ಪ್ರಜಾ ವೀಕ್ಷಣೆ ವಿಶೇಷ ಲೇಖನ :-
ಎರಡೂವರೆ ವರ್ಷಗಳ ಹಿಂದೆ ‘ಅನುಪಮ’ ಮಹಿಳಾ ಮಾಸಿಕದಲ್ಲಿ ಪ್ರಕಟವಾಗಿದ್ದ ನನ್ನ ಬರಹ. ಕೋಲ್ಕತ್ತದಲ್ಲಿ ನಡೆದ ಭೀಕರ ಪ್ರಕರಣದ ಸುದ್ದಿಗಳನ್ನು ಗಮನಿಸುವಾಗ ತಮಿಳುನಾಡಿನ ಬಾಲಕಿಯರಿಬ್ಬರ ಡೆತ್ ನೋಟ್ ಗಳು ನೆನಪಾದವು….
ತಮಿಳುನಾಡಿನ ಚೆನ್ನೈ ಹೊರವಲಯದ ಮಾಂಗಡು ಎಂಬಲ್ಲಿ ಬಾಲಕಿಯೊಬ್ಬಳು ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡ ಬಗ್ಗೆ ಡಿಸೆಂಬರ್ 20ರಂದು ವರದಿಯಾಗಿತ್ತು. ಆ ಡೆತ್ ನೋಟ್ ನಲ್ಲಿದ್ದ ಒಂದು ಸಾಲು, ‘ಹೆಣ್ಣಿಗೆ ಸುರಕ್ಷಿತವಾದ ಸ್ಥಳ ಎರಡೇ. ಒಂದು ತಾಯಿಯ ಗರ್ಭ, ಇನ್ನೊಂದು ಮಸಣ’.
ಸರಿಯಾಗಿ ಒಂದು ತಿಂಗಳ ಹಿಂದೆ ಅಂದರೆ ನವೆಂಬರ್ 20 ರಂದು ಅದೇ ತಮಿಳುನಾಡಿನ ಕರೂರ್ ಎಂಬ ಜಿಲ್ಲೆಯ ಬಾಲಕಿಯೊಬ್ಬಳು ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಳು. ಆಕೆಯ ಡೆತ್ ನೋಟ್ ನಲ್ಲಿ, ‘ದೌರ್ಜನ್ಯ ಮಾಡಿದವರು ಯಾರೆಂದು ಹೇಳಲು ಭಯವಾಗುತ್ತಿದೆ. ಚೆನ್ನಾಗಿ ಬದುಕುವ ಕನಸು ಕಂಡಿದ್ದೆ. ಬದುಕಿನ ತುಂಬ ಹಲವರಿಗೆ ಸಹಾಯ ಮಾಡುತ್ತಲೇ ಚೆನ್ನಾಗಿರಬೇಕೆಂದುಕೊಂಡಿದ್ದೆ. ಆದರೆ ಇಷ್ಟು ಬೇಗನೇ ಬದುಕು ಮುಗಿಸುತ್ತಿರುವೆ’ ಎಂದು ಬರೆದುಕೊಂಡಿದ್ದಳು.
ಡಿಸೆಂಬರ್ 17ರಂದು ಬೆಳಗಾವಿಯಲ್ಲಿ ನಡೆದ ಚಳಿಗಾಲದ ಅಧಿವೇಶನದಲ್ಲಿ ಕಲಾಪ ನಡೆಯುತ್ತಿದ್ದ ಸಂದರ್ಭ ಮಾಜಿ ಸ್ಪೀಕರ್, ಹಿರಿಯ ರಾಜಕಾರಣಿ ರಮೇಶ್ ಕುಮಾರ್ ನೀಡಿದ ಹೇಳಿಕೆಯೊಂದು ರಾಷ್ಟ್ರಮಟ್ಟದಲ್ಲಿ ವಿವಾದ ಸೃಷ್ಟಿಸಿತು. ರಮೇಶ್ ಕುಮಾರ್ ವಿರುದ್ಧ ಸ್ವತಃ ಕಾಂಗ್ರೆಸಿಗರೇ ಆಕ್ರೋಶ ವ್ಯಕ್ತಪಡಿಸಿದರು.
