ಶ್ರೀ ಡಿ.ದೇವರಾಜ ಅರಸು ಅವರ 108ನೇ ಜನ್ಮ ದಿನಾಚರಣೆ
ಕೊಪ್ಪಳ ಆಗಸ್ಟ್ 20 (ಕರ್ನಾಟಕ ವಾರ್ತೆ): ಹಿಂದುಳಿದ ವರ್ಗಗಳ ಧೀಮಂತ ನಾಯಕ, ಸಾಮಾಜಿಕ ಪರಿವರ್ತನೆಯ ಹರಿಕಾರ ಹಾಗೂ ಕರ್ನಾಟಕ ರಾಜ್ಯದ ಮಾಜಿ ಮುಖ್ಯಮಂತ್ರಿಗಳಾದ ದಿವಂಗತ ಶ್ರೀ ಡಿ.ದೇವರಾಜ ಅರಸು ಅವರ 108ನೇ ಜನ್ಮ ದಿನಾಚರಣೆ ಸಮಾರಂಭವು ಆಗಸ್ಟ್ 20ರಂದು ಕೊಪ್ಪಳ ಸಾಹಿತ್ಯ ಭವನದಲ್ಲಿ ನಡೆಯಿತು.
ಡಿ.ದೇವರಾಜ ಅರಸು ಅವರ ಭಾವಚಿತ್ರಕ್ಕೆ ಕೊಪ್ಪಳ ಶಾಸಕ ಕೆ.ರಾಘವೇಂದ್ರ ಹಿಟ್ನಾಳ ಅವರು ಪುಷ್ಪಾರ್ಚನೆ ಮಾಡಿ ಗೌರವ ನಮನ ಸಲ್ಲಿಸಿದರು. ಬಳಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಸಕರು, ದೇವರಾಜು ಅರಸು ಅವರು ಪರಿವರ್ತನೆಯ ಹರಿಕಾರರಾಗಿದ್ದಾರೆ. ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು ತತ್ತ್ವಪಾಲನೆಯಡಿ ಹತ್ತಾರು ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಿದ ಕೀರ್ತಿ ಅರಸು ಅವರಿಗೆ ಸಲ್ಲುತ್ತದೆ. ಸಾಮಾನ್ಯರು ಸಹ ಶಾಸಕ, ಸಂಸದರಾಗುವಂತೆ ಅವಕಾಶ ನೀಡಿದ ಮಹತ್ವದ ಕಾರ್ಯ ಮಾಡಿದ್ದಾರೆ.
12ನೇ ಶತಮಾನದಲ್ಲಿ ಸಾಮಾಜಿಕ ಕ್ರಾಂತಿ ಮಾಡಿದ ಬಸವಣ್ಣನವರ ಚಿಂತನೆಗಳನ್ನು ಮೈಗೂಡಿಸಿಕೊಂಡು, ಅವಕಾಶ ವಂಚಿತರಿಗೆ ಸಮಾನವಕಾಶ ನೀಡಿ ಮುಖ್ಯವಾಹಿನಿಗೆ ಬರುವಂತೆ ಮಾಡಿದರು. ಸಮಾಜದಲ್ಲಿ ಹಲವಾರು ಸುಧಾರಣೆ ತಂದರು. ನಮ್ಮ ದೇಶ ಹಾಗೂ ರಾಜ್ಯಕ್ಕೆ ಡಿ.ದೇವರಾಜ ಅರಸು ಅವರ ಕೊಡುಗೆ ಅಪಾರವಾಗಿದೆ ಎಂದು ಹೇಳಿದರು.
