ಧಾರ್ಮಿಕ ಭಾವೈಕ್ಯತೆಯ ಸಂಕೇತವಾಗಿ “ಪುಸ್ತಕ ಗೂಡು” ಎಂಬ ವಿನೂತನ ಕಾರ್ಯಕ್ರಮ
ಕನಕಗಿರಿ : ತಾಲೂಕಿನ ಬಸರಿಹಾಳ ಗ್ರಾಮ ಪಂಚಾಯತಿ ವ್ಯಾಪ್ತಿಯ ಸೋಮಸಾಗರ ಗ್ರಾಮದ ಮುಸ್ಲಿಂ ಸಮುದಾಯದ ಪಿರಲು (ಆಲೈ) ದೇವರ ಮಸೀದಿಯಲ್ಲಿ ಧಾರ್ಮಿಕ ಭಾವೈಕ್ಯತೆಯ ಸಂಕೇತವಾಗಿ “ಪುಸ್ತಕ ಗೂಡು” ಎಂಬ ವಿನೂತನ ಕಾರ್ಯಕ್ರಮಕ್ಕೆ ಸೋಮವಾರ ತಾಲ್ಲೂಕು ಪಂಚಾಯಿತಿ ಪ್ರಭಾರ ಕಾರ್ಯನಿರ್ವಾಹಕ ಅಧಿಕಾರಿ ಕೆ. ರಾಜಶೇಖರ ಚಾಲನೆ ನೀಡಿದರು.
ಈ ಕುರಿತು ಮಾತನಾಡಿದ ಕಾರ್ಯನಿರ್ವಾಹಕ ಅಧಿಕಾರಿ ಕೆ. ರಾಜಶೇಖರ ಅವರು, ‘ಈ ಪುಸ್ತಕ ಗೂಡನ್ನು ಪಂಚಾಯಿತಿ ವ್ಯಾಪ್ತಿಯಲ್ಲಿ ಗ್ರಂಥಾಲಯ ಇಲ್ಲದೆ ಇರುವ ಕಡೆ ಸ್ಥಾಪಿಸಲು ಉತ್ತೇಜನ ನೀಡಿದ್ದು, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅಭ್ಯಾಸದಲ್ಲಿ ತೊಡಗುವ ಅಭ್ಯರ್ಥಿಗಳಿಗೆ ಒಂದು ಅದ್ಬುತ ವೇದಿಕೆಯನ್ನು ಕಲ್ಪಿಸುವ ಉದ್ದೇಶವನ್ನು ಒಳಗೊಂಡಿದ್ದು, ಭಾರತ ದೇಶವು ವಿಭಿನ್ನ ಭಾಷೆ, ನಾನಾ ಜನಾಂಗ, ವಿವಿಧ ಸಂಸ್ಕೃತಿಯನ್ನು ಗೌರವಿಸುವ ಹಾಗೂ ಜಾತಿ ಧರ್ಮದ ಯಾವುದೇ ಭೇದಭಾವವಿಲ್ಲದೆ ಅನ್ಯೋನ್ಯವಾಗಿ ಒಂದು ಕುಟುಂಬದಂತೆ, ಸಹೋದರರಂತೆ ಜೀವನ ಸಾಗಿಸುತ್ತಿದ್ದಾರೆ. ಇಂದು ಈ ಭ್ರಾತೃತ್ವ ಹಾಗೂ ಸಮಾನತೆಯ ಹಿನ್ನೆಲೆಯಲ್ಲಿ ಈ ಪುಸ್ತಕ ಗೂಡನ್ನು ಸ್ಥಾಪಿಸಲಾಗುತ್ತಿದ್ದು, ಇದರ ಸಂರಕ್ಷಣೆ, ಪೋಷಣೆ ನಮ್ಮೆಲ್ಲರ ಹೊಣೆಗಾರಿಕೆಯಾಗಿದೆ. ಇದು ಯಾವುದೇ ಜಾತಿ, ಧರ್ಮ ಎಂಬ ಭೇದ-ಭಾವವಿಲ್ಲದೆ ಓದುವ ಮನಸ್ಸಿಗೆ ಪುಸ್ತಕವನ್ನು ಒದಗಿಸುವ ಮಹತ್ವದ ಕಾರ್ಯಕ್ರಮವಾಗಿದೆ
ಎಂದು ಹೇಳಿದರು.
ರಾಜೀವ್ ಗಾಂಧಿ ಪಂಚಾಯತ್ ರಾಜ್ ಫೆಲೋಶಿಪ್ ಕಾರ್ಯಕ್ರಮದ ತಾಲೂಕಿನ ಫೆಲೋ ಆದ ಡಾ. ತಿಪ್ಪೇಸ್ವಾಮಿ ಎಂ. ಮಾತನಾಡಿ, ‘ಈ ಪುಸ್ತಕ ಗೂಡು ಅತಿ ಕಡಿಮೆ ವೆಚ್ಚದಲ್ಲಿ ಬೆಲೆಕಟ್ಟಲಾಗದ ಜ್ಞಾನವನ್ನು ಒದಗಿಸುವ ಹಿನ್ನೆಲೆಯಲ್ಲಿ ಓದುವ ಹೃದಯಕ್ಕೆ ಒಂದು ವೇದಿಕೆಯನ್ನು ಕಲ್ಪಿಸಿಕೊಡುತ್ತಿದೆ. ಇಂದು ಈ ಪವಿತ್ರವಾದ ಮಸೀದಿಯಲ್ಲಿ ಗೂಡನ್ನು ಸ್ಥಾಪಿಸುತ್ತಿರುವುದರಿಂದ ಎಲ್ಲಾ ಧರ್ಮಗಳ ಸಮಾನತೆ, ಗೌರವ, ಧಾರ್ಮಿಕ ಭಾವೈಕ್ಯತೆಯ ಸಂಕೇತವಾಗಿ ಮೂಡಿದ್ದು, ಈ ಗೂಡು ನಮ್ಮೆಲ್ಲರ ಸ್ವತ್ತು. ಇದನ್ನು ಉಳಿಸಿಕೊಂಡು, ಬೆಳಸಿಕೊಂಡು ಹೋಗುವುದು ನಮ್ಮೆಲರ ಹೊಣೆಗಾರಿಕೆ. ದಿನದ 24 ಗಂಟೆಗಳ ಕಾಲ ತೆರೆದಿಡುವ ಈ ಪುಸ್ತಕ ಗೂಡು ಜ್ಞಾನದ ಗೂಡು. ಸದಾ ಸ್ಪೂರ್ತಿದಾಯಕ ಹಾಗೂ ಉದ್ಯೋಗಕಾಂಕ್ಷಿಗಳಿಗೆ ಉತ್ತಮ ವೇದಿಕೆಯನ್ನು ಕಲ್ಪಿಸುವ ಉದ್ದೇಶದಿಂದ ಪ್ರಾರಂಭವಾಗಿದೆ’ ಎಂದರು.
ಈ ಕಾರ್ಯಕ್ರಮದಲ್ಲಿ ಬಸರಿಹಾಳ ಗ್ರಾಮ ಪಂಚಾಯಿತಿಯ ಪಿ.ಡಿ.ಓ ಬಸವರಾಜ ಸಂಕನಾಳ, ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು, ಸರ್ವ ಸದಸ್ಯರು, ಪಂಚಾಯಿತಿ ಸಿಬ್ಬಂದಿಗಳು, ಶಾಲಾ ಮಕ್ಕಳು, ಶಿಕ್ಷಕರು, ಗ್ರಾಮಸ್ಥರು ಹಾಜರಿದ್ದರು.