LOCAL NEWS : ಸರಿಯಾದ ಸಮಯಕ್ಕೆ ಬಸ್ ಇಲ್ಲದ ಕಾರಣ ಆಕ್ರೋಶಗೊಂಡು ರಸ್ತೆ ತಡೆದು ವಿದ್ಯಾರ್ಥಿಗಳ ಪ್ರತಿಭಟನೆ
ಲಕ್ಷ್ಮೇಶ್ವರ : ಕೆ ಎಸ್ ಆರ್ ಟಿ ಸಿ ಬಸ್ ಟಿಕೆಟ್ ದರವನ್ನು ಅವೈಜ್ಞಾನಿಕವಾಗಿ ಏರಿಸಿರುವುದನ್ನು ವಿರೋಧಿಸಿ ಪಟ್ಟಣದ ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣದ ಮುಂಭಾಗದಲ್ಲಿ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ಕಾರ್ಯಕರ್ತರು ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ನಡೆಸಿದರು.
ರಾಜ್ಯ ಕಾರ್ಯಕಾರಿಣಿ ಸದಸ್ಯ ಅಭಿಷೇಕ ಉಮಚಗಿ ಮಾತನಾಡಿ, ರಾಜ್ಯ ಸರ್ಕಾರ ಏರಿಸಬೇಕಾಗಿದ್ದು ಬಸ್ ಟಿಕೇಟ್ ದರವನ್ನಲ್ಲ, ಬದಲಿಗೆ ಬಸ್ ಗಳ ಸಂಖ್ಯೆ ಏರಿಸಬೇಕಾಗಿದೆ.ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಯ ಹೆಸರಿನಲ್ಲಿ ಹಣ ಲೂಟಿ ಮಾಡುತ್ತಿದೆ. ವಿದ್ಯಾರ್ಥಿಗಳಿಗೆ ಸರಿಯಾದ ಬಸ್ ವ್ಯವಸ್ಥೆ ಇಲ್ಲ, ಸ್ಕಾಲರ್ಶಿಪ್ ಬಂದಿಲ್ಲ ಇನ್ನೂ ಅನೇಕ ತೊಂದರೆಗಳನ್ನು ಸರಿಪಡಿಸಬೇಕಾಗಿದೆ ಆದರೆ ಬಸ್ ಟಿಕೆಟ್ ದರ, ಹಾಲಿನ ದರ ಅಲ್ಲದೇ, ಅನೇಕ ರೀತಿಯಲ್ಲಿ ದರ ಏರಿಸಿ ಜನರಿಗೆ ಹೊರೆ ಮಾಡುತ್ತಿದೆ.
ಸರಕಾರದ ಐದು ಗ್ಯಾರೇಂಟಿ ಯೋಜನೆಯಲ್ಲಿ ಒಂದಾದ ಶಕ್ತಿ ಯೋಜನೆಯಿಂದ ವಿದ್ಯಾರ್ಥಿಗಳಿಗೆ ಸಮಯಕ್ಕೆ ಸರಿಯಾಗಿ ಬಸ್ ಸಿಗುವುದಿಲ್ಲ, ಬಸ್ ನಲ್ಲಿ ಆಸನ ಸಿಗದೆ ಬಸ್ಸಿನ ಬಾಗಿಲಲ್ಲಿ ನಿಂತು ಹೋಗುತ್ತಿದ್ದಾರೆ. ವಿದ್ಯಾರ್ಥಿಗಳು ಶಕ್ತಿ ಯೋಜನೆಯಿಂದ ಅನಾಹುತಕ್ಕೆ ಇಡಾಗಿದ್ದಾರೆ. ಈ ತೊಂದರೆ ಸರಿಪಡಿಸುದನ್ನು ಬಿಟ್ಟು ದರ ಏರಿಸುತ್ತಿದ್ದಾರೆ. ಇದನ್ನು ಸರ್ಕಾರ ಹಿಂಪಡಿಯಬೇಕು.ಇಲ್ಲವಾದಲ್ಲಿ ರಾಜ್ಯ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ನಿಂದ ವಿಧಾನ ಸೌಧಕ್ಕೆ ಮುತ್ತಿಗೆ ಹಾಕಲು ಮುಂದಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ನೂರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು. ವಾಹನ ಸಂಚಾರ ತಡೆದಿದ್ದರಿಂದ ಕೆಲಹೊತ್ತು ಟ್ರಾಫಿಕ್ ಜ್ಯಾಮ್ ಉಂಟಾಯಿತು.ಪಿಎಸ್ಐ ನಾಗರಾಜ ಗಡದ, ಅಪರಾಧ ವಿಭಾಗದ ಪಿಎಸ್ಐ ರಾಠೋಡ ನೇತೃತ್ವದಲ್ಲಿ ಬಿಗಿ ಬಂದೋಬಸ್ತ ಮಾಡಲಾಗಿತ್ತು.
ಪ್ರತಿಭಟನೆಯಲ್ಲಿ ತಾಲೂಕ ಸಂಚಾಲಕ ಪ್ರಕಾಶ ಕುಂಬಾರ, ಸಹ ಸಂಚಾಲಕ ವಿನಯ್ ಸಪಡ್ಲ, ನಗರ ಕಾರ್ಯದರ್ಶಿ ಅಭಿಷೇಕ ಉಮಚಗಿ, ಸಹ ಕಾರ್ಯದರ್ಶಿ ಯಶವಂತ ಶಿರಹಟ್ಟಿ, ಹೋರಾಟ ಪ್ರಮುಖ ಮನೋಜ್ ತಂಡಗೇರ, ಎಸ್ಡಿಎಫ್ ಪ್ರಮುಖ ವಿನಾಯಕ ಕುಂಬಾರ, ಅಭಿಷೇಕ ಇಸನಗೌಡರ್, ಕಾರ್ಯಕರ್ತರಾದ ವಿನಾಯಕ ಹುಂಬಿ, ಅರವಿಂದ ಇಚಾಂಗಿ, ಯುವರಾಜ ದುರ್ಗದ, ಈರಣ್ಣ ಕುಂಬಾರ, ಸಹ ಕಾರ್ಯದರ್ಶಿ ಕೀರಣ ಗುಡಗೇರಿ ಮತ್ತು ಕಾರ್ಯಕರ್ತರಿದ್ದರು.