ಪ್ರಜಾವೀಕ್ಷಣೆ ಡಿಜಿಟಲ್ ಡೆಸ್ಕ್ :
BREAKING : 6 ರಿಂದ 14 ವಯೋಮಾನದ ಮಕ್ಕಳ ದಾಖಲಾತಿ ಅಂದೋಲನ ಕುರಿತು ಶಾಲಾ ಶಿಕ್ಷಣ ಇಲಾಖೆ ಮಹತ್ವದ ಆದೇಶ ..!!
ಬೆಂಗಳೂರು : ಈ ವರ್ಷದ (2025-26ನೇ) ಸಾಲಿನಲ್ಲಿ ವಿಶೇಷ ದಾಖಲಾತಿ ಅಂದೋಲನ ಹಾಗೂ ಸಾಮಾನ್ಯ ದಾಖಲಾತಿ ಆಂದೋಲನ ನಡೆಸುವ ಕುರಿತು ಕರ್ನಾಟಕ ಶಾಲಾ ಶಿಕ್ಷಣ ಇಲಾಖೆ ಮಹತ್ವದ ಆದೇಶ ಹೊರಡಿಸಿದೆ. ಈ ಮೂಲಕ ಮಕ್ಕಳ ದಾಖಲಾತಿಯಲ್ಲಿ ಆಂದೋಲನವೇ ಆಗಬೇಕು ಎಂದು ತಿಳಿಸಿದೆ.
ರಾಜ್ಯದ ಎಲ್ಲಾ ಮಕ್ಕಳ ಉಚಿತ ಮತ್ತು ಕಡ್ಡಾಯ ಶಿಕ್ಷಣಕ್ಕಾಗಿ ಮಕ್ಕಳ ಹಕ್ಕು ಕಾಯಿದೆ 2009 ಹಾಗೂ ಕರ್ನಾಟಕ ಉಚಿತ ಮತ್ತು ಕಡ್ಡಾಯ ಶಿಕ್ಷಣಕ್ಕಾಗಿ ಮಕ್ಕಳ ಹಕ್ಕು ನಿಯಮಗಳು 2012 ರಿಂದ ಜಾರಿಗೆ ಬಂದಿರುತ್ತದೆ. ಈ ಕಾಯ್ದೆಯ ಪ್ರಕಾರ ಶಿಕ್ಷಣವು ಪ್ರತಿಯೊಂದು ಮಗುವಿನ ಮೂಲಭೂತ ಹಕ್ಕಾಗಿರುತ್ತದೆ. ಎಲ್ಲಾ ಮಕ್ಕಳಿಗೂ ಗುಣಾತ್ಮಕ ಶಿಕ್ಷಣವನ್ನು ಒದಗಿಸುವುದು ಸರ್ಕಾರದ, ಪೋಷಕರ ಮತ್ತು ನಮ್ಮೆಲ್ಲರ ಕರ್ತವ್ಯವಾಗಿರುತ್ತದೆ.
6-14 ವಯೋಮಾನದ ಎಲ್ಲಾ ಮಕ್ಕಳಿಗೆ ಯಾವುದೇ ತಾರತಮ್ಯವಿಲ್ಲದೆ ಕಡ್ಡಾಯ ಮತ್ತು ಉಚಿತ ಪ್ರಾಥಮಿಕ ಶಿಕ್ಷಣವನ್ನು ಒದಗಿಸುವುದು, ಎಲ್ಲಾ ಮಕ್ಕಳು ಕಡ್ಡಾಯವಾಗಿ ಶಾಲೆಗೆ ದಾಖಲಾಗುವುದು ಹಾಗೂ ದಾಖಲಾದ ಎಲ್ಲಾ ಮಕ್ಕಳು ಶಾಲೆಯಲ್ಲಿ ಉಳಿಯಬೇಕು ಎಂಬುವುದು ಶಿಕ್ಷಣ ಹಕ್ಕು ಕಾಯ್ದೆಯ ಮುಖ್ಯ ಉದ್ದೇಶವಾಗಿದೆ.