ಕಾರಟಗಿಯ ಸಿಎಂಎನ್ ಪದವಿಪೂರ್ವ ಕಾಲೇಜಿನ ಅಧ್ಯಾಪಕರಾದ ಡಾ.ಹನುಮಂತಪ್ಪ ಚಂದಲಾಪುರ ಅವರು ಡಿ.ದೇವರಾಜ ಅರಸು ಅವರ ಕುರಿತು ವಿಶೇಷ ಉಪನ್ಯಾಸ ನೀಡಿ, ಹಿಂದುಳಿದ ವರ್ಗ ಸೇರಿದಂತೆ ವಿವಿಧ ವರ್ಗಗಳ ಜನತೆಗೆ ನಾಯಕರಂತಿದ್ದ ಡಿ.ದೇವರಾಜ ಅರಸು ಅವರು ಸಾಮಾನ್ಯ ವ್ಯಕ್ತಿಯಲ್ಲ ಒಂದು ದೊಡ್ಡ ಶಕ್ತಿಯಾಗಿದ್ದಾರೆ. ಶೋಷಣೆಗೊಳಗಾದ, ತುಳಿತಕ್ಕೊಳಗಾದ, ಹಿಂದುಳಿದ ಜನರ ಏಳ್ಗೆಗಾಗಿ ಹಲವಾರು ಕೊಡುಗೆಗಳನ್ನು ನೀಡಿದ ಮಹಾನ್ ನಾಯಕರಾಗಿದ್ದಾರೆ. ಐತಿಹಾಸಿಕ ಭೂಸುಧಾರಣಾ ಕಾಯ್ದೆ ಜಾರಿ ತಂದ ಡಿ.ದೇವರಾಜ ಅರಸು ಅವರು ಈ ಕಾಯ್ದೆ ನನಗು ಅನ್ವಯಿಸುತ್ತದೆ ಎಂದು ತಮ್ಮ ಸ್ವಂತ 15 ಎಕರೆ ಜಮೀನನ್ನು ಕೂಲಿ ಕಾರ್ಮಿಕರಿಗೆ ಬಿಟ್ಟುಕೊಟ್ಟರು. ಉಳುವವನೇ ಒಡೆಯ ಕಾರ್ಯಕ್ರಮ ಅನುಷ್ಠಾನದ ಮೂಲಕ ಜಮೀನ್ದಾರಿ ಪದ್ಧತಿಯನ್ನು ಹೋಗಲಾಡಿಸಿ ಇತಿಹಾಸ ಸೃಷ್ಟಿಸಿದರು ಎಂದು ಡಿ.ದೇವರಾಜ ಅರಸು ಅವರ ಜನಪರ ಕಾರ್ಯಕ್ರಮಗಳ ಬಗ್ಗೆ ವಿವರಿಸಿದರು.
ಕಾರ್ಯಕ್ರಮದಲ್ಲಿ ನಗರಸಭೆ ಸದಸ್ಯರಾದ ವಿರುಪಾಕ್ಷಪ್ಪ ಮೊರನಾಳ, ಉಪವಿಭಾಗಾಧಿಕಾರಿಗಳಾದ ಕ್ಯಾಪ್ಟನ್ ಮಹೇಶ್ ಮಾಲಗಿತ್ತಿ, ಕೊಪ್ಪಳ ತಹಶೀಲ್ದಾರರಾದ ವಿಠಲ್ ಚೌಗಲಾ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ವಿಜಯಕುಮಾರ ಗೌಡ ಪಾಟೀಲ, ಮುಖಂಡರಾದ ಮಂಜುನಾಥ ಬೇಳೂರು, ಬಸವರಾಜ, ಈರಣ್ಣ ಕುಂಬಾರ ಸೇರಿದಂತೆ ಹಲವು ಗಣ್ಯರು, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ಉಪಸ್ಥಿತರಿದ್ದರು.
*ಸನ್ಮಾನ:* ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳಿಸಿದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್ ಪೂರ್ವ ವಸತಿ ನಿಲಯಗಳಲ್ಲಿನ ವಿದ್ಯಾರ್ಥಿಗಳಾದ ಆಂಜನೇಯ ಮಡಿವಾಳರ, ಯಮನೂರಪ್ಪ ಪುರದ, ಮುತ್ತುರಾಜ ತಳವಾರ, ಶೈಲಾ ಮಕ್ಕಳ್ಳಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳಿಸಿದ ಮೆಟ್ರಿಕ್ ನಂತರದ ವಸತಿ ನಿಲಯಗಳಲ್ಲಿನ ವಿದ್ಯಾರ್ಥಿಗಳಾದ ಬಾರಿಮರದಪ್ಪ ಜೆ., ಈರಮ್ಮ ಶರಣಪ್ಪ ಮತ್ತು ರಾಘವೇಂದ್ರ, ಈ ಏಳು ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು.
*ಮೆರವಣಿಗೆ:* ವೇದಿಕೆ ಕಾರ್ಯಕ್ರಮಕ್ಕೂ ಮೊದಲು ಶ್ರೀ ಗವಿಸಿದ್ದೇಶ್ವರ ಮಠದಿಂದ ಸಾಹಿತ್ಯ ಭವನದವರೆಗೆ ನಡೆದ ಡಿ.ದೇವರಾಜು ಅರಸು ಅವರ ಭಾವಚಿತ್ರದ ಮೆರವಣಿಗೆಗೆ ಸಂಸದರಾದ ಸಂಗಣ್ಣ ಕರಡಿ ಮತ್ತು ಜಿಲ್ಲಾಧಿಕಾರಿಗಳಾದ ನಲಿನ್ ಅತುಲ್ ಅವರು ಚಾಲನೆ ನೀಡಿದರು. ಈ ವೇಳೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಯಶೋಧಾ ವಂಟಗೋಡಿ, ಉಪವಿಭಾಗಾಧಿಕಾರಿಗಳು, ತಹಶೀಲ್ದಾರರು, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿಗಳು ಹಾಗೂ ಹಲವು ಗಣ್ಯರು ಇದ್ದರು.