BREAKING : KEAಯಿಂದ ಇಂಜಿನಿಯರಿಂಗ್ನ ಕರಡು ಸೀಟ್ ಮ್ಯಾಟ್ರಿಕ್ಸ್ ಪ್ರಕಟ..!
ಬೆಂಗಳೂರು : ಪ್ರಸಕ್ತ 2025-26ನೇ ಸಾಲಿನಲ್ಲಿ ಖಾಸಗಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ, ವಿಶ್ವವಿದ್ಯಾಲಯಗಳಲ್ಲಿ ಹೊಸ ಕೋರ್ಸುಗಳ ಪ್ರಾರಂಭ ಹಾಗೂ ಪ್ರವೇಶಾತಿ ಹೆಚ್ಚಳಕ್ಕೆ ನಿಯಮಾನುಸಾರ ಸರ್ಕಾರದಿಂದ ಅನುಮೋದನೆ, ನಿರಾಕ್ಷೇಪಣಾ ಪ್ರಮಾಣ ಪತ್ರಗಳನ್ನು ನೀಡಿರುವ ಕೋರ್ಸ್ಗಳನ್ನು ಅಳವಡಿಸಿ ಸಿದ್ಧಪಡಿಸಿರುವ ಕರಡು ಸೀಟ್ ಮ್ಯಾಟ್ರಿಕ್ಸ್ ಅನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (Karnataka Examination Authority-KEA) ತನ್ನ ವೆಬ್ ಸೈಟ್ ನಲ್ಲಿ ಪ್ರಕಟಿಸಿರುವ ಮಾಹಿತಿ ನೀಡಿದೆ.
ಈ ಬಗ್ಗೆ ಕರಡು ಸೀಟ್ ಮ್ಯಾಟ್ರಿಕ್ಸ್ ನಲ್ಲಿ ಲೋಪದೋಷವಿದ್ದಲ್ಲಿ ಅಥವಾ ಆಕ್ಷೇಪಣೆ, ಸಲಹೆಗಳಿದ್ದಲ್ಲಿ ಸಾರ್ವಜನಿಕರು ಅಥವಾ ಶಿಕ್ಷಣ ಸಂಸ್ಥೆಗಳು ನೇರವಾಗಿ ಸರ್ಕಾರದ ಕಾರ್ಯದರ್ಶಿ, ಉನ್ನತ ಶಿಕ್ಷಣ ಇಲಾಖೆ, 3ನೇ ಗೇಟ್, 6ನೇ ಮಹಡಿ, ಬಹುಮಹಡಿಗಳ ಕಟ್ಟಡ, ಡಾ. ಬಿ.ಆರ್.ಅಂಬೇಡ್ಕರ್ ವೀದಿ, ಬೆಂಗಳೂರು ಇಲ್ಲಿಗೆ ಲಿಖಿತವಾಗಿ ಅಥವಾ ಇ-ಮೇಲ್ ugseatmatrix2025@gmail.com ಗೆ 7 ದಿನಗಳೊಳಗಾಗಿ ಸಲ್ಲಿಸುವಂತೆ ಕೋರಲಾಗಿದೆ.
ಕಾಲಾವಕಾಶ ಮುಗಿದ ಬಳಿಕ ಸ್ವೀಕೃತವಾಗುವ ಯಾವುದೇ ಆಕ್ಷೇಪಣೆ / ಸಲಹೆಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ(Karnataka Examination Authority-KEA) ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ತಿಳಿಸಿದ್ದಾರೆ.
ಪ್ರಸ್ತುತ 2025-26ನೇ ಸಾಲಿಗೆ ರಾಜ್ಯದ ಸರ್ಕಾರಿ, ಅನುದಾನಿತ, ಅನುದಾನ ರಹಿತ ಇಂಜಿನಿಯರಿಂಗ್ ಕಾಲೇಜುಗಳು, ಸರ್ಕಾರಿ ಹಾಗೂ ಖಾಸಗಿ ವಿಶ್ವವಿದ್ಯಾಲಯಗಳಲ್ಲಿನ ಎಂಜಿನಿಯರಿಂಗ್ ಸ್ನಾತಕ ಕೋರ್ಸುಗಳಿಗೆ ಎಐಸಿಟಿಇ ಇವರಿಂದ ಪ್ರವೇಶಾತಿ ಅನುಮೋದನೆಯನ್ನು ನೀಡಿರುವ ಕಾಲೇಜುಗಳನ್ನು ಸೀಟ್ ಮ್ಯಾಟ್ರಿಕ್ಸ್ ನಲ್ಲಿ ಪರಿಗಣಿಸಲಾಗಿದೆ ಎಂದು ತಮ್ಮ ಪ್ರಕಟಣೆಯಲ್ಲಿ ವಿವರಿಸಲಾಗಿದೆ.
2025-26ನೇ ಶೈಕ್ಷಣಿಕ ಸಾಲಿನಲ್ಲಿ ವ್ಯತ್ತಿಪರ ಇಂಜಿನಿಯರಿಂಗ್ ಕೋರ್ಸುಗಳಿಗೆ ಸಂಬಂಧಿಸಿದಂತೆ ಎಐಸಿಟಿಇ ಅನುಮೋದನೆ ನೀಡಿರುವ ಕೋರ್ಸುಗಳಿಗೆ ಸಂಬಂಧಿಸಿದಂತೆ ಹೊಸ ಕೋರ್ಸುಗಳ ಪ್ರಾರಂಭ ಹಾಗೂ ಪ್ರವೇಶಾತಿ ಸಂಖ್ಯೆ ಹೆಚ್ಚಳಕ್ಕೆ ಸರ್ಕಾರದಿಂದ ನಿರಾಕ್ಷೇಪಣಾ ಪ್ರಮಾಣ ಪತ್ರ (NOC) ಪಡೆಯದ ಸಂಸ್ಥೆ, ಕಾಲೇಜುಗಳ ಕೋರ್ಸುಗಳನ್ನು ಕೈಬಿಡಲಾಗಿರುತ್ತದೆ. ಅಂತಹ ಕೋರ್ಸುಗಳಿಗೆ ಸರ್ಕಾರದಿಂದ ನಿರಾಕ್ಷೇಪಣಾ ಪ್ರಮಾಣ ಪತ್ರ (NOC) ಪಡೆದು, ಅದನ್ನು ಸಲ್ಲಿಸಿದಲ್ಲಿ ಅಂತಹ ಕಾಲೇಜುಗಳ ಕೋರ್ಸುಗಳನ್ನು ಅಂತಿಮ ಸೀಟ್ ಮ್ಯಾಟ್ರಿಕ್ಸ್ ನಲ್ಲಿ ಪರಿಗಣಿಸಲು ಕ್ರಮವಹಿಸಲಾಗುವುದು ಎಂದು ಸ್ಪಷ್ಟನೆ ನೀಡಿದೆ.