟ್ಟಬೇಕು ಎಂದು ಮಾಹಿತಿ ಇದೆ. ಕಳೆದ ಒಂದುವರೆ ವರ್ಷದಿಂದ ಈ ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ ಹಾಕಲಾಗಿದೆ ಎನ್ನಲಾಗುತ್ತಿದೆ. ಕಾರ್ಪೆಂಟರ್ ಆಗಿ ಶಂಕ್ರಪ್ಪ ಕೆಲಸ ಮಾಡಿಕೊಂಡಿದ್ದಾರೆ. ಹಾಗಾಗಿ ರೂ. 1 ಲಕ್ಷ ಹಣ ದಂಡ ಕೊಡುವುದಕ್ಕೆ ಆಗಲ್ಲ ಎಂದು ಶಂಕ್ರಪ್ಪ ಹೇಳಿದ್ದರು. ಹಾಗಾಗಿ ನಿನ್ನೆ ಸಭೆ ಸೇರಿ 21,000 ದಂಡವನ್ನು ವಿಧಿಸಿದರು. ಈ ಬಗ್ಗೆ ಪೊಲೀಸರಿಗೆ ದೂರು ನೀಡಿದರು ಸಹ ಯಾವುದೇ ಪ್ರಯೋಜನವಾಗಲಿಲ್ಲ ಎಂದು ತಿಳಿಸಿದ್ದಾರೆ.