‘ಅತ್ಯಾಚಾರವನ್ನು ತಡೆಯಲು ಆಗದಿದ್ದರೆ ಮಲಗಿ ಎಂಜಾಯ್ ಮಾಡಬೇಕು’ ಎಂಬ ಇಂಗ್ಲಿಷ್ ಬರಹಗಾರ ಹೇಳಿಕೆಯೊಂದನ್ನು ರಮೇಶ್ ಕುಮಾರ್ ಉಲ್ಲೇಖ ಮಾಡಿದ್ದು.
2019ರ ಫೆಬ್ರವರಿಯಲ್ಲಿ ಆಗ ಸ್ಪೀಕರ್ ಆಗಿದ್ದ ಇದೇ ರಮೇಶ್ ಕುಮಾರ್, ಸ್ಪೀಕರ್ ಸ್ಥಾನದಲ್ಲಿ ತಮ್ಮ ಪರಿಸ್ಥಿತಿಯನ್ನು ಅತ್ಯಾಚಾರ ಸಂತ್ರಸ್ತೆಗೆ ಹೋಲಿಸಿ ಮಾತನಾಡಿದ್ದರು. ‘ಅತ್ಯಾಚಾರಕ್ಕೆ ಒಳಗಾದಾಕೆ ಹಾಗೇ ಸುಮ್ಮನೇ ಎದ್ದು ಹೋಗಿದ್ದರೆ ಏನೂ ಆಗುತ್ತಿರಲಿಲ್ಲ. ಆದರೆ ಆಕೆ ಕೇಸು ಕೊಟ್ಟ ಮೇಲೆ ತೊಂದರೆ ಶುರುವಾಗುತ್ತದೆ. ಪ್ರತೀ ಸಲ ವಿಚಾರಣೆಗೆ ಕರೆದು, ಅತ್ಯಾಚಾರ ಎಲ್ಲಿ ನಡೆಯಿತು, ಏನಾಯಿತು, ಯಾವ ಹೊತ್ತಿಗೆ ನಡೆಯಿತು ಎಂಬಿತ್ಯಾದಿ ಪ್ರಶ್ನೆಗಳನ್ನು ಕೇಳಿ ಮತ್ತೆ ಅದನ್ನೇ ನೆನಪಿ ಇನ್ನಷ್ಟು ಕಿರಿಕಿರಿ ಉಂಟುಮಾಡುತ್ತಾರೆ. ಇದರಿಂದ ನೂರು ಬಾರಿ ಅತ್ಯಾಚಾರಕ್ಕೊಳಗಾದ ಅನುಭವ ಆಗುತ್ತದೆ’ ಎಂಬರ್ಥದ ಮಾತು ಅದು.
ರಮೇಶ್ ಕುಮಾರ್ ಆಡಿದ ಎರಡೂ ಮಾತುಗಳು ಆ ಸಂದರ್ಭದಕ್ಕೆ ಬಂದು ಹೋದಂಥವು ಎಂದು ಕ್ಷಮೆ ಕೇಳಿಯೂ ಕೂಡ ಅವರು ಸಮರ್ಥಿಸಿಕೊಳ್ಳಬಹುದು. ಆದರೆ ಇದು ಕೇವಲ ಒಬ್ಬ ರಮೇಶ್ ಕುಮಾರ್ ರ ಮನಸ್ಥಿತಿ ಅಲ್ಲ. ಇಡೀ ಪುರುಷ ಸಮಾಜ ಹೇಳದೇ ತನ್ನೊಳಗೆ ಮುಚ್ಚಿಟ್ಟ ವಿಕೃತಿ. ಅದೇಕೆ ರಮೇಶ್ ಕುಮಾರ್ ಅವರಿಗೆ ಉದಾಹರಿಸಲು ಅತ್ಯಾಚಾರದ ವಿಚಾರವೇ ಆಹಾರವಾಗಿಬಿಡುತ್ತದೆ? ಬೇರೆ ಯಾವುದೂ ಉತ್ತಮ ಅನಿಸುವುದಿಲ್ಲವೇ? ಅವರಾಡಿದ ಎರಡೂ ಸಂದರ್ಭಗಳ ಮಾತಿನಲ್ಲಿ ಅತ್ಯಾಚಾರ ದೊಡ್ಡ ಸಂಗತಿಯೇನಲ್ಲ, ಅದನ್ನು ಹೆಣ್ಣುಗಳು ಸಹಿಸಿಕೊಂಡು ಮುಂದೆ ಸಾಗಬಹುದು ಎಂಬ ಅಸಮರ್ಥನೀಯ ಅರ್ಥವಿದೆ.
