ಕುಕನೂರು : ತಾಲೂಕಿನ ಚಂಡೂರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ವೀರೇಶ ಕುರಿ ಸೋಂಪೂರ ಅವರು ರಚಿಸಿದ ಮಕ್ಕಳ ಕವನ ಸಂಕಲನ ‘ಮಿಠಾಯಿ ಮಾಮ’ ಕೃತಿಯು ರಾಜ್ಯ ಮಟ್ಟದ ‘ಜನ್ನಾ ಸನದಿ ಸಾಹಿತ್ಯ ಪ್ರಶಸ್ತಿ’ಗೆ ಆಯ್ಕೆಯಾಗಿದೆ.
ಕನ್ನಡ ನಾಡು ನುಡಿಗೆ ಸೇವೆ ಸಲ್ಲಿಸಿದ ಬರಹಗಾರರನ್ನು ಪ್ರೋತ್ಸಾಹಿಸಲು ಬೆಳಗಾವಿಯ ಬಿ.ಎ. ಸನದಿ ಸಾಂಸ್ಕೃತಿಕ ಪ್ರತಿಷ್ಠಾನವು, ಪ್ರತಿ ವರ್ಷವೂ ಆಯ್ದ ಒಂದು ಕೃತಿಗೆ ರಾಜ್ಯಮಟ್ಟದ ಜನ್ನಾ ಸನದಿ ಸಾಹಿತ್ಯ ಪ್ರಶಸ್ತಿಯನ್ನು ನೀಡುತ್ತಿದ್ದಾರೆ. ಈ ಪ್ರಶಸ್ತಿಯು ₹ 5000/- ನಗದು, ಹಾಗೂ ಪ್ರಶಸ್ತಿ ಫಲಕಗಳನ್ನು ಒಳಗೊಂಡಿರುತ್ತದೆ.
ವೀರೇಶ ಕುರಿ ವೃತ್ತಿಯಲ್ಲಿ ಶಿಕ್ಷಕರಾಗಿದ್ದು, ಮಕ್ಕಳ ಆಸಕ್ತಿ-ಅಭಿರುಚಿಗೆ ತಕ್ಕಂತೆ ಕವಿತೆಗಳನ್ನು ಬರೆಯುವಲ್ಲಿ ಹಿಡಿತ ಸಾಧಿಸಿದ್ದಾರೆ. ಮಕ್ಕಳಿಗೆ ಮುದ ನೀಡುವ ವೈವಿಧ್ಯಮಯ ವಸ್ತು-ವಿಷಯಗಳನ್ನು ಕುರಿತು ಸರಳ ಹಾಗೂ ಹಿತ-ಮಿತವಾದ ಭಾಷೆಯಲ್ಲಿ ಕವನಗಳನ್ನು ಹೊಸೆಯುವಲ್ಲಿ ಪರಿಣಿತಿ ಹೊಂದಿದ್ದಾರೆ. ಇವರು ಅನೇಕ ಕೃತಿಗಳನ್ನು ರಚಿಸಿದ್ದಾರೆ. ವಿವಿಧ ಸಂಘ ಸಂಸ್ಥೆಗಳು ಇವರ ಸಾಹಿತ್ಯ ಆಸಕ್ತಿಯನ್ನು ಗುರುತಿಸಿ ಹಲವಾರು ಪ್ರಶಸ್ತಿ ನೀಡಿ ಗೌರವಿಸಿವೆ.
ನ.30 ರಂದು ಬೆಳಗಾವಿಯ ಕನ್ನಡ ಸಾಹಿತ್ಯ ಭವನದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಯುವಕವಿ ವೀರೇಶ ಸೋಂಪೂರ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಪ್ರತಿಷ್ಠಾನದ ಕಾರ್ಯದರ್ಶಿ ಬಸವರಾಜ ಗಾರ್ಗಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.