2024-25ನೇ ಸಾಲಿನಲ್ಲಿ ಮೊಬೈಲ್ ಆಪ್ ಮೂಲಕ RDPR, UDD ಹಾಗೂ BBMP ವತಿಯಿಂದ ನಡೆಸಲಾದ ಮನೆ-ಮನೆ ಸಮೀಕ್ಷೆಯ ವರದಿಯನ್ನು ಜಿಲ್ಲೆಯ ಎಲ್ಲಾ OoSC Nodal ಅಧಿಕಾರಿಗಳು ನೀಡಿರುವ ಮೊಬೈಲ್ ಸಂಖ್ಯೆಗೆ link ಮಾಡಿ down load option ಅನ್ನು ಈ link ನಲ್ಲಿ https://childrensurvey.karnataka.gov.in/web/Signin ಶಾಲೆಯಿಂದ ಹೊರಗುಳಿದ ಹಾಗೂ ದಾಖಲಾಗದ ಮಕ್ಕಳ ಸಮೀಕ್ಷೆ ಮಾಹಿತಿ ಪಡೆದು ಸಮೀಕ್ಷೆಯಲ್ಲಿ ಲಭ್ಯವಿರುವ ಅಂಕಿ-ಅಂಶಗಳನ್ನು ಮತ್ತೊಮ್ಮೆ SATS/UDISE ಮಾಹಿತಿಯೊಂದಿಗೆ ಮರು ಪರಿಶೀಲಿಸುವುದು ಎಂದು ಇಲಾಖೆ ಹೇಳಿದೆ.
ಶಾಲೆಯಿಂದ ಹೊರಗುಳಿದ ಹಾಗೂ ಶಾಲೆಗೆ ದಾಖಲಾದ ಎಲ್ಲಾ ಮಕ್ಕಳನ್ನು ಶಾಲಾ ಶಿಕ್ಷಣದ ಮುಖ್ಯವಾಹಿನಿಗೆ ತರುವುದು ದಾಖಲಾತಿ ಆಂದೋಲನದ ಮುಖ್ಯ ಉದ್ದೇಶವಾಗಿದೆ.
ಇದರೊಂದಿಗೆ ಅರ್ಹ ವಯೋಮಾನದ ಎಲ್ಲಾ ಮಕ್ಕಳನ್ನು ಗುರುತಿಸಿ, ನೇರವಾಗಿ ಶಾಲೆಗೆ ದಾಖಲಿಸುವುದು ಹಾಗೂ ಶಾಲೆಗೆ ಬರುತ್ತಿರುವ ಎಲ್ಲಾ ಮಕ್ಕಳನ್ನು ಶಾಲಾ ಪ್ರಾರಂಭದ ದಿನದಂದೇ ಶಾಲೆಗೆ ಹಾಜರಾಗುವಂತೆ ಮಾಡುವ ಉದ್ದೇಶದಿಂದ ದಾಖಲಾತಿ ಆಂದೋಲನವನ್ನು ಹಮ್ಮಿಕೊಳ್ಳಬೇಕಾಗಿರುತ್ತದೆ.
ಈ ಸಂಬಂಧ ಉಪನಿರ್ದೇಶಕರು(ಆಡಳಿತ ಮತ್ತು ಅಭಿವೃದ್ಧಿ) ರವರು ವೈಯಕ್ತಿಕ ಕಾಳಜಿ ವಹಿಸಿ ಈ ಕೆಳಕಂಡಂತೆ ವಿಶೇಷ ದಾಖಲಾತಿ ಆಂದೋಲನಕ್ಕೆ ಸಿದ್ಧತೆ ಮಾಡಿಕೊಂಡು ಕಾರ್ಯನಿರ್ವಹಿಸುವುದು ಎಂದು ಇಲಾಖೆ ತನ್ನ ಸುತ್ತೋಲೆಯಲ್ಲಿ ತಿಳಿಸಿದೆ.