ರಾಜ್ಯದಲ್ಲೇ ದಿನಕ್ಕೆ ಇಂತಿಷ್ಟು ಅತ್ಯಾಚಾರ ಪ್ರಕರಣಗಳು ಸುದ್ದಿಯಾಗುತ್ತಿರುವಾಗಲೇ, ಮಹಿಳಾ ಸುರಕ್ಷತೆ, ಅಂಬೇಡ್ಕರ್ ವಿಚಾರಧಾರೆಯನ್ನು ಭಾಷಣಗಳಲ್ಲಿ ತೆರೆದಿಡುವ ರಮೇಶ್ ಕುಮಾರ್ ಅವರೇ ಇಂತಹ ಹೇಳಿಕೆಯನ್ನು ನೀಡುತ್ತಾರೆ ಎಂದಾದರೆ, ಮಹಿಳೆಗೆ ಕೊಟ್ಟ ಸ್ಥಾನಮಾನ, ಪುರುಷ ಪ್ರಧಾನ ಸಮಾಜ ಆಕೆಯನ್ನು ಸೀಮಿತಗೊಳಿಸಿದ ಬಗ್ಗೆ ಮರುಚಿಂತನೆ ನಡೆಸಬೇಕಿದೆ. ಒಂದು ದೇಶದ ಪ್ರಗತಿಯನ್ನು ಅಲ್ಲಿನ ಮಹಿಳೆಯರ ಸ್ಥಿತಿಗತಿಯಿಂದ ಅಳೆಯುತ್ತೇನೆ ಎಂದ ಅಂಬೇಡ್ಕರ್ ಅವರ ಮಾತಿಗೆ ರಮೇಶ್ ಕುಮಾರ್ ಸಹಿತ ಯಾರ ಬಳಿ ಉತ್ತರವಿದೆ?
ಮಹಿಳೆಗೆ ಇಂತಿಷ್ಟು ಮೀಸಲು ಎಂದು ಆಕೆಗೆ ಅವಕಾಶಗಳನ್ನು ಕೊಟ್ಟಿರಬಹುದು. ಆದರೆ ಆ ಅವಕಾಶ ಕೇವಲ ಸಮಾಜದಲ್ಲಿಯೇ ಹೊರತು ಪುರುಷ ಮನಸ್ಥಿತಿಯಲ್ಲಿ ಆ ಬಗೆಯ ಬದಲಾವಣೆ ಬಹುಮಟ್ಟಿಗೆ ಆಗಿಲ್ಲ ಎನ್ನುವುದಕ್ಕೆ ಅರಸು ಕಾಲದಿಂದಲೇ ರಾಜಕಾರಣದಲ್ಲಿ ಸಕ್ರಿಯರಾಗಿರುವ ಈ ರಮೇಶ್ ಕುಮಾರ್ ಅವರೇ ಸಾಕ್ಷಿ. ಇದು ದಲಿತರ ವಿಚಾರದಲ್ಲೂ ಅಷ್ಟೇ. ಮೀಸಲಾತಿ ಕೊಟ್ಟ ಮೇಲೂ ಇಂದಿನವರೆಗೂ ಅದನ್ನು ಮುಂದುವರಿಸಿಕೊಂಡು ಬರಬೇಕಾದ ಪರಿಸ್ಥಿತಿ, ಅದನ್ನು ಟೀಕಿಸುವ ಧ್ವನಿ ಹೆಚ್ಚುತ್ತಿರುವ ರೀತಿ, ಅದರ ನಡುವೆ ಅವರನ್ನು ಜಾತಿಯಾಚೆಗೆ ನೋಡುವವರ ಸಂಖ್ಯೆ ಕಡಿಮೆಯೇ.
ಸಮಾಜದ ಒಂದು ದೀರ್ಘಕಾಲದ ನ್ಯೂನತೆಯನ್ನು ನಿರ್ಮೂಲನೆ ಮಾಡುವುದು ಎಂದರೆ ಅದು ತಿಪ್ಪೆ ಸಾರಿಸುವ ಕೆಲಸ ಅಲ್ಲ. ಇದುವರೆಗೆ ಬಂದ ಸರ್ಕಾರ ಮಾಡಿದ್ದು ಇದನ್ನೇ. ರಸ್ತೆಯ ಗುಂಡಿ ಮುಚ್ಚಿದಂತೆ. ಪ್ರತಿಯೊಂದು ನ್ಯೂನತೆಯ ಮೂಲವೂ ಮನುಷ್ಯನ ಮನಸ್ಸು. ಆತನ ಮನಸ್ಥಿತಿ ಯಾವಾಗ ಬದಲಾಗುತ್ತದೋ ಆಗ ಸಮಾಜ ತಂತಾನೇ ಬದಲಾಗುತ್ತದೆ ಎಂಬ ತೀರಾ ಹಳೆಯ ವಿಚಾರವನ್ನು ಗಂಭೀರವಾಗಿ ಪರಿಗಣಿಸದೆ ಇರುವುದರಿಂದ ಈಗಲೂ ಇದನ್ನೇ ಹೇಳಬೇಕಾದ ಪರಿಸ್ಥಿತಿ ಬಂದಿದೆ.
ಅಧಿಕಾರದ ಅವಕಾಶ ದೊರೆತಾಗ ಆಯಾಯ ಸಮುದಾಯ ಅಭಿವೃದ್ಧಿ ಆಗುತ್ತದೆ ಎಂಬ ಕಲ್ಪನೆಯೊಂದು ನಮ್ಮಲ್ಲಿತ್ತು. ಅದು ಬರೀ ಕಲ್ಪನೆ ಅಷ್ಟೆ. ಒಬ್ಬನಿಗೆ ನೀಡುವ ಅಧಿಕಾರಕ್ಕಿಂತ ಇಡೀ ಸಮುದಾಯವನ್ನು ಸುಶಿಕ್ಷಿತವಾಗಿ ರೂಪುಗೊಳಿಸುವ ಬಗ್ಗೆ ಗಮನ ಹರಿಸುವುದು ಒಳಿತು. ತಮ್ಮ ಮಕ್ಕಳ ಬಗ್ಗೆ ಪೋಷಕರು ಎಷ್ಟೇ ಜಾಗರೂಕತೆ ವಹಿಸಿದರೂ ಅತ್ಯಾಚಾರಕ್ಕೆ ಬಲಿಯಾಗುತ್ತಿರುವ ಮಕ್ಕಳು, ಯುವತಿಯರ ಸಂಖ್ಯೆಯೇನೂ ಕಡಿಮೆಯಾಗಿಲ್ಲ. ಸಂಪೂರ್ಣ ಸಮಾಜವನ್ನು ಒಡೆದು ಕಟ್ಟುವುದಕ್ಕೆ ಯಾವ ಬಗೆಯ ದಾರಿ ಇದೆ ಎಂಬುದಕ್ಕೆ ಅಂದಿನ ಇಂದ ಇಂದಿನವರೆಗೆ ಯಾರಲ್ಲೂ ಸ್ಪಷ್ಟ, ಪರಿಣಾಮಕಾರಿ ಉತ್ತರ ಇಲ್ಲ.
ಆಯಾಯ ಕಾಲಘಟ್ಟದಲ್ಲಿ ಸಮಾಜ ಸುಧಾರಕರು ನಮ್ಮ ನಡುವೆ ಬಂದು ಹೋಗಿದ್ದಾರೆ. ಅವರೆಲ್ಲರೂ ಸಮಾಜ ಸುಧಾರಣೆಯನ್ನು ಮಾಡಿದವರೇ. ಆದರೆ ಅದರಿಂದ ಸುಧಾರಿಸಿಕೊಂಡವರೆಷ್ಟು, ಸುಧಾರಿಸಿಕೊಂಡವರು ಏನು ಮಾಡಿದರು ಎಂಬುದನ್ನು ಗಮನಿಸಿದರೆ ಇಂದಿನ ಸಾಮಾಜಿಕ ಸ್ಥಿತಿಯೇ ಫಲಿತಾಂಶವಾಗಿ ಕಾಣುತ್ತಿದೆ.
ಹಿಂದೆಲ್ಲ ಇಂತಹ ಸಮಾಜಘಾತಕ ಕೃತ್ಯಗಳಿಗೆ ಅವರಲ್ಲಿರುವ ಶಿಕ್ಷಣದ ಕೊರತೆಯೇ ಕಾರಣ ಎನ್ನಲಾಗುತ್ತಿತ್ತು. ನಂತರದ ದಿನಗಳಲ್ಲಿ ಶಿಕ್ಷಣ ಬಹುತೇಕರಿಗೆ ಲಭ್ಯವಾಗುತ್ತ ಬಂತು. ಈಗ ಎಲ್ಲರೂ ಸುಶಿಕ್ಷಿತರಾಗುತ್ತಿದ್ದಾರೆ. ಆದರೆ ಹಿಂದಿಗಿಂತ ಅತ್ಯಾಚಾರ ಪ್ರಕರಣಗಳು ಹೆಚ್ಚಾಗಿರುವುದಲ್ಲದೆ ಶಿಕ್ಷಣ ಪಡೆದವರು, ನೀಡುವವರೂ ಅದರಲ್ಲಿ ಭಾಗಿಗಳಾಗುತ್ತಿರುವುದಕ್ಕೆ ಏನೆನ್ನಲು ಸಾಧ್ಯ? ಶಿಕ್ಷಣ ಬದಲಾವಣೆ ತರುತ್ತದೆ ನಿಜ. ಆದರೆ ಅಂಕಗಳಿಕೆಯ, ಉದ್ಯೋಗದ ಉದ್ದೇಶದಲ್ಲಿ ಕಲಿಯುವ ಶಿಕ್ಷಣ, ಅದಕ್ಕೆ ತಕ್ಕಂತೆಯೇ ರೂಪುಗೊಂಡ ಪಠ್ಯಪುಸ್ತಕಗಳಿಂದ ಯಾವ ಬಗೆಯ ಬದಲಾವಣೆ ನಿರೀಕ್ಷಿಸಲು ಸಾಧ್ಯ?
ಬದುಕಿನ ಮೌಲ್ಯವನ್ನು, ಅಹಿಂಸೆ, ಸಮಾನತೆಯಂತಹ ಮೌಲ್ಯಗಳನ್ನು ಮನಸ್ಸಿನಲ್ಲಿ ಬೇರೂರಿಸುವಷ್ಟು ಒತ್ತಿ ಹೇಳುವ ಶಿಕ್ಷಣ ವ್ಯವಸ್ಥೆ ನಮ್ಮಲ್ಲಿಲ್ಲ. ವಿದ್ಯಾರ್ಥಿಗಳನ್ನು ರೂಪಿಸುವುದೆಂದರೆ ಏನು? ಇರುವ ಪಾಠವನ್ನು ಕಲಿಸಿಕೊಟ್ಟು ಪಾಸ್ ಆಗುವುದಕ್ಕೆ ಅನುಕೂಲ ಮಾಡಿಕೊಡುವುದು ಮಾತ್ರವೇ? ಈ ಬಗೆಯ ಆಲೋಚನೆಯಲ್ಲಿ ಬೆಳೆಯುವ ಶಿಕ್ಷಕರು, ಮಕ್ಕಳು, ನಾಳಿನ ಸಮಾಜದಲ್ಲಿ ಸಹಜ ಎನ್ನುವಂತೆಯೇ ಹಲವು ಕೃತ್ಯಗಳನ್ನು ಕಾಣುವುದರ ಜೊತೆಗೆ, ಅವುಗಳಲ್ಲಿ ತೊಡಗಿ, ಅವೆಲ್ಲವನ್ನೂ ‘ಸಾಮಾನ್ಯ’ವಾಗಿಸಿಬಿಡುತ್ತಾರೆ. ಇದು ನಮ್ಮ ಅರಿವಿಗೆ ಬಾರದೆ ನಮಗೆ ನಾವೇ ಬೆಳೆಸುತ್ತಿರುವ ವಿಷ ಸಮಾಜ. ಈ ನೆಲದ ನಾಳಿನ ಭವಿಷ್ಯ ಭ’ವಿಷ’ವಾಗಿ ಬೆಟ್ಟದಂತೆ ನಮ್ಮ ಮುಂದೆ ನಿಂತಿದೆ.
ಗಮನಿಸಬೇಕಾದ ಇನ್ನೊಂದು ಅಂಶವೆಂದರೆ ಇಲ್ಲಿ ದಾಖಲಾಗುವ ಅತ್ಯಾಚಾರ ಪ್ರಕರಣಗಳಲ್ಲಿ ಎಲ್ಲವೂ ನಿಜ ಆಗಿರುವುದಿಲ್ಲ. ಕೆಲವು ಸುಳ್ಳು ಆರೋಪವೂ ಇರುತ್ತವೆ. ಮತ್ತೆ ಕೆಲವು ಒಪ್ಪಿತ ಲೈಂಗಿಕ ಸಂಪರ್ಕವೂ ಆಗಿರುತ್ತದೆ. ಆದರೆ ಏನಾದರೂ ದುರುದ್ದೇಶವಿದ್ದರೆ, ನಂತರ ಅದನ್ನು ಅತ್ಯಾಚಾರ ಎಂದು ತಿರುಚುವುದು ಹೆಣ್ಣಿಗೆ ಕಷ್ಟದ ಕೆಲಸವೇನೂ ಅಲ್ಲ. ಹಲವು ಇಂತಹ ಪ್ರಕರಣಗಳು ದಾಖಲಾಗಿರುವ ಉದಾಹರಣೆಗಳಿರುವುದರಿಂದ ಇದನ್ನು ಉಲ್ಲೇಖಿಸದಿರಲು ಆಗದು. ಆದರೆ ಇದೇ ದೃಷ್ಟಿಯಲ್ಲಿ ಎಲ್ಲ ಪ್ರಕರಣಗಳನ್ನು ಅಳೆಯಲು ಸಾಧ್ಯವಿಲ್ಲ. ಹಲವಾರು ಭೀಕರ ರೇಪ್ ಆ್ಯಂಡ್ ಮರ್ಡರ್ ಪ್ರಕರಣಗಳು ನಮ್ಮ ಮುಂದಿವೆ. ತೀರಾ ಇತ್ತೀಚಿನವರೆಗೂ ಇಂತಹ ಭೀಕರ ಪ್ರಕರಣಗಳಿಗೆ ನಾವೆಲ್ಲ ಸಾಕ್ಷಿಯಾದವರೇ.
ತಮಿಳುನಾಡಿನ ಎರಡು ಹೆಣ್ಣು ಮಕ್ಕಳು ಬರೆದಿಟ್ಟ ಡೆತ್ ನೋಟ್ ನ ಅಂಶಗಳನ್ನು ಗಮನಿಸಿದರೆ ಮನುಷ್ಯನಾದವನ ಎದೆ ನಡುಗದೆ ಇರದು. ನೆಮ್ಮದಿಯಿಂದ ಅವರನ್ನು ಬದುಕಲೂ ಬಿಡದ ನಮ್ಮ ವ್ಯವಸ್ಥೆ, ಜೀವಂತವಿದ್ದಾಗಲೇ ತಮ್ಮ ಮೇಲೆ ದೌರ್ಜನ್ಯ ಎಸಗಿದ ಆರೋಪಿಗಳನ್ನು ಹೆಸರೆತ್ತಿ ಹೇಳುವ ಧೈರ್ಯವನ್ನೂ ಅವರಲ್ಲಿ ತುಂಬಿಸಲಿಲ್ಲ. ಇದೇ ವ್ಯವಸ್ಥೆಯೇ ತಾನೆ ಇನ್ನೂ ಮುಂದುವರೆಯಲಿರುವುದು? ಹಾಗಾದರೆ ಇನ್ನೆಷ್ಟು ಹೆಣ್ಣುಮಕ್ಕಳ ಡೆತ್ ನೋಟ್ ಗಳಿಗೆ ನಾವು ಕ್ರೂರ ಸಾಕ್ಷಿಗಳಾಗಬೇಕು?!